ಹಾನಗಲ್: ಗಣೇಶೋತ್ಸವ ಮೆರವಣಿಗೆ ವೇಳೆ ಗುಂಪು ಘರ್ಷಣೆ; ಮಹಿಳೆಯರು, ಪೊಲೀಸರ ಸಹಿತ 22ಕ್ಕೂ ಅಧಿಕ ಮಂದಿಗೆ ಗಾಯ

Update: 2018-09-19 14:05 GMT

ಹಾವೇರಿ, ಸೆ.19: ಇಲ್ಲಿನ ಹಾನಗಲ್ ತಾಲೂಕಿನ ಹಿರೂರ್‌ನಲ್ಲಿ ಸೋಮವಾರ ರಾತ್ರಿ ಗಣೇಶೋತ್ಸವ ಮೆರವಣಿಗೆ ಸಂದರ್ಭ ಉಂಟಾದ ಗುಂಪು ಘರ್ಷಣೆಯಲ್ಲಿ ಮಹಿಳೆಯರು, ಪೊಲೀಸರ ಸಹಿತ 22ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಈ ಮಧ್ಯೆ 3 ಪ್ರತ್ಯೇಕ ಪ್ರಕರಣಗಳಲ್ಲಿ ಹಲವು ಮಂದಿಯ ವಿರುದ್ಧ ಹಾವೇರಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಾವೇರಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಹಿರೂರ್ ಎಂಬಲ್ಲಿನ ಮಸೀದಿಯೊಂದರ ಮುಂದೆ ಸೋಮವಾರ ರಾತ್ರಿ ಸುಮಾರು 10 ಗಂಟೆಗೆ ಗಣೇಶೋತ್ಸವದ ಮೆರವಣಿಗೆಯ ಸಂದರ್ಭ ಗುಂಪು ಘರ್ಷಣೆ ಸಂಭವಿಸಿತು ಎನ್ನಲಾಗಿದೆ. ಇದರಿಂದ ಕ್ಷಣಾರ್ಧದಲ್ಲಿ ಊರಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ದುಷ್ಕರ್ಮಿಗಳು ಅಂಗಡಿ ಮುಂಗಟ್ಟು, ಮನೆಗಳಿಗೆ ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಕೆಲವು ವಾಹನಗಳನ್ನು ಜಖಂಗೊಳಿಸಿದ್ದಾರಲ್ಲದೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಅಲ್ಲದೆ ಹಲವು ಮನೆಗಳಿಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಯುಧದಿಂದ ಹಲ್ಲೆ ನಡೆಸಿ ಗರ್ಭಿಣಿಯರು, ವೃದ್ಧರ ಸಹಿತ 15ಕ್ಕೂ ಅಧಿಕ ಮಂದಿಯನ್ನು ಗಾಯಗೊಳಿಸಿದ್ದಾರೆ ಎಂದು ತಿಳಿದುಬಂದಿದ್ದು, ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘರ್ಷಣೆಯಲ್ಲಿ 9 ಮಂದಿ ಪೊಲೀಸರೂ ಗಾಯಗೊಂಡಿದ್ದಾರೆ.

ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಹಾನಗಲ್‌ನ ಅಂಜುಮಾನ್ ಇಸ್ಲಾಮ್‌ನ ಅಧ್ಯಕ್ಷ ನಝೀರ್ ಸವ್ನೆರ್ ''ಇಲ್ಲಿನ ಹಿಂದೂ-ಮುಸ್ಲಿಮರು ಅನ್ಯೋನ್ಯತೆಯಿಂದಲೇ ಜೀವನ ಸಾಗಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆಗಾಗ ಮತೀಯ ಘರ್ಷಣೆಗಳಾಗುತ್ತಿತ್ತು. ಅದನ್ನು ಹತ್ತಿಕ್ಕಬೇಕಾಗಿದ್ದ ಪೊಲೀಸರು ಪಕ್ಷಪಾತಿಗಳಾಗಿದ್ದಾರೆ. ನಾಲ್ಕೈದು ತಿಂಗಳ ಹಿಂದೆ ಇಲ್ಲಿನ ಜಾತ್ರೆಯು ಯಶಸ್ವಿಯಾಗಿ ನಡೆಯಿತು. ಆ ಸಂದರ್ಭ ಅಹಿತಕರ ಘಟನೆ ತಪ್ಪಿಸಲು ಪೊಲೀಸರು ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಹಾಗಾಗಿ ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ಕಡಿವಾಣ ಬಿದ್ದಿತ್ತು. ಸೋಮವಾರ ಹಾಗಾಗಲಿಲ್ಲ. ಪೊಲೀಸರು ಗಣೇಶೋತ್ಸವ ಮೆರವಣಿಗೆಯ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಬೇಕಿತ್ತು. ಆದರೆ ಏರ್ಪಡಿಸಲಿಲ್ಲ. ಯಾರೋ ಕಿಡಿಗೇಡಿಗಳು ನಡೆಸಿದ ಕೃತ್ಯಕ್ಕೆ ಇದೀಗ ಊರಿಗೆ ಊರೇ ನಲುಗಿದೆ. ಮಸೀದಿ, ಮನೆಗೆ ಕಲ್ಲೆಸೆಯಲಾಗಿದೆ. ಗರ್ಭಿಣಿಯರು, ವೃದ್ಧರು, ಅಂಗವಿಕಲರು, ಮಕ್ಕಳೆನ್ನದೆ ಗಂಭೀರ ಹಲ್ಲೆ ನಡೆಸಲಾಗಿದೆ. ಮನೆಯೊಳಗೆ ನುಗ್ಗಿ ಚಿನ್ನಾಭರಣ ಲೂಟಿಗೈದಿದ್ದಾರೆ. ಮನೆಯ ವಸ್ತುಗಳಿಗೆ ಹಾನಿ ಎಸಗಿದ್ದಾರೆ. ಟಿಪ್ಪುಸುಲ್ತಾನ್ ಸಮಿತಿಯ ಅಧ್ಯಕ್ಷ ಝಾಕಿರ್‌ರ ವಾಹನಕ್ಕೂ ಬೆಂಕಿ ಹಚ್ಚಿದ್ದಾರೆ. ಮಸೀದಿಯ ಅಧ್ಯಕ್ಷರ ವಾಹನಕ್ಕೂ ಹಾನಿ ಎಸಗಿದ್ದಾರೆ. ಇದು ಪೊಲೀಸ್ ಪ್ರಾಯೋಜಿತ ಕೃತ್ಯವಾಗಿದ್ದು, ಸೂಕ್ತ ತನಿಖೆ ನಡೆಸಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ. ಸಂತ್ರಸ್ತರಿಗೆ ಪರಿಹಾರ ನೀಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಊರು ಬಿಡುತ್ತಿರುವ ಗಂಡಸರು

ಊರಲ್ಲಿ ಸಂಭವಿಸಿದ ಗುಂಪು ಘರ್ಷಣೆಯು ವಸ್ತುಶಃ ಕೋಮುಗಲಭೆಯತ್ತ ತಿರುಗಿದೆ. ಹಾಗಾಗಿ ಇಲ್ಲಿನ ಬಹುತೇಕ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ವಾತಾವರಣ ಕಂಡು ಬಂದಿದೆ. ಪೊಲೀಸರ ಬಂಧನ ಭೀತಿಯಿಂದ ಅನೇಕ ಮಂದಿ ಗಂಡಸರು ಊರು ತೊರೆಯುತ್ತಿದ್ದಾರೆ. ಹಿರೂರ್‌ನ ಮಹಿಳೆಯೊಬ್ಬರು ಹೇಳಿದಂತೆ ಘರ್ಷಣೆಯ ಬಳಿಕ ಪೊಲೀಸರು ಮನಬಂದಂತೆ ಮನೆಗಳಿಗೆ ನುಗ್ಗಿ ಯುವಕರನ್ನು ಕರೆದೊಯ್ಯಲು ಆರಂಭಿಸಿದರು. ಇದನ್ನು ಕಂಡು ಬಹುತೇಕ ಮನೆಯ ಶಾಲಾ ಕಾಲೇಜಿನ ಮಕ್ಕಳ ಸಹಿತ ಗಂಡಸರು ಮೊನ್ನೆ ರಾತ್ರಿಯಿಂದಲೇ ಹೊರಗೆ ಹೋದವರು ವಾಪಸ್ ಬಂದಿಲ್ಲ. ಅವರು ಎಲ್ಲಿಗೆ ಹೋದರು, ಏನಾದರು ಎಂಬುದು ಗೊತ್ತಾಗಿಲ್ಲ. ಹಾಗೇ ಹೋಗುವಾಗ ಹೆಚ್ಚಿನ ಮಂದಿ ಮೊಬೈಲನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಅವರ ಸಂಪರ್ಕವೂ ಇಲ್ಲವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪರಿಸ್ಥಿತಿ ಶಾಂತವಾಗಿದೆ ವದಂತಿಗೆ ಕಿವಿಗೊಡಬೇಡಿ: ಎಸ್ಪಿ ಕೆ.ಪರಶುರಾಮ್

ಸೋಮವಾರ ರಾತ್ರಿ ಮಸೀದಿಯ ಮುಂಭಾಗ ಗಣೇಶೋತ್ಸವದ ಮೆರವಣಿಗೆ ಸಾಗುವಾಗ ದುಷ್ಕರ್ಮಿಗಳು ಎಸೆದ ಕಲ್ಲು ಗಣೇಶನ ವಿಗ್ರಹಕ್ಕೆ ಬಿದ್ದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆ ಬಳಿಕ ಹಿರೂರ್‌ನಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿತ್ತು. ಇತ್ತಂಡಗಳ ಮಧ್ಯೆ ಘರ್ಷಣೆ ಸಂಭವಿಸಿದೆ. ತಕ್ಷಣ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ. ಇಲ್ಲೀಗ ಪರಿಸ್ಥಿತಿ ಶಾಂತಿಯಿಂದಿದೆ. ಯಾರೂ ವದಂತಿಗೆ ಕಿವಿಗೊಡಬೇಡಿ.
ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯ 15 ಮಂದಿಯಲ್ಲದೆ 9 ಮಂದಿ ಪೊಲೀಸರು ಕೂಡಾ ಗಾಯಗೊಂಡಿದ್ದಾರೆ. ಹಲವು ಮಂದಿಯ ಮೇಲೆ 3 ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು, 22 ಮಂದಿಯನ್ನು ಈಗಾಗಲೆ ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಕ್ರಮ ಜರುಗಿಸಲಾಗಿದೆ ಎಂದರು.

ಈ ಬಾರಿ ಜಿಲ್ಲೆಯಲ್ಲಿ 1071 ಗಣೇಶನ ವಿಗ್ರಹವನ್ನು ವಿಸರ್ಜಿಸಲಾಗಿದೆ. ಅದಕ್ಕಾಗಿ ಎಲ್ಲಾ ಕಡೆಯೂ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಹಿರೂರ್‌ನಲ್ಲಿ 4 ಸಾವಿರ ಜನಸಂಖ್ಯೆ ಇದೆ. ಆ ಜನಸಂಖ್ಯೆಗೆ ಅನುಗುಣವಾಗಿ ನಾವು ಸೂಕ್ತ ರೀತಿಯಲ್ಲೇ ಬಂದೋಬಸ್ತ್ ಮಾಡಿದ್ದೇವೆ. ಆದಾಗ್ಯೂ ಅಹಿತಕರ ಘಟನೆ ಜರುಗಿದೆ. ಇದೀಗ ಪೊಲೀಸ್ ಇಲಾಖೆಯ ವಿರುದ್ಧ ಆರೋಪಗಳು ಕೇಳಿ ಬರುತ್ತಿದೆ. ಇಲಾಖೆಯು ಯಾವತ್ತೂ ಪಕ್ಷಪಾತ ಮಾಡಿಲ್ಲ ಎಂದು ಅವರು ಮಾಹಿತಿ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News