ಮಹಿಳೆಯರಿಂದ ಉದ್ಯೋಗ ಜಾಹೀರಾತು ಬಚ್ಚಿಟ್ಟ ಫೇಸ್‌ಬುಕ್ ವಿರುದ್ಧ ಮೊಕದ್ದಮೆ

Update: 2018-09-19 14:58 GMT

ವಾಶಿಂಗ್ಟನ್, ಸೆ. 19: ಉದ್ಯೋಗ ಜಾಹೀರಾತುಗಳನ್ನು ಮಹಿಳೆಯರಿಂದ ಬಚ್ಚಿಟ್ಟ ಆರೋಪದಲ್ಲಿ, ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ಎಸಿಎಲ್‌ಯು) ಮೂವರು ಮಹಿಳೆಯರ ಪರವಾಗಿ ಫೇಸ್‌ಬುಕ್ ವಿರುದ್ಧ ಮೊಕದ್ದಮೆ ಹೂಡಿದೆ.

 ಎಸಿಎಲ್‌ಯು ಸಂಘಟನೆಯು, ‘ಕಮ್ಯುನಿಕೇಶನ್ಸ್ ವರ್ಕರ್ಸ್‌ ಆಫ್ ಅಮೆರಿಕ’ ಮತ್ತು ಉದ್ಯೋಗ ಕಾನೂನು ಸಂಸ್ಥೆ ‘ಔಟನ್ ಆ್ಯಂಡ್ ಗೋಲ್ಡನ್ ಎಲ್‌ಎಲ್‌ಪಿ’ ಜೊತೆಗೂಡಿ ಫೇಸ್‌ಬುಕ್ ವಿರುದ್ಧ ‘ಸಮಾನ ಉದ್ಯೋಗಾವಕಾಶ ಆಯೋಗ’ದಲ್ಲಿ ಮೊಕದ್ದಮೆ ಹೂಡಿದೆ.

ಪುರುಷ ಪ್ರಾಬಲ್ಯದ ಕ್ಷೇತ್ರಗಳ ಉದ್ಯೋಗ ಜಾಹೀರಾತುಗಳನ್ನು ಫೇಸ್‌ಬುಕ್ ಯುವ ಪುರುಷ ಫೇಸ್‌ಬುಕ್ ಬಳಕೆಗಾರರಿಗೆ ಮಾತ್ರ ಕಾಣುವಂತೆ ಹಾಕುತ್ತಿದೆ ಹಾಗೂ ಎಲ್ಲ ಮಹಿಳೆಯರು, ಪುರುಷ ಅಥವಾ ಮಹಿಳೆಯರು ಎಂಬುದಾಗಿ ಖಚಿತವಾಗಿ ಗುರುತಿಸಿಕೊಳ್ಳದ ವ್ಯಕ್ತಿಗಳು ಹಾಗೂ ಹಿರಿಯ ಪುರುಷ ಬಳಕೆದಾರರಿಂದ ಬಚ್ಚಿಡುತ್ತಿದೆ ಎಂಬುದಾಗಿ ಈ ಮಹಿಳಾ ಉದ್ಯೋಗಾಕಾಂಕ್ಷಿಗಳು ಆರೋಪಿಸಿದ್ದಾರೆ.

‘‘ಮೂವರು ಮಹಿಳಾ ಉದ್ಯೋಗಾಕಾಂಕ್ಷಿಗಳು, ಅಮೆರಿಕದ ಕಮ್ಯನಿಕೇಶನ್ಸ್ ನೌಕರರು ಹಾಗೂ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಪರವಾಗಿ ಈ ಮೊಕದ್ದಮೆಯನ್ನು ಹೂಡಲಾಗಿದೆ. ಈ ಉದ್ಯೋಗ ಜಾಹೀರಾತುಗಳು, ಉದ್ಯೋಗದಲ್ಲಿ ಲಿಂಗ ಮತ್ತು ವಯಸ್ಸು ತಾರತಮ್ಯವನ್ನು ನಿಷೇಧಿಸುವ ಫೆಡರಲ್ ನಾಗರಿಕ ಹಕ್ಕುಗಳ ಕಾನೂನನ್ನು ಉಲ್ಲಂಘಿಸುತ್ತವೆ’’ ಎಂದು ಎಸಿಎಲ್‌ಯು ಮಹಿಳಾ ಹಕ್ಕುಗಳ ಕಾರ್ಯಕ್ರಮದ ಮುಖ್ಯಸ್ಥೆ ಗ್ಯಾಲನ್ ಶೆರ್ವಿನ್ ಬ್ಲಾಗ್‌ಪೋಸ್ಟ್ ಒಂದರಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News