ಸಹಕಾರಿ ತತ್ವದಿಂದ ಮಾನವ ಕುಲದ ಉದ್ಧಾರ ಸಾಧ್ಯ: ಶಾಸಕ ಸಿ.ಟಿ ರವಿ

Update: 2018-09-17 18:39 GMT

ಚಿಕ್ಕಮಗಳೂರು ಸೆ.17 ಮಾನವ ಕುಲ ಭೂಮಿಯ ಮೇಲೆ ಸುಖ, ಸಂತೋಷ ಮತ್ತು ನೆಮ್ಮದಿಯಿಂದ ಬದುಕಬೇಕಾದರೆ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಸಹಕಾರಿ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಸಿ.ಟಿ.ರವಿ ಸಲಹೆ ಮಾಡಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಭಾನುವಾರ ನಡೆದ ಶ್ರೀ ವಾಸವಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸಂಸ್ಥೆಯ ಪದಾಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ನಮ್ಮ ಪೂರ್ವಿಕರ ಕಾಲದಲ್ಲಿ ಸಹಕಾರಿ ತತ್ವ ಮತ್ತು ಸಹಬಾಳ್ವೆ ಇತ್ತು. ಅಂದು ಊಟಕ್ಕೆ ಹೋಟೆಲ್‍ಗಳು ಇರಲಿಲ್ಲ. ಅದರ ಬದಲಿಗೆ ಧರ್ಮ ಛತ್ರಗಳಿದ್ದವು. ಪ್ರತಿಮನೆಗಳಲ್ಲೂ ದಾರಿಹೋಕ ಅತಿಥಿಗಳನ್ನು ಹುಡುಕಿ ಕರೆ ತಂದು ಅವರಿಗೆ ಊಟ ಬಡಿಸಿದ ನಂತರ ತಾವು ಊಟ ಮಾಡುವ ಪದ್ದತಿ ಇತ್ತು. ಅದರಿಂದಾಗಿ ಅಂದು ಸಮಾಜದಲ್ಲಿ ಹಸಿವಿರಲಿಲ್ಲ ಎಂದರು.

ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಎಲ್ಲವನ್ನೂ ನಾವು ಹಣದಿಂದಲೇ ಅಳೆಯುತ್ತಿದ್ದೇವೆ ಸಹಕಾರಿ ತತ್ವವನ್ನು ಕೈಬಿಟ್ಟಿದ್ದೇವೆ. ಇದರಿಂದಾಗಿ ಎಲ್ಲೆಡೆ ಸುಖ ಶಾಂತಿ ನೆಮ್ಮದಿ ಕಾಣೆಯಾಗಿದೆ ಎಂದು ವಿಷಾದಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಎ.ವಾಸುದೇವ ಮೂರ್ತಿ ಸಂಸ್ಥೆ ಬೆಳೆದು ಅಭಿವೃದ್ದಿ ಹೊಂದಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ರಜತ ಮಹೋತ್ಸವದ ಅಂಗವಾಗಿ ಸಂಘದ ಎಲ್ಲಾ ಮಾಜಿ ಮತ್ತು ಹಾಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಸಂಘದ ಮೊದಲ ಷೇರುದಾರರು, ಠೇವಣಿದಾರರು ಮತ್ತು ಗ್ರಾಹಕರನ್ನು ಗೌರವಿಸಲಾಯಿತು, ಉಪಾಧ್ಯಕ್ಷ ಕೆ.ಎಸ್.ಸತೀಶ್, ನಿರ್ದೇಶಕರಾದ ಎಸ್.ಎನ್.ರಾಮಣ್ಣ, ಎಂ.ಎಲ್.ನಾಗೇಂದ್ರ, ಎಂ.ಸಿ.ಶೇಖರ್, ಪಿ,ಎಸ್.ಶ್ರೀಧರ್, ವಿ.ನಿತಿನ್, ಎಂ.ಎ.ವಿಜಯೆಂದ್ರ ಮೂರ್ತಿ, ಜಯಂತಿ ಶೇಖರ್, ಕೆ.ಎನ್.ಮಂಗಳಾ, ಕಾರ್ಯನಿರ್ವಹಣಾಧಿಕಾರಿ ಸಿ.ಪಿ.ರಘುನಂದನ್ ಉಪಸ್ಥಿತರಿದ್ದರು.

ಸಮಾರಂಭದ ನಂತರ ಉಡುಪಿಯ ಭಾರ್ಗವಿ ನೃತ್ಯ ವೃಂದದ ಕಲಾವಿದರಿಂದ ನೃತ್ಯ ಪ್ರದರ್ಶನ ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News