ಕೇಂದ್ರ ಸರಕಾರದಿಂದ ಕೊಡಗಿನ ಸಂತ್ರಸ್ತರ ನಿರ್ಲಕ್ಷ್ಯ: ಎ.ಕೆ.ಸುಬ್ಬಯ್ಯ ಆರೋಪ

Update: 2018-09-19 12:14 GMT

ಮಡಿಕೇರಿ, ಸೆ.19 : ಅತಿವೃಷ್ಟಿಯಿಂದ ಕೊಡಗಿನ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳು ಗುಡ್ಡ ಕುಸಿತದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿದ್ದರೂ, ಆ ವ್ಯಾಪ್ತಿಯ ಸಂತ್ರಸ್ತರಿಗೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರವನ್ನು ನೀಡದೆ ಕೇಂದ್ರ ಸರ್ಕಾರ ಅತ್ಯಂತ ಕ್ರೂರವಾಗಿ ನಡೆದುಕೊಂಡಿದೆಯೆಂದು ಹಿರಿಯ ರಾಜಕಾರಣಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎ.ಕೆ. ಸುಬ್ಬಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಮದೆನಾಡು, 2ನೇ ಮೊಣ್ಣಂಗೇರಿ ವಿಭಾಗಗಳಿಗೆ ಬುಧವಾರ ಭೇಟಿ ನೀಡಿ, ಗುಡ್ಡ ಕುಸಿತ ಮತ್ತು ಕೆಸರು ಮಣ್ಣಿನ ಪ್ರವಾಹಕ್ಕೆ ಸಿಲುಕಿ ಉಂಟಾಗಿರುವ ಆಸ್ತಿಪಾಸ್ತಿ ನಷ್ಟದ ಭೀಕರತೆಯನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಮಾಧ್ಯಮದೊಂದಿಗೆ ವ್ಯಕ್ತಪಡಿಸಿದರು.

ಹಿಂದೆಂದೂ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪಕ್ಕೆ ಜಿಲ್ಲೆಯ ಕೆಲ ಭಾಗಗಳು ತುತ್ತಾಗಿ, ಅಲ್ಲಿನ ನಿವಾಸಿಗಳ ಬದುಕು ಛಿದ್ರವಾಗಿದೆ. ಇಂತಹ ಭೀಕರ ಪರಿಸ್ಥಿತಿಗಳ ನಡುವೆ ನೆರವಿನ ಹಸ್ತ ಚಾಚಬೇಕಾಗಿದ್ದ ಕೇಂದ್ರ ಸರ್ಕಾರ ಚಿಕ್ಕಾಸನ್ನು ಕೊಡಗಿಗೆ ನೀಡಿಲ್ಲ. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಜನರು ಒಂದೆಡೆ, ಕೇಂದ್ರ ಸರ್ಕಾರವೆ ಮತ್ತೊಂದೆಡೆ ಎನ್ನುವ ಅಸಹನೀಯ ಪರಿಸ್ಥಿತಿ ನಿರ್ಮಾಣವಾಯಿತೆಂದು ಎ.ಕೆ. ಸುಬ್ಬಯ್ಯ ತೀಕ್ಷ್ಣವಾಗಿ ನುಡಿದರು.

ಪರಸರ ವಾದಿಗಳ ವಾದ ಒಪ್ಪಲಾಗದು: ಜಿಲ್ಲೆಯಲ್ಲಿ ಘಟಿಸಿದ ಅತಿವೃಷ್ಟಿ ಮತ್ತು ಗುಡ್ಡ ಕುಸಿತದಂತಹ ಘಟನೆಗಳಿಗೆ ಪರಿಸರವಾದಿಗಳು, ಹೋಂಸ್ಟೇ, ರೆಸಾರ್ಟ್‍ಗಳ ನಿರ್ಮಾಣ, ಮರಗಳ ನಾಶದಂತಹ ಕಾರಣಗಳನ್ನು ನೀಡುತ್ತಿದ್ದಾರೆ. ಆದರೆ, ಪ್ರಾಕೃತಿಕ ವಿಕೋಪಕ್ಕು ಪರಿಸರವಾದಿಗಳು ನೀಡುತ್ತಿರುವ ಕಾರಣಗಳಿಗು ಸಂಬಂಧವಿಲ್ಲ. ನೆರೆಯ ಕೇರಳ ಮತ್ತು ಕೊಡಗಿನಲ್ಲಿ ಕಾಣಿಸಿಕೊಂಡ ಅತಿವೃಷ್ಟಿ ಮತ್ತು ಪ್ರಾಕೃತಿಕ ವಿಕೋಪಗಳಿಗೆ ಭೂಮಿಯ ತಾಪಮಾನ ಹೆಚ್ಚಳ(ಗ್ಲೋಬಲ್ ವಾರ್ಮಿಂಗ್) ಕಾರಣವೆಂದು ಯುನೆಸ್ಕೋ ತನ್ನ ಅಭಿಪ್ರಾಯವನ್ನು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪರಿಸರ ವಾದಿಗಳ ವಾದವನ್ನು ಒಪ್ಪಲಾಗದೆಂದು ಎ.ಕೆ. ಸುಬ್ಬಯ್ಯ ಸ್ಪಷ್ಟಪಡಿಸಿದರು.

ಕೊಡಗಿನಲ್ಲಿ ಘಟಿಸಿದ ಪ್ರಾಕೃತಿಕ ವಿಕೋಪಗಳಿಗೆ ರೆಸಾರ್ಟ್, ಹೋಂಸ್ಟೇ, ಮರಗಳ ನಾಶದ ಕಾರಣವನ್ನು ಅರಣ್ಯ ಅಧಿಕಾರಿಗಳು ಮತ್ತು ಪರಿಸರವಾದಿಗಳು ಶಾಮೀಲಾಗಿ ನೀಡುತ್ತಿದ್ದಾರೆಂದು ಟೀಕಿಸಿದ ಎ.ಕೆ. ಸುಬ್ಬಯ್ಯ, ಪರಿಸರವಾದಿಗಳು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪವನ್ನು ಮಾನವ ನಿರ್ಮಿತವೆಂದು ಬಿಂಬಿಸುವ ಹಠಮಾರಿ ಪ್ರಯತ್ನ ನಡೆಸುತ್ತಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿ, ಇಂತಹ ಧೋರಣೆ ಕೈಬಿಡಬೇಕು. ಜಿಲ್ಲೆಯಲ್ಲಿ ನಡೆದಿರುವ ಕಂಡು ಕೇಳರಿಯದ ವಿಕೋಪಗಳು ಮಾನವ ನಿರ್ಮಿತವಲ್ಲ, ಬದಲಾಗಿ ಸಹಜವಾಗಿ ನಡೆದ ವಿಕೋಪಗಳೇ ಆಗಿದೆಯೆಂದು ನುಡಿದರು.

ಜಿಲ್ಲೆಯಲ್ಲಿ ನಡೆದ ಪ್ರಾಕೃತಿಕ ವಿಕೋಪದ ಸಂದರ್ಭ ಜಿಲ್ಲಾಡಳಿತ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿರುವ ಬಗ್ಗೆ ಇದೇ ಸಂದರ್ಭ ಎ.ಕೆ.ಸುಬ್ಬಯ್ಯ ಶ್ಲಾಘಿಸಿದರು.

ಗುರುತಿನ ಚೀಟಿಗೆ ಒತ್ತಾಯ: ಎ.ಕೆ. ಸುಬ್ಬಯ್ಯ ಅವರು ಹಿರಿಯ ಕಾಂಗ್ರೆಸ್ಸಿಗ ಹಾಗೂ ಉದ್ಯಮಿ ಪಿ.ಸಿ. ಹಸೈನಾರ್ ಮತ್ತು ವಕೀಲ ಕುಂಞ ಅಬ್ದುಲ್ಲ ಅವರೊಂದಿಗೆ ಅತಿವೃಷ್ಟಿ ಹಾನಿ ಪಿಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಲ್ಲದೆ, ಕೊಟ್ಟಮುಡಿಯ ಮದ್ರಸದ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭ ಅಲ್ಲಿನ ನೋಡಲ್ ಅಧಿಕಾರಿಗಳು ಕೇಂದ್ರದಲ್ಲಿರುವ ಸಂತ್ರಸ್ತರಿಗಷ್ಟೆ ಗುರುತಿನ ಚೀಟಿ ನೀಡುತ್ತಿದ್ದು, ಹೊರ ಭಾಗದಲ್ಲಿ ಶಿಕ್ಷಣ ಪಡೆಯುತ್ತಿರುವ ಸಂತ್ರಸ್ತರ ಮ್ಕಕಳಿಗೆ ಗುರುತಿನ ಚೀಟಿ ನೀಡದಿರುವ ಅಂಶ ಬೆಳಕಿಗೆ ಬಂದಿತು. ಇದಕ್ಕೆ ಎ.ಕೆ. ಸುಬ್ಬಯ್ಯ ಪ್ರತಿಕ್ರಿಯಿಸಿ, ಸಂತ್ರಸ್ತರು ಮತ್ತು ಅವರ ಮಕ್ಕಳಿಗೆ ಗುರುತಿನ ಚೀಟಿಯನ್ನು ನೀಡಬೇಕೆಂದು ಆಗ್ರಹಿಸಿದರು.

ಆಸ್ತಿಪಾಸ್ತಿಗಳನ್ನು ಕಳೆದುಕೊಂಡ ಸಂತ್ರಸ್ತರ ಮಕ್ಕಳು, ಅಗತ್ಯವಾದ ಗುರುತಿನ ಚೀಟಿ ಇಲ್ಲದಿರುವುದರಿಂದ ಶಿಕ್ಷಣ ಶುಲ್ಕದಿಂದ ವಿನಾಯಿತಿ , ಉಚಿತ ಆಹಾರ ವ್ಯವಸ್ಥೆಗಳನ್ನು ಪಡೆದುಕೊಳ್ಳಲು ತೊಂದರೆ ಎದುರಿಸುತ್ತಿರುವ ವಿಚಾರ ಈ ಸಂದರ್ಭ ತಿಳಿದು ಬಂದಿತು.

22 ಕುಟುಂಬಳಿಗೆ ನೆರವು: ಕಾಂಗ್ರೆಸ್ ಪ್ರಮುಖರು ಹಾಗೂ ಉದ್ಯಮಿ ಪಿ.ಸಿ. ಹಸೈನಾರ್ ಅವರ ನೆರವಿನಿಂದ ಮದ್ರಸದ ನಿರಾಶ್ರಿತ ಕೇಂದ್ರ್ರದಲ್ಲಿನ 22 ಕುಟುಂಬಕ್ಕೆ ತಲಾ 2 ಸಾವಿರ ರೂ.ಗಳ ನೆರವನ್ನು ಎ.ಕೆ. ಸುಬ್ಬಯ್ಯ ಅವರು ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News