ಕೊಡಗು ಜಿ.ಪಂ ಸದಸ್ಯ ಲತೀಫ್ ದಾನ ಮಾಡಿದ ಭೂಮಿಯಲ್ಲಿ ಮನೆಗಳ ನಿರ್ಮಾಣ: ಪಿ.ಯು.ಹನೀಫ್ ಸಖಾಫಿ

Update: 2018-09-19 12:00 GMT

ಮಡಿಕೇರಿ, ಸೆ.19 : ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ನಿರಾಶ್ರಿತರಿಗೆ ಜಾತಿ ಮತ ಭೇದವಿಲ್ಲದೆ ಸುಂಟಿಕೊಪ್ಪದಲ್ಲಿ ಜಿ.ಪಂ ಸದಸ್ಯ ಲತೀಫ್ ಅವರು ದಾನವಾಗಿ ನೀಡಿರುವ ಒಂದು ಏಕರೆ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಗುರಿ ಹೊಂದಿರುವುದಾಗಿ ಸುನ್ನಿ ಯುವಜನ ಸಂಘದ ಜಿಲ್ಲಾ ಸಮಿತಿಯ ಸುನ್ನಿ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಯು.ಹನೀಫ್ ಸಖಾಫಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪ ಮತ್ತು ಪ್ರವಾಹದ ಪರಿಸ್ಥಿತಿಗಳಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಎಸ್‍ವೈಎಸ್‍ ಸಾಂತ್ವನ ವಿಭಾಗ ನೆರವಿನ ಹಸ್ತವನ್ನು ನೀಡುವ ಮೂಲಕ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಿರುವುದಾಗಿ ತಿಳಿಸಿದರು.

ಸುನ್ನಿ ಮ್ಯಾನೇಜ್‍ಮೆಂಟ್ ಜಿಲ್ಲಾಧ್ಯಕ್ಷರು ಹಾಗೂ ಜಿ.ಪಂ ಸದಸ್ಯ ಸುಂಟಿಕೊಪ್ಪದ ಪಿ.ಎಂ.ಲತೀಫ್ ಅವರು ಒಂದು ಏಕರೆ ಜಾಗವನ್ನು ಜಿಲ್ಲಾ ಸಂಯುಕ್ತ ಖಾಝಿ ಹಾಗೂ ಅಖಿಲ ಭಾರತ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎ.ಪಿ.ಉಸ್ತಾದ್ ಅವರ ಮೂಲಕ ಎಸ್‍ವೈಎಸ್‍ಗೆ ಹಸ್ತಾಂತರಿಸಿದ್ದಾರೆ. ಲಭ್ಯ ಜಾಗದಲ್ಲಿ ಸರ್ಕಾರ ಮತ್ತು ಎಲ್ಲರ ಸಹಕಾರದೊಂದಿಗೆ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.

ನಿರಾಶ್ರಿತರಿಗೆ ಮನೆಗಳನ್ನು ಕಟ್ಟಿಕೊಡುವ ಜವಾಬ್ದಾರಿಯನ್ನು ಹೊತ್ತಿರುವ ಎಸ್‍ವೈಎಸ್ ಸಂಘಟನೆ, ಮಹಾಮಳೆಯಿಂದ ಹಾನಿಗೊಳಗಾದ 25 ಮನೆಗಳ ದುರಸ್ತಿ ಕಾರ್ಯ ನಡೆಸಲು ನಿರ್ಧಾರ ತಳೆದು, ಈಗಾಗಲೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಮಾಹಿತಿ ನೀಡಿದರು.

ಎಸ್‍ವೈಎಸ್‍ನ ಈ ಎಲ್ಲಾ ಸೇವಾ ಕಾರ್ಯಗಳಿಗೆ ಜಿಲ್ಲೆಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್, ಸುನ್ನಿ ಜಂಇಯ್ಯತ್ತುಲ್ ಮುಅಲ್ಲಿಮೀನ್,  ಸುನ್ನಿ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್, ಸುನ್ನಿ ಮಹಲ್ ಜಮಾಅತ್, ಅನಿವಾಸಿ ಸಂಘಟನೆಗಳಾದ ಕರ್ನಾಟಕ ಕಲ್ಚರಲ್ ಫೌಂಡೇಷನ್, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ನೆರವನ್ನು ಸ್ಮರಿಸಿದ ಹನೀಫ್ ಸಖಾಫಿ, ಮುಂದಿನ ಎಲ್ಲಾ ಸೇವಾ ಕಾರ್ಯಗಳಿಗೆ ಈ ಸಂಘಟನೆಗಳು ಸಹಕಾರದ ಭರವಸೆಯನ್ನು ನೀಡಿರುವುದಾಗಿ ತಿಳಿಸಿದರು.

ಜಿಲ್ಲೆಯ ವಿವಿದೆಡೆಗಳಲ್ಲಿ ಪ್ರಾಕೃತಿಕ ವಿಕೋಪದಿಂದ ತೊಂದರೆಗೊಳಗಾದ ಅರ್ಹ ಫಲಾನುಭವಿ ಕುಟುಂಬಗಳಿಗೆ ಸಂಘಟನೆಯು ಬ್ರಾಂಚ್‍ಗಳ ಮೂಲಕ ಸುಮಾರು 25 ಲಕ್ಷ ರೂ.ಗಳಿಗೂ ಹೆಚ್ಚಿನ ಪಡಿತರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಲಕ್ಷಾಂತರ ಮೌಲ್ಯದ ಬಟ್ಟೆ ಹಾಗೂ ಇತರೆ ಅವಶ್ಯಕ ವಸ್ತುಗಳನ್ನು ನೀಡಲಾಗಿದೆ ಎಂದು ತಿಳಿಸಿದರು. 

ಪಿ.ಎಂ.ಲತೀಫ್ ಅವರು ವಿಕೋಪದ ಸಂದರ್ಭ ಜೋಡುಪಾಲ ಹಾಗೂ ಮದೆನಾಡು ಪ್ರದೇಶಗಳಲ್ಲಿ ತೊಂದರೆಗೆ ಸಿಲುಕಿದವರ ರಕ್ಷಣೆಗಾಗಿ ತಮ್ಮ ತಂಡದೊಂದಿಗೆ ಜೀವದ ಹಂಗು ತೊರೆದು ಶ್ರಮಿಸಿದ್ದಾರೆ. ಇದರೊಂದಿಗೆ ಒಂದು ಏಕರೆ ಜಾಗವನ್ನು ನಿರ್ವಸತಿಗರ ಪುನರ್ವಸತಿಗೆ ದಾನವಾಗಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಎಸ್‍ವೈಎಸ್‍ನಿಂದ ಲತೀಫ್‍ರಿಗೆ ಸೇವಾ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕಾರ್ಯ ಉತ್ತಮ

ಪ್ರಾಕೃತಿಕ ವಿಕೋಪದ ಸಂದರ್ಭ ಜಿಲ್ಲೆಯ ಮತ್ತು ರಾಜ್ಯದ ಜನತೆ ಕೊಡಗಿನ ಸಂತ್ರಸ್ತರಿಗೆ ನೀಡಿದ ಸಹಾಯ ಹಸ್ತ ಅತ್ಯಂತ ಪ್ರಶಂಸನೀಯ. ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಕಾರ್ಯಚಟುವಟಿಕೆ ಮತ್ತು ಸ್ಪಂದಿಸಿದ ರೀತಿ ಸಂತ್ರಸ್ತರ ಸಂಕಷ್ಟಗಳನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಿದೆ ಎಂದು ಪಿ.ಯು.ಹನೀಫ್ ಸಖಾಫಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ವೈ.ಎಸ್.ಜಿಲ್ಲಾಧ್ಯಕ್ಷ ಎಂ.ವೈ.ಅಬ್ದುಲ್ ಹಫೀಳ್ ಸಅದಿ ಹಾಗೂ ಸುನ್ನಿ ಮಹಲ್ ಜಮಾಅತ್‍ನ ಪಿ.ಎ.ಯೂಸುಫ್ ಕೊಂಡಂಗೇರಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News