ದಾವಣಗೆರೆ: ಸೆ.22 ರಂದು ಪ್ರಮುಖ ಲೇಖಕರ ಕೃತಿಗಳ ಲೋಕಾರ್ಪಣೆ

Update: 2018-09-19 13:40 GMT

ದಾವಣಗೆರೆ,ಸೆ.19: ಮುಸ್ಲಿಂ ಚಿಂತಕರ ಚಾವಡಿ ಜಿಲ್ಲಾ ಘಟಕದ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಸೆ. 22 ರಂದು ಬೆಳಗ್ಗೆ 10.30 ಕ್ಕೆ ಕನ್ನಡದ ಪ್ರಮುಖ ಲೇಖಕರ ಕೃತಿಗಳ ಲೋಕಾರ್ಪಣೆ ಮತ್ತು ಸಂವಾದ ಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಹರಿಹರದ ಲೇಖಕ ಜೆ.ಕಲೀಂಬಾಷ್ ತಿಳಿಸಿದರು. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಳವಾರು ಮಹಮದ್ ಕುಂಞ ಅವರ ಐತಿಹಾಸಿಕ ಬಹುಚರ್ಚಿತ ಕಾದಂಬರಿ 'ಉಮ್ಮಾ', ಕಲಬುರ್ಗಿಯ ಕವಿ ಬೋಡೆರಿಯಾಜ್ ಅಹಮದ್ ತಿಮ್ಮಾಪುರಿ ಅವರ ಕೃತಿ 'ಪ್ರೇಮ, ಸೂಫಿ, ಬಂದೇನವಾಜ್', ಗದಗಿನ ಕವಿ ಎ.ಎಸ್.ಮಕಾನ್‍ದರ್ ಅವರ ಕವನ ಸಂಕಲನ 'ಅಕ್ಕಡಿ ಸಾಲು' ಈ ಕೃತಿಗಳನ್ನು ಹಿರಿಯ ದಲಿತ ಚಿಂತಕ ಇಂದೂಧರ ಹೊನ್ನಾಪುರ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಉಮ್ಮಾ ಕಾದಂಬರಿ ಬಗ್ಗೆ ಲೇಖಕರೊಡನೆ ಸಂವಾದವಿದೆ ಎಂದು ಮಾಹಿತಿ ನೀಡಿದರು. 

ಅಧ್ಯಕ್ಷತೆಯನ್ನು ಚಿಂತಕ, ಕವಿ ರಂಜಾನ್ ದರ್ಗಾ ವಹಿಸಲಿದ್ದು, ಚಿಂತಕರ ಚಾವಡಿಯ ಡಾ.ರಹಮತ್ ತರೀಕರೆ, ರಾಯಚೂರು ವಿವಿಯ ಕುಲಪತಿ ಡಾ.ಮುಝಫ್ಪರ್ ಅಸ್ಸಾದಿ, ಮುನೀರ್ ಕಾಟಿಪಾಳ್ಳ, ಬಿ.ಪೀರ್‍ಬಾಷ್, ಪತ್ರಕರ್ತ ಬಿ.ಎಂ.ಹನೀಫ್, ವಾರ್ತಾಭಾರತಿ ಪತ್ರಿಕೆಯ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ನೂರು ಶ್ರೀಧರ್, ಅನೀಷ್‍ಪಾಷ್, ಇಮ್ತಿಯಾಜ್ ಹುಸೇನ್, ಡಾ.ಮಲ್ಲಿಕಾರ್ಜುನ್ ಕಲಮರಹಳ್ಳಿ, ಇಮಾಮ್‍ ಗೋಡೆಕರ್, ಡಾ.ಚಮನ್‍ ಫರ್ಜಾನ್, ಜಿ.ಪಂ ಸದಸ್ಯ ತೇಜಸ್ವಿ ಪಟೇಲ್ ಪಾಲ್ಗೊಳ್ಳುವರು ಎಂದು ತಿಳಿಸಿದರು. 

ಕಾದಂಬರಿ'ಉಮ್ಮಾ' ಕುರಿತು ಪತ್ರಕರ್ತ ಬಿ.ಎಂ.ಹನೀಫ್, ಅಕ್ಕಡಿಸಾಲು ಕವನ ಸಂಕಲನ ಕುರಿತು ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ, ಪ್ರೇಮ, ಸೂಫಿ, ಬಂದೇನವಾಜ್ ಕೃತಿ ಬಗ್ಗೆ ಶಿಕ್ಷಕ ಆರ್.ಕೆ.ಭಾಗವಾನ್ ಮಾತನಾಡುವರು ಎಂದರು. 

ಮುಸ್ಲಿಂ ಸಮುದಾಯದ ಹಿತ ಚಿಂತನೆಗಾಗಿ ರಾಜ್ಯದ ಪ್ರಗತಿಪರ ಮುಸ್ಲಿಂ ಚಿಂತಕ, ಲೇಖಕರನ್ನೊಳಗೊಂಡ ಚಿಂತಕರ ಚಾವಡಿಯನ್ನು 2016ರಲ್ಲಿ ಆರಂಭಿಸಲಾಯಿತು. ಸಮಾಜದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿತಾಸಕ್ತಿಯನ್ನು ಕಾಪಾಡುವುದು, ಕೋಮುವಾದವನ್ನು ಎದುರಿಸುವುದು. ಸೌಹಾರ್ದ ಸಮಾಜ ನಿರ್ಮಾಣ, ಮೂಲಭೂತವಾದ ತಡೆಯುವುದು, ಜಾಗೃತಿ ಮೂಡಿಸುವುದು, ಮುಸ್ಲಿಂ ಮಹಿಳೆಯರ ಸಬಲೀಕರಣ, ಸಮಾನ ಮನಸ್ಕರೊಡನೆ ಸೌಹಾರ್ದ ಸಂಬಂಧ ಬೆಳೆಸುವುದು, ದಲಿತ ,ಮುಸ್ಲಿಂ ಬಾಂಧವ್ಯವನ್ನು ಗಟ್ಟಿಗೊಳಿಸುವುದು. ದಲಿತ, ಮುಸ್ಲಿಂ ಸಾಹಿತ್ಯ ಸಮ್ಮೇಳನ ಏರ್ಪಡಿಸುವುದು, ನಾಡಿನ ಬುದ್ದಿಜೀವಿ, ಚಿಂತಕರೊಟ್ಟಿಗೆ ಸಂವಾದ, ಚರ್ಚೆಗಳನ್ನು ಮಾಡುವುದು, ಅಧಿಕಾರ ರಾಜಕಾರಣದಲ್ಲಿ ನಮ್ಮ ಪ್ರಭಾವ ಮತ್ತು ಒತ್ತಡಗಳನ್ನು ಬೀರುವುದು ನಮ್ಮ ಉದ್ದೇಶವಾಗಿದೆ ಎಂದು ವಿವರಿಸಿದರು. 

ಸುದ್ದಿಗೋಷ್ಠಿಯಲ್ಲಿ ವಕೀಲ ಅನೀಷ್‍ಪಾಷ್, ಇಮ್ತಿಯಾಜ್ ಹುಸೇನ್, ವಿವೇಕಾನಂದ ಸ್ವಾಮಿ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News