ಡ್ರೈವಿಂಗ್ ಲೈಸೆನ್ಸ್, ಪಿಂಚಣಿ, ಅರ್ಜಿ ಸಲ್ಲಿಕೆಗೆ ಕಚೇರಿ ಅಲೆದಾಟಕ್ಕೆ ಮುಕ್ತಿ

Update: 2018-09-18 07:22 GMT

ಹೊಸದಿಲ್ಲಿ, ಸೆ.18: ದಿಲ್ಲಿಯ ಆಮ್ ಆದ್ಮಿ ಸರಕಾರ ಜಾರಿಗೊಳಿಸಿದ ಜನರ ಮನೆ ಬಾಗಿಲಿಗೆ ಸರಕಾರಿ ಸೇವೆಗಳನ್ನು ಒದಗಿಸುವ  ವಿನೂತನ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯಂಗವಾಗಿ ಸುಮಾರು 40 ಸೇವೆಗಳು- ವಾಹನ ಚಾಲನಾ ಪರವಾನಗಿ, ವಿವಾಹ ಪ್ರಮಾಣಪತ್ರ, ಪಿಂಚಣಿ, ನೀರಿನ ಸಂಪರ್ಕ ಅರ್ಜಿ ಸಲ್ಲಿಕೆ ಸೇವೆಗಳು ಮನೆ ಬಾಗಿಲಲ್ಲೇ ಲಭ್ಯವಾಗಲಿದೆ. ಇದಕ್ಕಾಗಿ ಯುವ ಸಹಾಯಕರ ತಂಡ ಸೇವೆಯಲ್ಲಿದ್ದು ತಮ್ಮ ಕೈಗಳಲ್ಲಿ ಟ್ಯಾಬ್, ಕ್ಯಾಮರಾ ಹಿಡಿದುಕೊಂಡು ಸ್ಕೂಟರುಗಳಲ್ಲಿ ನಗರದಲ್ಲಿ ಅತ್ತಿತ್ತ ಸಾಗುತ್ತಾ  ಸಾರ್ವಜನಿಕರ ಮನೆ ಬಾಗಿಲಿಗೆ ಯುವಕ ಯುವತಿಯರು ಸರಕಾರಿ ಸೇವೆಯೊದಗಿಸುತ್ತಿದ್ದಾರೆ.

 ಈ ಸೇವೆ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆ ತನಕ ಲಭ್ಯವಿದ್ದು ಸೇವಾ ವೆಚ್ಚ ಕೇವಲ ರೂ 50 ಆಗಿದೆ. ವಾರದ ಏಳು ದಿನಗಳೂ ಈ ಸೇವೆ ಲಭ್ಯವಿವೆ. ಇನ್ನು ಮೂರು ತಿಂಗಳೊಳಗಾಗಿ ಈ ಯೋಜನೆಯಂಗಾಗಿ ಲಭ್ಯ ಸೇವೆಗಳ ಸಂಖ್ಯೆಯನ್ನು 100ಕ್ಕೆ ಏರಿಸಲಾಗುವುದು. ಖಾಸಗಿ ಸಂಸ್ಥೆ ವಿಎಫ್‍ಎಸ್ ಗ್ಲೋಬಲ್ ಗೆ ಈ ಸೇವೆಗಾಗಿ  ಗುತ್ತಿಗೆ ನೀಡಲಾಗಿದೆ.

ಈ ಯೋಜನೆ ಆಡಳಿತದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಣ್ಣಿಸಿದ್ದಾರೆ. ಸರಕಾರ ಈ ಯೋಜನೆಗಾಗಿ ರೂ 15 ಕೋಟಿ ಮೀಸಲಿರಿಸಿದೆ. ಈ ಯೋಜನೆಗೆ ದೊರೆತ ಭಾರೀ ಪ್ರತಿಕ್ರಿಯೆ ಗಮನಿಸಿ ಸಾರ್ವನಿಕರಿಗೆ ಕರೆ ಮಾಡಲು ಲಭ್ಯ ದೂರವಾಣಿಗಳನ್ನು 50ರಿಂದ 300ಕ್ಕೆ ಏರಿಸಲಾಗಿದೆ ಹಾಗೂ 300 ಸಂಚಾರಿ ಸಹಾಯಕರು ಸಾರ್ವನಿಕರ ಸೇವೆ ಲಭ್ಯವಾಗಲಿದ್ದಾರೆ. ಕಾಲ್ ಸೆಂಟರ್ ನಲ್ಲಿ ಸುಮಾರು 40 ಸಿಬ್ಬಂದಿಗಳು  ಕಾರ್ಯನಿರತರಾಗಿರುತ್ತಾರೆಂದೂ ಮಾಹಿತಿ ನೀಡಲಾಗಿದೆ.

 ಬಿಜೆಪಿ ಈ ಯೋಜನೆಯನ್ನು ವಿಫಲಗೊಳಿಸಲು ಯತ್ನಿಸುತ್ತಿದೆ ಎಂದು ಎಎಪಿ ನಾಯಕ  ಕೈಲಾಶ್ ಗೆಹ್ಲೋಟ್ ಆರೋಪಿಸಿದ್ದಾರೆ. ಸರಕಾರದ ಸೆಂಟರ್ ಗೆ ಬಂದ ನೂರಾರು ಕರೆಗಳು ಬೇರೊಂದು ಕಾಲ್ ಸೆಂಟರ್ ನಿಂದ ಬಂದಿದೆ. ಈ ಸಂಖ್ಯೆಗೆ ಮತ್ತೆ ಕರೆ ಮಾಡಲು ಯತ್ನಿಸಿದರೆ ಅದು ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದ್ದಾರೆ. ಬಿಜೆಪಿ ಈ ಆರೋಪ ನಿರಾಕರಿಸಿ ಯೋಜನೆಯನ್ನು ಸರಿಯಾಗಿ ಜಾರಿ ಮಾಡದೆ ಅನಗತ್ಯವಾಗಿ ತನ್ನ ಮೇಲೆ ದೂರು ಹೊರಿಸಲಾಗುತ್ತಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News