ಸೀಲ್ ಮಾಡಿದ್ದ ಮನೆಯ ಬೀಗ ಒಡೆದ ಬಿಜೆಪಿ ನಾಯಕನಿಗೆ ಸುಪ್ರೀಂ ನೋಟಿಸ್

Update: 2018-09-19 14:24 GMT

ಹೊಸದಿಲ್ಲಿ, ಸೆ.19: ಮಹಾನಗರ ಪಾಲಿಕೆಯ ಅಧಿಕಾರಿಗಳು ಮೊಹರ್‌ಬಂದ್ ಮಾಡಿದ್ದ ಮನೆಯೊಂದರ ಬೀಗವನ್ನು ಮುರಿದಿರುವ ದೂರಿನ ಹಿನ್ನೆಲೆಯಲ್ಲಿ ದಿಲ್ಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ವಿರುದ್ಧ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದೆ.

ರವಿವಾರ ಗೋಕುಲ್‌ಪುರಿಗೆ ಭೇಟಿ ನೀಡಿದ್ದ ತಿವಾರಿ ಅಲ್ಲಿಯ ಅನಧಿಕೃತ ಬಡಾವಣೆಯಲ್ಲಿನ ಸೀಲ್ ಮಾಡಲಾಗಿದ್ದ(ಮೊಹರ್‌ಬಂದ್) ಮನೆಯ ಬೀಗವನ್ನು ಒಡೆಯುತ್ತಿರುವ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯ ಬಗ್ಗೆ ಗಮನ ಹರಿಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಮೇಲ್ವಿಚಾರಣಾ ಸಮಿತಿಗೆ ಸೂಚಿಸಿತ್ತು. ಸಮಿತಿ ನೀಡಿದ ವರದಿಯ ಹಿನ್ನೆಲೆಯಲ್ಲಿ ತಿವಾರಿ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಲಾಗಿದೆ. ಚುನಾಯಿತ ಪ್ರತಿನಿಧಿಯೊಬ್ಬರು ಉಚ್ಛನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲು ಪ್ರಯತ್ನಿಸಿರುವುದು ದುರದೃಷ್ಟಕರ ಎಂದು ನ್ಯಾಯಾಧೀಶರಾದ ಮದನ್ ಬಿ.ಲೋಕೂರ್, ಎಸ್.ಅಬ್ದುಲ್ ನಝೀರ್ ಹಾಗೂ ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠ ಅಭಿಪ್ರಾಯ ಪಟ್ಟಿತು ಹಾಗೂ ಸೆ.25ರಂದು ತನ್ನೆದುರು ಹಾಜರಾಗುವಂತೆ ತಿವಾರಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News