ಭಗವದ್ಗೀತೆ ಸುಟ್ಟ ವರದಿ ಕೇಳಿ ದುಃಖವಾಗಿದೆ: ಪೇಜಾವರ ಶ್ರೀ

Update: 2018-09-19 13:02 GMT

ಬೆಂಗಳೂರು, ಸೆ.19: ಇತ್ತೀಚಿಗೆ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿ ಭಗವದ್ಗೀತೆ ಸುಟ್ಟ ವರದಿ ಕೇಳಿ ದುಃಖವಾಗಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಬುಧವಾರ ನಗರದ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನೂತನ ಕಟ್ಟಡದ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೊಸದಿಲ್ಲಿಯಲ್ಲಿ ಕೆಲ ಕಿಡಿಗೇಡಿಗಳು ಸಂವಿಧಾನ ಸುಟ್ಟು ಹಾಕಿದ್ದರು. ಇದನ್ನು ಖಂಡಿಸಿ ಎರಡು ದಿನಗಳ ಹಿಂದೆ ದಲಿತ ಸಂಘಟನೆಗಳ ಮುಖಂಡರು ಹುಬ್ಬಳ್ಳಿಯಲ್ಲಿ ಭಗವದ್ಗೀತೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀ, ಭಗವದ್ಗೀತೆ ಸುಟ್ಟಿರುವುದು ದುಃಖಕರ ಸಂಗತಿ. ಇದರಲ್ಲಿರುವ ಸಂದೇಶ ಅರ್ಥ ಮಾಡಿಕೊಳ್ಳದವರು ಈ ರೀತಿ ನಡೆದುಕೊಂಡಿದ್ದಾರೆ. ಭಗವದ್ಗೀತೆಯಲ್ಲಿ ಯಾವುದೇ ರೀತಿಯಲ್ಲಿ ಮಾನವ ಹಾನಿಕಾರಕ ಸಂದೇಶಗಳಿಲ್ಲ ಎಂದು ನುಡಿದರು.

ಸಂಸ್ಕೃತ ಒಂದು ವರ್ಗಕ್ಕೆ, ಒಂದು ಗುಂಪಿಗೆ ಸೇರಿದ ಭಾಷೆ ಎನ್ನುತ್ತಾರೆ. ಆದರೆ, ಈ ಭಾಷೆಯನ್ನು ಪುರಾತನ ಕಾಲದಿಂದಲೂ ಎಲ್ಲ ಜಾತಿ, ಪಂಗಡದವರು ಬಳಕೆ ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದ ಪುರಾವೆಗಳು ಇವೆ. ಈಗಲಾದರೂ, ಸಂಸ್ಕೃತ ಭಾಷೆ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು ಎಂದರು.

ಸಂಸ್ಕೃತ ದೇವ ಭಾಷೆ ಎನ್ನುತ್ತಾರೆ. ಆದರೆ, ಈ ಭಾಷೆ ಲೋಕ ಭಾಷೆ ಆಗಬೇಕು. ಹೀಗಾದರೆ, ಮಾತ್ರ ಸಂಸ್ಕೃತ ಶಾಶ್ವತವಾಗಿ ಉಳಿಸಲು ಸಾಧ್ಯ. ಸಂಸ್ಕೃತ ಭಾಷೆಯಲ್ಲಿ ಅತ್ಯುತ್ತಮ ಸಾಹಿತ್ಯ, ಮಹಾಕಾವ್ಯ, ತರ್ಕ, ವಿಜ್ಞಾನ, ಅಧ್ಯಾತ್ಮ, ಆಯುರ್ವೇದಕ್ಕೆ ಸಂಬಂಧಿಸಿದ ಹಲವಾರು ಗ್ರಂಥಗಳ ರಚನೆಯಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News