ಅಮಿತ್ ಶಾ ನಿರ್ದೇಶಕರಾಗಿರುವ ಎಡಿಸಿ ಬ್ಯಾಂಕಿನಲ್ಲಿ ಹಣ ಜಮಾ ಮಾಡಿದ 12 ಹೆಸರು ಬಹಿರಂಗ

Update: 2018-09-19 16:40 GMT

newslaundry.com ವಿಶೇಷ ವರದಿ

ಹೊಸದಿಲ್ಲಿ, ಸೆ.19: 1,000 ಮತ್ತು 500 ರೂ.ಗಳ ನೋಟುಗಳನ್ನು ನಿಷೇಧಿಸಿದ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಿರ್ದೇಶಕರಾಗಿರುವ ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ (ಎಡಿಸಿ ಬ್ಯಾಂಕ್)ನಲ್ಲಿ 745.59 ಕೋ.ರೂ. ಮೌಲ್ಯದ ನಿಷೇಧಿತ ನೋಟುಗಳು ಜಮೆಯಾಗಿದ್ದವು ಎನ್ನುವುದು ಎರಡು ತಿಂಗಳ ಹಿಂದೆ ಆರ್‌ಟಿಐ ವಿಚಾರಣೆಯಿಂದ ಬಹಿರಂಗಗೊಂಡಾಗ ಸಾಕಷ್ಟು ರಾಜಕೀಯ ಕೋಲಾಹಲ ಸೃಷ್ಟಿಯಾಗಿತ್ತು.

ಇದೀಗ newslaundry.com ಸುದ್ದಿ ಜಾಲತಾಣವು ಅಮಿತ್ ಭಾರಧ್ವಾಜ್ ಬರೆದ ವರದಿಯೊಂದನ್ನು ಪ್ರಕಟಿಸಿದ್ದು, ನೋಟು ನಿಷೇಧ ಕ್ರಮದ ಐದೇ ದಿನಗಳಲ್ಲಿ ಈ ಬ್ಯಾಂಕಿನಲ್ಲಿ ತಲಾ 80 ಲಕ್ಷ ರೂ.ಗೂ ಅಧಿಕ ವೌಲ್ಯದ ನಿಷೇಧಿತ ನೋಟುಗಳನ್ನು ಠೇವಣಿ ಮಾಡಿದ್ದ ಗುಜರಾತಿನ 12 ಪೆಟ್ರೋಲ್ ಪಂಪ್‌ ಗಳ ಹೆಸರುಗಳನ್ನು ಬಹಿರಂಗಗೊಳಿಸಿದೆ. ಈ ಪೈಕಿ ಹೆಚ್ಚಿನ ಪಂಪ್‌ ಗಳು ಅಹ್ಮದಾಬಾದ್ ಮತ್ತು ಗಾಂಧಿನಗರದ್ದಾಗಿದ್ದು, ಬಿಜೆಪಿಯ ಓರ್ವ ಸರಪಂಚನ ಒಂದು ಪಂಪ್, ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಕುಟುಂಬಗಳಿಗೆ ಸೇರಿದ ಮೂರು, ಡಿವೈಎಸ್‌ಪಿಯೋರ್ವನ ಪುತ್ರನಿಗೆ ಸೇರಿದ ಒಂದು ಪಂಪ್ ಇವುಗಳಲ್ಲಿ ಸೇರಿವೆ. ಅಹ್ಮದಾಬಾದ್‌ನ ರಾಜಕೀಯ ವಲಯಗಳಲ್ಲಿ ಅಮಿತ್ ಶಾ ಅವರ ಬಲಗೈ ಬಂಟ ಎಂದೇ ಗುರುತಿಸಲಾಗಿರುವ ಬಿಪಿನ್ ಪಟೇಲ್ ಗೋತಾ ಅವರಿಗೆ ಸೇರಿದ ಒಂದು ಪಂಪ್ ಕೂಡ ಇವುಗಳಲ್ಲಿದೆ.

ನೋಟು ನಿಷೇಧ ಘೋಷಣೆಯಾದ ಒಂದು ವಾರದೊಳಗೆ ತಲಾ 80 ಲಕ್ಷ ರೂ.ಗೂ ಅಧಿಕ ಹಣವನ್ನು ಎಡಿಸಿಗೆ ಜಮೆ ಮಾಡಿದವರ ಪಟ್ಟಿಯನ್ನು ವಿತ್ತ ಸಚಿವಾಲಯವು ಸಿದ್ಧಗೊಳಿಸಿದ್ದು, ಇದು newslaundry.com ಬಳಿಯಿದೆ. ನಿಷೇಧಿತ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುವಂತೆ ಆರ್‌ ಬಿಐ ಸಹಕಾರಿ ಬ್ಯಾಂಕುಗಳಿಗೆ ಸೂಚಿಸುವ ಮುನ್ನ ಮೊದಲ ವಾರದಲ್ಲಿ ಒಟ್ಟು 13.5 ಕೋ.ರೂ.ಗಳನ್ನು ಜಮಾ ಮಾಡಿದ್ದ 12 ಪೆಟ್ರೋಲ್‌ ಪಂಪ್ ‌ಗಳ ಹೆಸರುಗಳು ಈ ಪಟ್ಟಿಯಲ್ಲಿವೆ. ಠೇವಣಿಯಲ್ಲಿ ದಿಢೀರ್ ಏರಿಕೆಯಾಗಿದ್ದಕ್ಕೆ ಈ ಪೈಕಿ ಕೆಲವು ಪಂಪ್ ‌ಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಗಳೂ ಜಾರಿಗೊಂಡಿವೆ.

ಬಿಪಿನ್ ಪಟೇಲ್ ಗೋತಾ ಒಡೆತನದ ಪ್ರಾಚಿ ಗ್ಯಾಸೊಲಿನ್ (1.63 ಕೋ.ರೂ.), ಬಿಲಾಸಿಯಾ ಗ್ರಾಮದ ಸರಪಂಚ ಹಾಗೂ ಸ್ಥಳೀಯ ಬಿಜೆಪಿ ನಾಯಕ ಅರವಿಂದ ಚೌಹಾಣ್ ಅವರ ಸಹ ಮಾಲಕತ್ವದ ಮಹಾಕಾಳಿ ಪೆಟ್ರೋಲಿಯಂ (1.26 ಕೋ.ರೂ.), ಬಿಜೆಪಿಯ ಬೋಟಾದ್ ಜಿಲ್ಲಾ ಉಪಾಧ್ಯಕ್ಷ ಬೃಜರಾಜ್ ಸಿನ್ಹಾ ಅವರ ಬೃಜರಾಜ್ ಪೆಟ್ರೋಲಿಯಂ(84 ಲ.ರೂ.), ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಪರಾಗ್ ಪಟೇಲ್ ಮಾಲಕತ್ವದ ಪರಾಗ್ ಪೆಟ್ರೋಲಿಯಂ(1.72 ಕೋ.ರೂ.), ಬಿಜೆಪಿ ಸದಸ್ಯ ಹಿತೇಶ ಪಟೇಲ್ ಅವರ ಗಜಾನಂದ ಪೆಟ್ರೋಲಿಯಂ (84 ಲ.ರೂ.), ಗುಜರಾತ್ ಡಿವೈಎಸ್‌ ಪಿ ಹರದೇವ ಸಿಂಗ್ ವೇಲಾರ ಪುತ್ರ ಅಜಯ ಸಿಂಗ್ ವೇಲಾಗೆ ಸೇರಿದ ಲಕ್ಷ್ಮಿ ಫ್ಯುಯೆಲ್ ಸ್ಟೇಷನ್(1.18 ಕೋ.ರೂ.), ರಾಜಸ್ಥಾನದ ಎನ್‌ಜಿ ಗಾಧಿಯಾ ಸಮೂಹಕ್ಕೆ ಸೇರಿದ ಎನ್‌ಜಿ ಗಾಧಿಯಾ ಫಿಲಿಂಗ್ ಸ್ಟೇಷನ್(1.11 ಕೋ.ರೂ.), ಉದ್ಯಮಿ ಭೌಮಿಕ್ ಥಕ್ಕರ್‌ಗೆ ಸೇರಿದ ನವ್ಕಾರ್ ಪೆಟ್ರೋಲಿಯಂ ಹೆಸರಿನ ಎರಡು ಪಂಪ್‌ಗಳು(1.74 ಕೋ.ರೂ. ಮತ್ತು 1.26 ಕೋ.ರೂ.), ದಿಲೀಪ್ ಸಾಮ್ಜಿ ಗಾಲಾ ಹೆಸರಿನಲ್ಲಿರುವ ಮನೋಜ ಸಂಜ್ವಾ ನಡೆಸುತ್ತಿರುವ ಸನ್ ಪೆಟ್ರೋಗ್ಯಾಸ್(92 ಲ.ರೂ.), ಅಲ್ಕಾ ಬೆನ್ ಪಟೇಲ್ ಮತ್ತು ಪತಿ ಕೇತಲ್ ಪಟೇಲ್‌ಗೆ ಸೇರಿದ ಜಯ್ ಪೆಟ್ರೋಲಿಯಂ(1.01 ಕೋ.ರೂ.) ಮತ್ತು ಅಹ್ಮದಾಬಾದ್‌ನ ಹಂಸಲ್‌ಪುರದ ಶೇಥವಾಲಾ ಪೆಟ್ರೋಲಿಯಂ(89 ಲ.ರೂ.) ಇವು ಈ ಪೆಟ್ರೋಲ್ ಪಂಪ್‌ಗಳಾಗಿವೆ.

ನೋಟು ನಿಷೇಧದ ಬಳಿಕ ತಮ್ಮಲ್ಲಿ ಇಂಧನಗಳ ಮಾರಾಟದ ಪ್ರಮಾಣ ಹೆಚ್ಚು ಕಡಿಮೆ ದುಪ್ಪಟ್ಟಾಗಿತ್ತು ಎಂದು ಈ ಪೆಟ್ರೋಲ್ ಪಂಪ್ ‌ಗಳು ಹೇಳಿಕೊಂಡಿವೆ. ಇವುಗಳಲ್ಲಿ ಒಂದೆರಡನ್ನು ಹೊರತುಪಡಿಸಿ ಉಳಿದ ಪಂಪ್‌ಗಳು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ಗಳನ್ನು ಸ್ವೀಕರಿಸಿದ್ದು, ಯಾವುದೇ ದಂಡ ಪಾವತಿಸದೆ ಅವುಗಳನ್ನು ಬಗೆಹರಿಸಿಕೊಂಡಿವೆ.

ನೋಟು ನಿಷೇಧಗೊಂಡ ಮೊದಲ ಮೂರು ದಿನಗಳಲ್ಲಿ ಇಂಧನ ಮಾರಾಟದಲ್ಲಿ ಶೇ.100ರಷ್ಟು ಏರಿಕೆಯಾಗಿತ್ತು. ನಂತರದ ನಾಲ್ಕು ದಿನಗಳಲ್ಲಿ ಅದು ಮಾಮೂಲಿಗಿಂತ ಶೇ.40ರಷ್ಟು ಹೆಚ್ಚಾಗಿತ್ತು ಎಂದು ಗುಜರಾತ್ ಪೆಟ್ರೋಲಿಯಂ ಡೀಲರ್‌ಗಳ ಸಂಘದ ಉಪಾಧ್ಯಕ್ಷ ಧರ್ಮೇಂದ್ರ ಶಾ ತಿಳಿಸಿದ್ದಾರೆ.

ಎಡಿಸಿ ಮತ್ತು ಅದರ ಮುಖ್ಯ ನಿರ್ವಹಣಾಧಿಕಾರಿ ಎಂ.ಎಲ್.ಬಹೇದಿಯಾರನ್ನು newslaundry.com ಸಂಪರ್ಕಿಸಿತ್ತಾದರೂ, ಈ ಪೆಟ್ರೋಲ್ ಪಂಪ್‌ಗಳಿಂದ ಠೇವಣಿಗಳನ್ನು ಸ್ವೀಕರಿಸುವಾಗ ಅಗತ್ಯ ವಿಧಿವಿಧಾನಗಳನ್ನ ಅನುಸರಿಸಲಾಗಿತ್ತೇ ಎಂಬ ಅದರ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ನಿಯಮದಂತೆ ಈ ವಹಿವಾಟುಗಳ ಬಗ್ಗೆ ಹಣಕಾಸು ಗೂಢಚರ್ಯೆ ಘಟಕಕ್ಕೆ ಮಾಹಿತಿ ನೀಡಲಾಗಿತ್ತೇ ಎಂಬ ಪ್ರಶ್ನೆಗೂ ಉತ್ತರ ಲಭಿಸಿಲ್ಲ.

ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್(ಡಿಸಿಸಿಬಿ)ನ ಅಂಕಿಅಂಶಗಳಂತೆ ಎಡಿಸಿ ದೇಶದ ಅಗ್ರ 100 ಸಹಕಾರಿ ಬ್ಯಾಂಕುಗಳಲ್ಲೊಂದಾಗಿದೆ. ಅದು 195 ಶಾಖೆಗಳು ಮತ್ತು 16 ಲಕ್ಷಕ್ಕೂ ಅಧಿಕ ಖಾತೆದಾರರೊಂದಿಗೆ 9,000 ಕೋ.ರೂ.ಗೂ ಅಧಿಕ ವ್ಯವಹಾರವನ್ನು ನಡೆಸುತ್ತಿದೆ ಮತ್ತು 5,300 ಕೋ.ರೂ.ಗಳ ಒಟ್ಟು ಠೇವಣಿಗಳನ್ನು ಹೊಂದಿದೆ. ನೋಟು ನಿಷೇಧದ ಅವಧಿಯಲ್ಲಿ ಬ್ಯಾಂಕಿಗೆ ಜಮೆಯಾಗಿರುವ ಠೇವಣಿಗಳ ಕುರಿತು ಅಧಿಕಾರಿಗಳು ತುಟಿಪಿಟಿಕ್ಕೆನ್ನುತ್ತಿಲ್ಲ.

ಆದರೆ ನಬಾರ್ಡ್ ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆಯಂತೆ ಎಡಿಸಿ ಬ್ಯಾಂಕಿನ ಒಟ್ಟು ಖಾತೆದಾರರ ಪೈಕಿ ಕೇವಲ ಶೇ.9.37ರಷ್ಟು ಖಾತೆದಾರರು ಮಾತ್ರ ಹಣವನ್ನು ಜಮೆ ಮಾಡಿದ್ದಾರೆ. ಈ ಪೈಕಿ ಶೇ.98.6ರಷ್ಟು ಜನರು 2.5 ಲ.ರೂ.ಗಳಿಗಿಂತ ಕಡಿಮೆ ಮೊತ್ತವನ್ನು ಜಮಾ ಮಾಡಿದ್ದಾರೆ. ಒಟ್ಟು ಖಾತೆಗಳ ಪೈಕಿ ಕೇವಲ ಶೇ.0.09 ಖಾತೆಗಳಲ್ಲಿ ಮಾತ್ರ 2.5 ಲ.ರೂ.ಗೂ ಅಧಿಕ ಹಣ ಜಮೆಯಾಗಿತ್ತು. ಮೊದಲ ಐದು ದಿನಗಳಲ್ಲಿ ಈ ಬ್ಯಾಂಕಿನ ಖಾತೆದಾರರು ಒಟ್ಟು 746 ಕೋ.ರೂ.ಗಳ ನಿಷೇಧಿತ ನೋಟುಗಳನ್ನು ಠೇವಣಿ/ವಿನಿಮಯ ಮಾಡಿದ್ದರು ಎಂದೂ ನಬಾರ್ಡ್ ತಿಳಿಸಿದೆ.

ಅಮಿತ್ ಶಾ ಹಲವಾರು ವರ್ಷಗಳಿಂದ ಎಡಿಸಿಯ ನಿರ್ದೇಶಕರಾಗಿದ್ದರೆ,ಬಿಪಿನ್ ಪಟೇಲ್ ಗೋತಾ 2006ರಿಂದ ಈ ಹುದ್ದೆಯಲ್ಲಿದ್ದಾರೆ. ಗೋತಾ 2002ರ ಗುಲ್ಬರ್ಗ್ ಸೊಸೈಟಿ ನರಮೇಧ ಪ್ರಕರಣದಲ್ಲಿ 2016ರಲ್ಲಿ ವಿಶೇಷ ನ್ಯಾಯಾಲಯದಿಂದ ಖುಲಾಸೆಗೊಂಡಿರುವ 36 ಜನರಲ್ಲಿ ಓರ್ವರಾಗಿದ್ದಾರೆ.

ಕೃಪೆ: newslaundry.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News