ಸಮರ್ಪಕವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಸಿಎಂ ಖಡಕ್ ಎಚ್ಚರಿಕೆ

Update: 2018-09-19 14:11 GMT

ಬೆಂಗಳೂರು, ಸೆ.19: ರಾಜ್ಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ಸಮರ್ಪಕವಾಗಿ ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿಬಸಪ್ಪ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ 100ನೆ ರಾಜ್ಯ ಪರಿಷತ್ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೆಲ ಅಧಿಕಾರಿಗಳು ಸರಕಾರ ಉಳಿಯುತ್ತದೆಯೋ, ಇಲ್ಲವೋ, ಅತಂತ್ರ ಸರಕಾರದ ಯೋಜನೆಗಳನ್ನು ನಾವೇಕೆ ಜಾರಿಗೊಳಿಸಬೇಕು ಎಂದು ಕಾಲಹರಣ ಮಾಡುತ್ತಿದ್ದಾರೆ. ಆದರೆ, ಒಂದು ವಾರ ಕಾಲಾವಕಾಶ ನೀಡುತ್ತೇನೆ. ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂದರೆ, ನನ್ನದೇ ರೀತಿಯಲ್ಲಿ ಚಾಟಿ ಬೀಸುತ್ತೇನೆ ಎಂದರು.

ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿರುವ ಕೆಲ ಸುದ್ದಿಗಳನ್ನು ನೋಡಿದರೆ ಹೃದಯಾಘಾತವಾಗುತ್ತದೆ. ನಾನು ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದವನು. ಸರಕಾರ ಬಿದ್ದೇ ಹೋಗುತ್ತದೆ, ಶಾಸಕರು ಹೈದರಾಬಾದ್‌ಗೆ ಹೊರಟರು ಎಂಬೆಲ್ಲ ಸುದ್ದಿ ನೋಡಿಯೂ ಬದುಕಿದ್ದೇನೆ ಎಂದರೆ ನನಗೆ ಅಧಿಕಾರದ ದಾಹ ಇಲ್ಲ. ಮುಖ್ಯಮಂತ್ರಿ ಹುದ್ದೆ ಇರುತ್ತದೆ ಹೋಗುತ್ತದೆ. ಯಾವುದೂ ಶಾಶ್ವತವಲ್ಲ. ಇರುವಷ್ಟು ದಿನ ಜನರ ಕಣ್ಣೀರು ಒರೆಸಬೇಕು. ಇದು ನನ್ನ ಧ್ಯೇಯ. ಇಡೀ ದಿನ ಜನತಾದರ್ಶನ ನಡೆಸುತ್ತೇನೆ. ಮೂರ್ನಾಲ್ಕು ಗಂಟೆ ನಿಂತು ದೇಹ ದಂಡಿಸುತ್ತೇನೆ. ವಿಕಲಚೇತನರನ್ನು ಕೂರಿಸಿ ಅಹವಾಲು ಕೇಳುತ್ತೇನೆ. ಪ್ರತಿಯೊಬ್ಬರ ಜೊತೆ ಕನಿಷ್ಠ 10 ನಿಮಿಷ ಮಾತನಾಡುತ್ತೇನೆ. ನನ್ನಂತೆ ಯಾರೂ ಜನತಾದರ್ಶನ ನಡೆಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ನುಡಿದರು.

ಇತ್ತೀಚೆಗೆ ಒಬ್ಬ ಬಾಲಕಿ ನನ್ನ ಬಳಿ ಬಂದಿದ್ದಳು. ಆಕೆಗೆ ತಂದೆ-ತಾಯಿ ಇಬ್ಬರೂ ಇಲ್ಲ. ಆಕೆ ತಾಯಿ ಸಾಯುವಾಗ ವೈದ್ಯಳಾಗುವಂತೆ ಭಾಷೆ ತೆಗೆದುಕೊಂಡಿದ್ದರಂತೆ. ಬಾಲಕಿ ನವೋದಯ ಶಾಲೆಯಲ್ಲಿ ಓದುತ್ತಿದ್ದು, ಶೇ.86ರಷ್ಟು ಅಂಕ ಗಳಿಸಿದ್ದಾಳೆ. ಮೆಡಿಕಲ್ ಸೇರಬೇಕಾದರೆ ಒಂದೂವರೆ ಕೋಟಿ, ಎರಡೂವರೆ ಕೋಟಿ ಖರ್ಚು ಮಾಡಬೇಕು. ಇಂಜಿನಿಯರಿಂಗ್ ಸೇರುವಂತೆ ಆಕೆಗೆ ಸಲಹೆ ಮಾಡಿದೆ. ಆದರೆ ಆಕೆ ತಾಯಿ ಆಸೆ ಈಡೇರಿಸಬೇಕು. ಮೆಡಿಕಲ್ ಸೀಟೇ ಬೇಕು. ಏನಾದರೂ ಮಾಡಿ ಎಂದಾಗ, ನನ್ನ ಕೈಯಿಂದ 50 ಲಕ್ಷ ಖರ್ಚು ಮಾಡಿ ನವಲಗುಂದದಲ್ಲಿ ಆ ಬಾಲಕಿಗೆ ಮೆಡಿಕಲ್ ಸೀಟ್ ಕೊಡಿಸಿದ್ದೇನೆ ಎಂದು ಹೇಳಿದರು.

ಸರಕಾರ ಬದ್ಧ: ಸ್ಕೌಟ್ಸ್ ಮತ್ತು ಗೈಡ್ಸ್‌ನಂತಹ ಸಂಸ್ಥೆಗಳಿಂದ ಶಾಂತಿ, ಸಾಮರಸ್ಯ ಉಳಿದಿದೆ. ದೇಶದ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಈ ಸಂಸ್ಥೆಗಳಿಗೆ ಅಗತ್ಯವಾದ ಎಲ್ಲ ನೆರವು ನೀಡಲು ನಮ್ಮ ಸರಕಾರ ಬದ್ಧವಾಗಿದೆ. ಸರಕಾರದಿಂದ ನೀಡುತ್ತಿರುವ 75 ರೂ. ಪ್ರೊತ್ಸಾಹ ಹಣ ಸಾಲುವುದಿಲ್ಲ ಎಂಬುದು ನನಗೆ ಗೊತ್ತು. ಹೆಚ್ಚಿನ ನೆರವು ನೀಡಲು ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಅದೇ ರೀತಿ, ಸಿಬ್ಬಂದಿಗಳ ಉದ್ಯೋಗ ಭದ್ರತೆ ಬಗ್ಗೆಯೂ ಚರ್ಚಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮೈಸೂರಿನ ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ, ಸಚಿವರಾದ ಎನ್.ಮಹೇಶ್, ಯು.ಟಿ.ಖಾದರ್, ವೆಂಟಕರಮಣ ನಾಡಗೌಡ, ಮೇಯರ್ ಸಂಪತ್ ರಾಜ್, ಮಾಜಿ ಸಚಿವ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಸೇರಿ ಮತ್ತಿತರರು ಭಾಗವಹಿಸಿದ್ದರು.

ಸರಕಾರವನ್ನು ಉಳಿಸಿಕೊಳ್ಳುತ್ತೇನೆ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅನುಭವದ ಗರಡಿಯಲ್ಲಿ ಬೆಳೆದು ಬಂದಿದ್ದೇನೆ. ಸರಕಾರವನ್ನು ಉಳಿಸಿಕೊಳ್ಳುತ್ತೇನೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಕೆಲವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ದಿನಾಂಕ ನಿಗದಿ ಮಾಡಿಕೊಳ್ಳುತ್ತಿದ್ದಾರೆ. ಅವರ ಆಸೆ ನಾನೇಕೆ ಬೇಡ ಎನ್ನಲಿ. ಅದು ಅಲ್ಲದೆ, ಸರಕಾರ ರಚಿಸಲು 113 ಜನ ಶಾಸಕರ ಸಂಖ್ಯಾಬಲ ಬೇಕಲ್ಲ, 104 ಮಂದಿ ಇಟ್ಟುಕೊಂಡು ಸರಕಾರ ರಚಿಸಲು ಸಾಧ್ಯವೇ?

ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News