ಕೊಡಗು ಮಹಾಹಾನಿ: ಸರಕಾರದಿಂದ 300 ಕೋಟಿ ರೂ.ಗಳ ಅನುದಾನ ನಿರೀಕ್ಷೆ- ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್

Update: 2018-09-18 11:50 GMT

ಮಡಿಕೇರಿ, ಸೆ.18: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾನಿಯಿಂದಾಗಿರುವ ನಷ್ಟದ ಕುರಿತು ಜಿಲ್ಲಾ ಪಂಚಾಯ್ತಿ ಮೂಲಕ ಈಗಾಗಲೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, 300 ಕೋಟಿ ರೂ.ಗಳ ಅನುದಾನವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್ ತಿಳಿಸಿದ್ದಾರೆ.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು, ಸಂಘ, ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಿದ್ದು, ಸಭೆ ಅಭಿನಂದನೆ ಸಲ್ಲಿಸುತ್ತದೆ ಎಂದರು. ಮುಂದಿನ ದಿನಗಳಲ್ಲಿ ಕೂಡ ಸಂಕಷ್ಟದಲ್ಲಿರುವ ಕೊಡಗನ್ನು ಕಟ್ಟಿ ಬೆಳೆಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ಇತರ ವಿಚಾರಗಳಚರ್ಚೆಯ ಸಂದರ್ಭ ಮಳೆ ಹಾನಿ ಪರಿಹಾರವಾಗಿ ಜಿಲ್ಲಾ ಪಂ. ಗೆ ಎಷ್ಟು ಅನುದಾನ ಬಂದಿದೆಯೆಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ನಮ್ಮಿಂದ ಸರ್ಕಾರಕ್ಕೆ ಸಮಗ್ರ ವರದಿಯೊಂದಿಗೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಪರಿಹಾರ ಕಾರ್ಯಗಳಿಗೆ ವಿನಿಯೋಗಿಸಲಾಗುವುದು. ಇಲ್ಲಿಯವರೆಗೆ ಜಿ.ಪಂ ಗೆ ಮಳೆ ಹಾನಿ ಪರಿಹಾರವೆಂದು ಯಾವುದೇ ಅನುದಾನ ಬಂದಿಲ್ಲವೆಂದು ಸ್ಪಷ್ಟಪಡಿಸಿದರು.

ಜಿಲ್ಲೆಗೆ ಮುಖ್ಯಮಂತ್ರಿಗಳು, ಸಚಿವರು ಹಾಗೂ ಕೇಂದ್ರ್ರದ ತಂಡ ಆಗಮಿಸಿದಾಗ ಜಿ.ಪಂ. ಸದಸ್ಯರನ್ನು ಕಡೆಗಣಿಸಲಾಗಿದೆ ಎಂದು ಕೆಲವು ಸದಸ್ಯರು ಆರೋಪಿಸಿದರು. ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಕೊಳ್ಳುವುದಕ್ಕಾದರೂ ನಮಗೆ ಅವಕಾಶ ನೀಡಬೇಕಾಗಿತ್ತು ಮತ್ತು ಸಭೆಗೆ ಆಹ್ವಾನಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು. 

ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂ. ಅಧ್ಯಕ್ಷ ಬಿ.ಎ.ಹರೀಶ್, ಎಲ್ಲರ ಪರವಾಗಿ ಒಟ್ಟು ಜಿಲ್ಲಾ ಪಂ. ವ್ಯಾಪ್ತಿಯಲ್ಲಿ 300 ಕೋಟಿಗಳಷ್ಟು ಆಸ್ತಿ ಪಾಸ್ತಿ ನಷ್ಟವಾಗಿರುವುದಾಗಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುದಾನದ ನಿರೀಕ್ಷೆಯಲ್ಲಿ ಜಿಲ್ಲಾ ಪಂ. ಇದ್ದು, ಸರ್ಕಾರದೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದರು.

ದಸರಾ ಅನುದಾನ ಸಂತ್ರಸ್ತರಿಗೆ ನೀಡಿ
ಮಡಿಕೇರಿ ದಸರಾ ಜನೋತ್ಸವಕ್ಕೆ 2 ಕೋಟಿ ರೂ.ಗಳನ್ನು ಕೋರಿ ಸರ್ಕಾರದ ಬಳಿ ನಿಯೋಗ ಹೋಗುವ ಬಗ್ಗೆ ಕೆಲವರು ನಿರ್ಧಾರ ಕೈಗೊಂಡಿದ್ದು, ಇದನ್ನು ವಿರೋಧಿಸುವುದಾಗಿ ಸದಸ್ಯೆ ಕೆ.ಪಿ. ಚಂದ್ರಕಲಾ ಸಭೆಯ ಗಮನ ಸೆಳೆದರು. ಮಡಿಕೇರಿ ತಾಲ್ಲೂಕು ಮಳೆಹಾನಿಯಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ಅದ್ಧೂರಿ ದಸರಾ ಆಚರಣೆಗಾಗಿ 2 ಕೋಟಿ ರೂ. ನೀಡಿ ಎಂದು ಯಾವ ಮುಖ ಹೊತ್ತು ಮುಖ್ಯಮಂತ್ರಿಗಳ ಬಳಿಗೆ ತೆರಳಿ ಅನುದಾನ ಕೋರುತ್ತಾರೆ ಎಂದು ಪ್ರಶ್ನಿಸಿದರು.

ಮಡಿಕೇರಿ ದಸರಾ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಅತ್ಯಂತ ಸರಳವಾಗಿ ನಡೆಯಲಿ. ದಸರಾ ಆಚರಣೆಗೆಂದು ಸರ್ಕಾರ ಒಂದು ವೇಳೆ ಅನುದಾನ ನೀಡಿದರೆ ಅದನ್ನು ಸಂತ್ರಸ್ತರ ಅಭ್ಯುದಯಕ್ಕಾಗಿ ಖರ್ಚು ಮಾಡಲಿ ಎಂದು ಚಂದ್ರಕಲಾ ಹೇಳಿದರು. 

ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಮಾತನಾಡಿ, ದಸರಾ ಅನುದಾನವನ್ನು ಸಂತ್ರಸ್ತರಿಗೆ ನೀಡಲಿ ಎಂದರು. ಸದಸ್ಯ ಪ್ರತ್ಯು ಮಾತನಾಡಿ, ಮಡಿಕೇರಿ ಸಂಕಷ್ಟದಲ್ಲಿದ್ದು,  ನಗರವನ್ನು ಪ್ರವೇಶಿಸುವಾಗ ಯಾವುದೇ ಹಬ್ಬದ ವಾತಾವರಣವಿಲ್ಲ. ಆದ್ದರಿಂದ ದಸರಾ ಆಚರಣೆ ಅದ್ಧೂರಿಗೆ ಬದಲು ಸರಳವಾಗಿ ನಡೆಯಲಿ ಎಂದರು. ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ, ದಸರಾ ಆಚರಣೆ ಸರಳವಾಗಿಯೇ ನಡೆಯಲಿದೆ ಎಂದು ಸಮರ್ಥಿಸಿಕೊಂಡರು.

ಚೆಕ್‍ಗಾಗಿ ಅಲೆದಾಟ
ಸದಸ್ಯೆ ಯಾಲದಾಳು ಪದ್ಮಾವತಿ ಮಾತನಾಡಿ, ಸರ್ಕಾರ ಪ್ರಾಥಮಿಕ ಪರಿಹಾರವಾಗಿ 3800 ರೂ.ಗಳ ಚೆಕ್‍ನ್ನು ನೀಡಿದ್ದು, ಇದನ್ನು ಪಡೆಯುವುದಕ್ಕಾಗಿ ಸಂತ್ರಸ್ತರು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಅಡ್ಡಿ ಆತಂಕವಿಲ್ಲದೆ ಚೆಕ್ ನೀಡುವಂತಾಗಬೇಕೆಂದು ಒತ್ತಾಯಿಸಿದರು.

ಅನೇಕರು ಮನೆ ಮತ್ತು ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಮನೆ ಹಾನಿಗೆ ಪರಿಹಾರ ವಿತರಿಸುವ ಸಂದರ್ಭ ಪೂರ್ಣ ಮನೆ ಹಾನಿ ಮತ್ತು ವಾಸ ಮಾಡಲಾಗದ ಮನೆಗೆ ಪರಿಹಾರವೆಂದು ವಿಂಗಡಿಸಿ ಹಣದ ಮೊತ್ತವನ್ನು ನೀಡಲಾಗುತ್ತಿದೆ. ಆದರೆ, ವಾಸವೇ ಮಾಡಲಾಗದ ಮನೆಯಲ್ಲಿ ಜನರು ಇರುವುದಾದರು ಹೇಗೆ. ಆದ್ದರಿಂದ ಇವುಗಳಲ್ಲು ಕೂಡ ಸಂಪೂರ್ಣ ನಾಶವಾದ ಮನೆಯನ್ನು ಗುರುತಿಸಿ ನಿಗದಿ ಪಡಿಸಿದ 1ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ನೀಡಬೇಕೆಂದು ಮನವಿ ಮಾಡಿದರು.

ಸದಸ್ಯೆ ಸರಿತಾ ಪೂಣಚ್ಚ ಮಾತನಾಡಿ, ನೆಲ್ಯಹುದಿಕೇರಿ ಭಾಗದಲ್ಲಿ ಹೊಳೆಯ ಬದಿ ವಾಸಿಸುವ ಕುಟುಂಬಗಳು ಪ್ರತಿ ವರ್ಷ ನೆರೆ ಹಾವಳಿಗೆ ಸಿಲುಕಿ ಸಂತ್ರಸ್ತರಾಗುತ್ತಿದ್ದಾರೆ.  ಇವರಿಗೆ ಪರ್ಯಾಯ ಜಾಗವನ್ನು ನೀಡಿ ಗುರುತಿಸಿದರೆ ತೆರಳಲು ಸಿದ್ಧರಿದ್ದಾರೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಬೋಪಣ್ಣ ಮಾತನಾಡಿ, ಹೊಳೆ ಬದಿಯಲ್ಲಿ ವಾಸಿಸುತ್ತಿರುವವರನ್ನು ಕಡ್ಡಾಯವಾಗಿ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಸದಸ್ಯ ಪ್ರತ್ಯು ಮಾತನಾಡಿ, ಇನ್ನು ಮುಂದೆ ಯಾವುದೇ ಕಾರಣಕ್ಕು ನದಿ ಅಥವಾ ಹೊಳೆ ದಡದಲ್ಲಿ ವಾಸಕ್ಕೆ ನೀಡಬಾರದೆಂದು ಒತ್ತಾಯಿಸಿದರು.

ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ಮಹಾಮಳೆಯಿಂದ ಕೊಡಗು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಜಿಪಂ ಅಧ್ಯಕ್ಷರು ವಿಶೇಷ ಸಭೆ ಕರೆದು ಸಾಂತ್ವನ ಹೇಳುತ್ತಾರೆ ಎನ್ನುವ ನಿರೀಕ್ಷೆಗಳಿತ್ತು. ಆದರೆ, ಅಧ್ಯಕ್ಷರು ಮಳೆ ಹಾನಿ ಕುರಿತು ಸಭೆಯನ್ನೆ ನಡೆಸಿಲ್ಲವೆಂದು ಟೀಕಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಹರೀಶ್, ಜಿಲ್ಲೆಗೆ ಮುಖ್ಯ ಮಂತ್ರಿಗಳು, ಸಚಿವರು ಹಾಗೂ ಇತರ ಜನಪ್ರತಿನಿಧಿಗಳು ಆಗಮಿಸಿದಾಗ ಪ್ರತಿಯೊಂದು ಸಭೆಯಲ್ಲು ಪಾಲ್ಗೊಂಡು ಸಂತ್ರಸ್ತರ ಕಷ್ಟ ನಷ್ಟಗಳನ್ನು ಮನವರಿಕೆ ಮಾಡಿಕೊಟ್ಟಿರುವುದಾಗಿ ಸಮರ್ಥಿಸಿಕೊಂಡರು.

ವಿಶೇಷ ಪ್ಯಾಕೇಜ್‍ಗೆ ಆಗ್ರಹ
ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಜನತೆ ತತ್ತರಿಸಿದ್ದು, ಇಲ್ಲಿನ ಕೃಷಿ ಬೆಳೆಗಳು ಹಾನಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಮತ್ತು ಇದಕ್ಕಾಗಿ ವಿಶೇಷ ಪ್ಯಾಕೇಜ್ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.

ಸದಸ್ಯ ಬಾನಂಡ ಪ್ರತ್ಯು ಮಾತನಾಡಿ, ರಾಜ್ಯ ಸರ್ಕಾರ ಕೊಡಗಿನ ಅತಿವೃಷ್ಟಿ ಹಾನಿಗೆ ಸಂಬಂಧಿಸಿದಂತೆ ಈಗಾಗಲೆ ಸಾಕಷ್ಟು ನೆರವನ್ನು ನೀಡಿದೆ. ಇದರೊಂದಿಗೆ ಸಾಲವನ್ನು ಮೂರು ತಿಂಗಳ ಬಳಿಕ ಪಾವತಿಸಲು ಅನುವು ಮಾಡಿಕೊಟ್ಟಿದೆ. ಆದರೆ, ಮೂರು ತಿಂಗಳ ಬಳಿಕ ಸಾಲ ಮರುಪಾವತಿ ಮಾಡುವುದಾದರು ಹೇಗೆಂದು ಪ್ರಶ್ನಿಸಿ, ಜಿಲ್ಲೆಯ ಕೃಷಿಕರು, ಬೆಳೆಗಾರರ ಎಲ್ಲಾ ಸಾಲ ಮನ್ನಾಕ್ಕೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿವಂತೆ ಮನವಿ ಮಾಡಿದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

ಭೂದಾನ ಮಾಡಿದ ಲತೀಫ್
ಕಾಂಗ್ರೆಸ್ ಸದಸ್ಯೆ ಸರಿತಾ ಪೂಣಚ್ಚ ಮಾತನಾಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಹಾಗೂ ಸದಸ್ಯ ಲತೀಫ್, ಮಹಾಮಳೆಯ ಸಂದರ್ಭ ಸಂಕಷ್ಟಕ್ಕೆ ಸಿಲುಕಿದ ಜನರನ್ನು ಸಾಹಸದಿಂದ ರಕ್ಷಿಸಿದ ಬಗ್ಗೆ ಸಭೆಯ ಗಮನ ಸೆಳೆದರು. ಇವರ ಶೌರ್ಯ ಅಭಿನಂದನಾಹರ್ವೆಂದು ಮೆಚ್ಚುಗೆ ವ್ಯಕ್ತಪಡಿಸಿ, ಸಂತ್ರಸ್ತರಿಗಾಗಿ ಒಂದು ಏಕರೆ ಜಾಗವನ್ನು ದಾನ ಮಾಡಿದ ಸದಸ್ಯ ಲತೀಫ್ ಅವರಿಗೆ ಅಭಿನಂದನೆ ಸಲ್ಲಿಸಿದರು. 

ಈ ಸಂದರ್ಭ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಪರಿಹಾರ ಸಾಮಾಗ್ರಿ ವಿತರಿಸುವ ಸಂದರ್ಭ ಪಕ್ಷಪಾತ ನಡೆದಿದೆಯೆಂದು ಸದಸ್ಯ ಲತೀಫ್ ಆರೋಪಿಸುವ ಮೂಲಕ ಸಭೆಯಲ್ಲಿ ಗದ್ದಲವೇರ್ಪಟ್ಟಿತು. ಪರಿಹಾರ ಕೇಂದ್ರ್ರಗಳಲ್ಲಿ ಸಂತ್ರಸ್ತರು ಪರಿಹಾರ ಸಾಮಗ್ರಿ ಕೋರಿದಾಗ, ಇದು ನಮ್ಮ ಎಂಪಿ ಕಳುಹಿಸಿದ ಸಾಮಾಗ್ರಿಗಳು, ನಿಮಗೆ ನೀಡಲು ಸಾಧ್ಯವಿಲ್ಲವೆಂದು ಬರಿಗೈಯಲ್ಲಿ ಕಳುಹಿಸಿದ ಪ್ರಸಂಗಗಳು ನಡೆದಿದೆ. ಜನರು ಸಂಕಷ್ಟದಲ್ಲಿ ಇರುವಾಗಲು ಪಕ್ಷಪಾತ ಮಾಡಬೇಕಾಗಿತ್ತೆ ಎಂದು ಲತೀಫ್ ಪ್ರಶ್ನಿಸಿದರು. ಸುಂಟಿಕೊಪ್ಪದ ಸಂತ್ರಸ್ತರಿಗಾಗಿ ಬಂದ ಪರಿಹಾರ ಸಾಮಾಗ್ರಿಗಳನ್ನು  ಸುಮಾರು 9 ಗೋದಾಮುಗಳಲ್ಲಿ  ಸಂಗ್ರಹಿಸಿಡಲಾಗಿತ್ತು. ಈ ಸಾಮಾಗ್ರಿ ಮೂರೇ ದಿನಗಳಲ್ಲಿ ಖಾಲಿಯಾಗಿದ್ದು, ನೈಜ ಸಂತ್ರಸ್ತರಿಗೆ ವಿತರಣೆಯಾಗಿಲ್ಲವೆಂದು ಅವರು ಆರೋಪಿಸಿದರು.

ಮುಂದೂಡಲ್ಪಟ್ಟ ಸಭೆ
ಕಾಂಗ್ರೆಸ್ ಸದಸ್ಯೆ ಕೆ.ಪಿ.ಚಂದ್ರಕಲಾ ಕೂಡ ಲತೀಫ್ ಮಾತಿಗೆ ಧ್ವನಿ ಗೂಡಿಸಿದರು. ಬಿಜೆಪಿ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಈ ವಿಚಾರವನ್ನು ಇಲ್ಲಿಗೆ ಬಿಡೋಣವೆಂದರು. ಸದಸ್ಯೆ ಮಂಜುಳಾ ಮಾತನಾಡಿ, ನೊಂದಿರುವ ಸಂತ್ರಸ್ತರು ಕಣ್ಣೀರು ಹಾಕುತ್ತಿರುವ ಇಂತಹ ಪರಿಸ್ಥಿತಿಯಲ್ಲು ಯಾಕೆ ರಾಜಕೀಯ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ಸದಸ್ಯರ ವಿರುದ್ಧ ತಿರುಗಿ ಬಿದ್ದರು. ಕಾಂಗ್ರೆಸ್ ಸದಸ್ಯರು ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಿದ್ದಂತೆ ಮಾತಿಗೆ ಮಾತು ಬೆಳೆದು ಸಭೆ ಗದ್ದಲದ ಗೂಡಾಯಿತು. ಈ ಸಂದರ್ಭ ಅಧ್ಯಕ್ಷ ಹರೀಶ್ ಭೋಜನ ವಿರಾಮ ಘೋಷಿಸಿ ಸಭೆಯನ್ನು  ಮುಂದೂಡಿದರು.

ಸಭೆಯ ಆರಂಭದಲ್ಲಿ ಅಧ್ಯಕ್ಷರ ಸೂಚನೆಯಂತೆ ಮಹಾಮಳೆಗೆ ಸಿಲುಕಿ ಮೃತಪಟ್ಟವರಿಗಾಗಿ ಮತ್ತು ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗಾಗಿ ಸಭೆ ಸಂತಾಪ ಸೂಚಿಸಿ, ಮೌನಾಚರಣೆ ಮಾಡಿತು.

ಸಭೆಯಲ್ಲಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಕಿರಣ್ ಕಾರ್ಯಪ್ಪ ಹಾಗೂ ಸರೋಜಮ್ಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News