ಇಲ್ಲಿ ‘ಸುಳ್ಳು’ ಸುದ್ದಿ ಹರಡಿದರೆ 1 ವರ್ಷ ಜೈಲು, ದಂಡ

Update: 2018-09-19 15:11 GMT

ಮಾಸ್ಕೊ, ಸೆ. 19: ನ್ಯಾಯಾಲಯವೊಂದು ‘ಸುಳ್ಳು’ ಎಂಬುದಾಗಿ ನಿರ್ಧರಿಸುವ ಮಾಹಿತಿಯನ್ನು ತೆಗೆದುಹಾಕಲು ವಿಫಲರಾಗುವ ರಶ್ಯನ್ನರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ರಶ್ಯ ಸಂಸದರು ಮಂಗಳವಾರ ಅಂಗೀಕರಿಸಿದರು. ಸಂಸತ್ತಿನ ಕೆಳ ಸದನದ ಡೆಪ್ಯುಟಿಗಳು ಮಸೂದೆಯ ಪರವಾಗಿ ಮತ ಚಲಾಯಿಸಿದರು. ಈ ಮಸೂದೆಯು ಸಾಮಾಜಿಕ ಮಾಧ್ಯಮದಲ್ಲಿರುವ ಜನರು ಮತ್ತು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅನ್ವಯವಾಗುತ್ತದೆ.

ಸಂಸತ್ತಿನಲ್ಲಿ ಔಪಚಾರಿಕ ‘ಥರ್ಡ್ ರೀಡಿಂಗ್’ ನಡೆದ ಬಳಿಕ, ಸೆನೆಟರ್‌ಗಳು ಮತ್ತು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಸೂದೆಗೆ ಸಹಿ ಹಾಕಲಿದ್ದಾರೆ. ರಶ್ಯದಲ್ಲಿ ಇಂಟರ್‌ನೆಟ್ ಸ್ವಾತಂತ್ರದ ಮೇಲೆ ನಡೆಯುತ್ತಿರುವ ನಿರಂತರ ದಮನದ ಮುಂದುವರಿದ ಭಾಗವಾಗಿ ಈ ಮಸೂದೆ ಬಂದಿದೆ. ರಶ್ಯದಲ್ಲಿ ಪ್ರತಿಪಕ್ಷಗಳು ಸಂಪರ್ಕಿಸುವ ಕೆಲವೇ ತಾಣಗಳ ಪೈಕಿ ಸಾಮಾಜಿಕ ಮಾಧ್ಯಮವೂ ಒಂದು.

ಮಸೂದೆಯಲ್ಲಿ ವಿವರಿಸಲಾದ ನಿಯಮಗಳನ್ನು ಉಲ್ಲಂಘಿಸುವವರಿಗೆ 50,000 ರೂಬಲ್ (ಸುಮಾರು 53,565 ರೂಪಾಯಿ) ದಂಡವನ್ನೂ ವಿಧಿಸಬಹುದಾಗಿದೆ ಎಂದು ನ್ಯಾಯಾಂಗ ವೆಬ್‌ಸೈಟ್‌ನಲ್ಲಿ ಹಾಕಲಾದ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News