ತುಮಕೂರು: ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ಎಐಟಿಯುಸಿ ಪ್ರತಿಭಟನೆ

Update: 2018-09-18 08:53 GMT

ತುಮಕೂರು, ಸೆ.18: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ, ಎಐಟಿಯುಸಿ ವತಿಯಿಂದ 'ಮಜ್ದೂರ್ ಬಚಾವೋ, ದೇಶ ಬಚಾವೋ, ಮೋದಿ ಹಠಾವೋ' ಎಂಬ ಘೋಷ ವಾಕ್ಯದಡಿಯಲ್ಲಿ ನಗರದ ಟೌನ್‌ಹಾಲ್ ವೃತ್ತದಿಂದ ಕೇಂದ್ರ ಸರಕಾರ ಬಿ.ಎಸ್.ಎನ್.ಎಲ್. ಕಚೇರಿವರೆಗೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಟೌನ್‌ಹಾಲ್ ನಲ್ಲಿ ಸಮಾವೇಶಗೊಂಡ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಗಿರೀಶ್ ,ಕೇಂದ್ರ ಸರಕಾರ ಕಾರ್ಮಿಕರ ಪರವಾಗಿದ್ದ ಸುಮಾರು 44 ಕಾನೂನುಗಳನ್ನು ಕೇವಲ ನಾಲ್ಕು ಲೇಬರ್ ಕೋಡ್ ಗಳಾಗಿ ವಿಂಗಡಿಸಿ, ಕಾರ್ಮಿಕ ವಿರೋಧಿ, ಮಾಲಕರ ಪರ ಧೋರಣೆಯನ್ನು ಅನುಸರಿಸುತ್ತಿದೆ. ಇದುವರೆಗೂ ಇದ್ದ ಕಾನೂನಿನಲ್ಲಿ ಒಂದು ಕಾರ್ಖಾನೆ, ಕಂಪನಿಯಲ್ಲಿ 20 ಕಾರ್ಮಿಕರಿದ್ದರೆ ಅವರಿಗೆ ಕಾರ್ಮಿಕ ಕಾಯ್ದೆಯ ಎಲ್ಲಾ ನಿಯಮಗಳು ಒಳಪಡುತ್ತಿದ್ದವು., ಆದರೆ ಕೇಂದ್ರದ ಹೊಸ ಕಾನೂನಿನ್ವಯ ಈ ಸಂಖ್ಯೆ 40ಕ್ಕೆ ಹೆಚ್ಚಳವಾಗಿದೆ. ಇದರಿಂದ ಸುಮಾರು 47 ಕೋಟಿಯಷ್ಟಿರುವ ಅಸಂಘಟಿತ ಕಾರ್ಮಿಕರು ಕಾರ್ಮಿಕ ಕಾಯ್ದೆಯಿಂದ ಹೊರಗೆ ಉಳಿಯಲಿದ್ದಾರೆ. ಮಾಲಕರು, ಕಾರ್ಮಿಕರಿಗೆ ಯಾವುದೇ ಸಂಬಂಧವಿಲ್ಲದಂತಾಗುತ್ತದೆ. ಆದ್ದರಿಂದ ಈ ಕಾನೂನು ರದ್ದಾಗಬೇಕು ಎಂಬುದು ನಮ್ಮ ಹೋರಾಟ ಎಂದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿ.ಎಸ್.ಟಿ.ಯಿಂದಾಗಿ ಕಾರ್ಮಿಕರ ಕಲ್ಯಾಣಕ್ಕಾಗಿ ಪಡೆಯುತ್ತಿದ್ದ ಸೆಸ್‌ಗಳು ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು ಇನ್ನಿತರ ಸೆಸ್‌ಗಳು ರಾಜ್ಯಕ್ಕೆ ಇಲ್ಲದಂತಾಗಿ, ಪ್ರತಿಯೊಂದಕ್ಕೂ ಕೇಂದ್ರದ ಮುಂದೆ ಕೈಕಟ್ಟಿ ನಿಲ್ಲಬೇಕಾಗುತ್ತದೆ. ಇದು ಲಕ್ಷಾಂತರ ಸಂಖ್ಯೆಯಲ್ಲಿರುವ ಕಟ್ಟಡ, ಬೀಡಿ ಇನ್ನಿತರ ಕಾರ್ಮಿಕರಿಗೆ ಅನ್ಯಾಯ ಮಾಡಿದಂತೆಯೇ ಸರಿ. ಅಲ್ಲದೆ ಕನಿಷ್ಠ ವೇತನ ಬೋರ್ಡ್ ತೀರ್ಮಾನದಂತೆ ಮಾಲಕರು ಕಾರ್ಮಿಕರಿಗೆ ಮಾಸಿಕ 14 ಸಾವಿರ ರೂ. ವೇತನ ನೀಡುವ ಬದಲು, ಬೋರ್ಡ್ ತೀರ್ಮಾನದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಇದಕ್ಕೆ ಕೇಂದ್ರ ಸರಕಾರ ಪರೋಕ್ಷವಾಗಿ ಬೆಂಬಲ ನೀಡಿದೆ ಎಂದು ಗಿರೀಶ ಆರೋಪಿಸಿದರು.

ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕಾಂತರಾಜು ಮಾತನಾಡಿ, ಕೇಂದ್ರ ಸರಕಾರದ ಇಂಧನ ಬೆಲೆ ಹೆಚ್ಚಳ ಜನಸಾಮಾನ್ಯರ ಅರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಪರೋಕ್ಷವಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಇದು ಕಾರಣವಾಗಿದೆ. ಇಂದಿನ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಕೇಂದ್ರ ಸರಕಾರ ಕನಿಷ್ಠ ವೇತನವನ್ನು 14 ಸಾವಿರ ರೂ.ಗಳಿಗೆ ಬದಲಾಗಿ, ಮಾಸಿಕ 18 ಸಾವಿರ ರೂ.ಗಳಿಗೆ ನಿಗದಿಪಡಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಟಿಯುಸಿಯ ಆಶ್ವಥನಾರಾಯಣ, ಸತ್ಯನಾರಾಯಣ, ರಮೇಶ್ ಶಿರಾ, ಮಧುಗಿರಿ ರಾಮಣ್ಣ, ತುರುವೇಕೆರೆ ಶಿವಾನಂದ್, ಗುಬ್ಬಿ ದೊಡ್ಡತಿಮ್ಮಯ್ಯ, ಇಂಡೋಸಿಸ್‌ನ ರವಿಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News