ಹತ್ಯೆಗೆ 1 ಕೋಟಿ ರೂ. ಸುಪಾರಿ: ಏಳು ಹಂತಕರ ಬಂಧನ

Update: 2018-09-18 10:41 GMT

ನಲ್ಗೊಂಡ, ಸೆ.18: ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ 23 ವರ್ಷದ ದಲಿತ ಯುವಕ ಪ್ರಣಯ್ ನನ್ನು  ಇತ್ತೀಚೆಗೆ ನಲ್ಗೊಂಡದ ಆಸ್ಪತ್ರೆಯ ಹೊರಗೆ ಪತ್ನಿ ಹಾಗೂ ತಾಯಿಯ ಎದುರೇ ಬರ್ಬರವಾಗಿ ಹತ್ಯೆಗೈದ ಪ್ರಕರಣವನ್ನು ಬೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಂತಕರನ್ನು ಬಿಹಾರದಿಂದ ಬಂಧಿಸಲಾಗಿದ್ದು, ನಲ್ಗೊಂಡದವರೆನ್ನಲಾದ ಕೆಲವರು ಐಎಸ್‍ಐ ನಂಟು ಹೊಂದಿದೆಯೆನ್ನಲಾದ ಬಿಹಾರದ ಗ್ಯಾಂಗ್ ಒಂದರ ಸದಸ್ಯರಿಗೆ ಈ ಕೊಲೆಯನ್ನು ವಹಿಸಿದ್ದರು ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆಯೆಂದು ತಿಳಿದು ಬಂದಿದೆ.

ಬಾಡಿಗೆ ಹಂತಕರಿಗೆ 1 ಕೋಟಿ ರೂ. ಆಫರ್ ನೀಡಲಾಗಿತ್ತು ಹಾಗೂ 18 ಲಕ್ಷ ರೂ. ಮುಂಗಡವಾಗಿ ಪಾವತಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಾಜಿ ಗುಜರಾತ್ ಸಚಿವ ಹರೇನ್ ಪಾಂಡ್ಯ ಕೊಲೆ ಪ್ರಕರಣದಲ್ಲಿ ಅಪರಾಧಿಯೆಂದು ಘೋಷಿಸಲ್ಪಟ್ಟು ಜೈಲು ಶಿಕ್ಷೆಗೊಳಗಾಗಿದ್ದ ಹಾಗೂ 2003ರಲ್ಲಿ ಬಿಡುಗಡೆಗೊಂಡಿದ್ದ ವ್ಯಕ್ತಿಯೊಬ್ಬನ ಮೇಲೂ ಪೊಲಿಸರು ಕಣ್ಣಿಟ್ಟಿದ್ದಾರೆ.

ಪ್ರಣಯ್ ಪತ್ನಿ ಅಮೃತವರ್ಷಿಣಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತನಗೆ ತನ್ನ ತಂದೆ ಮಾರುತಿ ರಾವ್ ಹಾಗೂ ಮಾವ ಶ್ರವಣ್ ರಾವ್ ಮೇಲೆ ಶಂಕೆಯಿದೆ ಎಂದು ಹೇಳಿದ್ದಳಲ್ಲದೆ, ತನ್ನ ತಂದೆ ಹೊಂದಿದ ಆಸ್ತಿಯ ಬಗ್ಗೆ ತನಿಖೆ ನಡೆಸಿ, ಅವರಿಗೆ ಹಲವಾರು ರಾಜಕಾರಣಿಗಳ ಜತೆ ನಂಟಿದೆ ಎಂದು ಆರೋಪಿಸಿದ್ದಾರೆ.

ಮಗಳು ಕೆಳ ಜಾತಿಯ ಯುವಕನೊಬ್ಬನನ್ನು ವಿವಾಹವಾಗಿದ್ದನ್ನು ಒಪ್ಪಲು ಸಿದ್ಧರಿಲ್ಲದ ಮಾರುತಿ ರಾವ್ ಬಾಡಿಗೆ ಹಂತಕರ ಮೂಲಕ ಪ್ರಣಯ್ ಹತ್ಯೆ ನಡೆಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ತನ್ನ ತಂದೆ ತನ್ನನ್ನು ಅಬಾರ್ಷನ್ ಗೆ ಒಳಪಡುವಂತೆ ಹಲವು ಬಾರಿ ಒತ್ತಾಯಿಸಿದ್ದಾಗಿ ಹೇಳುವ ಅಮೃತ ಪ್ರಣಯ್ ನ ಮಗುವೇ ತನ್ನ ಭವಿಷ್ಯ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News