ದಸರಾ ಆಚರಣೆಯ ಯಶಸ್ವಿಗೆ ಸಂಪೂರ್ಣ ಸಹಕಾರ: ಶಾಸಕ ಕುಮಾರ್ ಬಂಗಾರಪ್ಪ

Update: 2018-09-19 18:31 GMT

ಸೊರಬ,ಸೆ.19: ಜಾತಿ, ಭೇದವಿಲ್ಲದೆ ಎಲ್ಲರೂ ಸೇರಿ ಆಚರಿಸುವ ನಾಡಹಬ್ಬ ದಸರಾಹಬ್ಬವಾಗಿದ್ದು, ದಸರಾ ಆಚರಣೆಯ ಯಶಸ್ವಿಗಾಗಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಕುಮಾರ್ ಬಂಗಾರಪ್ಪ ಆಶ್ವಾಸನೆ ನೀಡಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ದಸರಾ ಉತ್ಸವ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ದಸರಾ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಯಬೇಕಾದರೆ ಹಣಕಾಸಿನ ಮೂಲಗಳನ್ನು ಕಂಡುಕೊಂಡು ಎಲ್ಲರ ಸಹಕಾರವನ್ನು ಪಡೆಯಬೇಕು. ಆರ್ಥಿಕ ಸಮಿತಿಯನ್ನು ರಚಿಸಿದರೆ ಲೆಕ್ಕ ತಪ್ಪಲು ಸಾಧ್ಯವಿಲ್ಲ. ಹಣಕಾಸಿನ ನಿರ್ವಹಣೆಗೆ ಅನುಕೂಲವಾಗುತ್ತದೆ. ಜನರ ರಕ್ಷಣೆ, ಮೆರವಣಿಗೆಯ ವ್ಯವಸ್ಥೆ ರಕ್ಷಣಾ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ. ದಸರಾ ಹಬ್ಬದ ಕೊನೆಯ ದಿನದಂದು ಬನ್ನಿ ಮುಡಿಯಲು ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪಟ್ಟಣದ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಕಿಸೆಗಳ್ಳರು, ಮೊಬೈಲ್ ಕಳ್ಳರ ಕಾಟ ತಪ್ಪಿಸಲು ಏಕಮುಖ ಮಾರ್ಗಗಳ ವ್ಯವಸ್ಥೆ ಕಲ್ಪಿಸುವುದು ಸೂಕ್ತ ಎಂದರು.

ಇನ್ನು ಹಬ್ಬಕ್ಕೆ ಕೆಲವೇ ಕೆಲವು ದಿನಗಳು ಬಾಕಿಯಿದ್ದು, ಸಮಯಾವಕಾಶ ಕಡಿಮೆಯಿರುವುದರಿಂದ ಖರ್ಚ್ಚು-ವೆಚ್ಚದ ಬಗ್ಗೆ ಸಭೆ ಸೇರಿ ಕ್ರಿಯಾಯೋಜನೆ ತಯಾರಿಸಿ ಕೆಲಸಕ್ಕೆ ಚಾಲನೆ ನೀಡುವಂತೆ ಸಲಹೆ ನೀಡಿದ ಅವರು, ಮುಖ್ಯಸಮಿತಿಯು ಉಪ ಸಮಿತಿಗಳನ್ನು ರಚಿಸಿಕೊಂಡು ಅನುಭವಿಗಳನ್ನು ವಿವಿಧ ಸಮಿತಿಗಳಲ್ಲಿ ಬಳಸಿಕೊಂಡು ಕಾರ್ಯಕ್ರಮದ ಯಶಸ್ವಿಗಾಗಿ ಪ್ರಯತ್ನಿಸಬೇಕೆಂದರು.

ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಮಧುರಾಯ್.ಜಿ.ಶೇಟ್ ಮಾತನಾಡಿ, ಸಾಮೂಹಿಕ ಸಹಭಾಗಿತ್ವದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎರಡು ಲಕ್ಷ ಅನುದಾನ ಹೊರತು ಪಡಿಸಿದರೆ, ನಂತರದಲ್ಲಿ ಸರ್ಕಾರದಿಂದ ಯಾವುದೇ ದೊಡ್ಡ ಮೊತ್ತ ಬಂದಿಲ್ಲ. ಆ ಸಂದರ್ಭದಲ್ಲಿ ಪಟ್ಟಣ ಪಂ.ನಿಂದ ಹೆಚ್ಚಿನ ಅರ್ಥಿಕ ಸಹಕಾರ ಸಿಕ್ಕಿದ್ದು ಹೊರತು ಪಡೆಸಿದರೆ ನಂತರದಲ್ಲಿ ಕಡಿಮೆ ಅನುದಾನ ದೊರತಿತ್ತು. ಎಲ್ಲ ಸಮಾಜಗಳ ಮುಖಂಡರುಗಳಿಂದಲೂ ಸಹಕಾರ ಪಡೆದು ಯಶಸ್ವಿಯಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ಬಾರಿಯೂ ಪಟ್ಟಣದ ಎಲ್ಲರ ಸಹಕಾರದಿಂದ ಉತ್ತಮವಾಗಿ ಉತ್ಸವವನ್ನು ಆಚರಿಸೋಣ ಎಂದರು.

ಸಭೆಯಲ್ಲಿ ಗ್ರೇಡ್-2 ತಹಶೀಲ್ದಾರ್ ರಷ್ಮೀ, ಪಪಂ ಅಧ್ಯಕ್ಷೆ ಬೀಬಿ ಝುಲೇಖಾ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಎಂ.ಡಿ.ಉಮೇಶ್, ಮಂಚಿ ಹನುಮಂತಪ್ಪ, ಪ್ರಶಾಂತ ಮೇಸ್ತ್ರಿ, ಮಹೇಶ ಗೌಳಿ, ತಾಪಂ ಸದಸ್ಯ ನಾಗರಾಜ್ ಚಿಕ್ಕಸವಿ, ಸಿಪಿಐ ಉಮಾಪತಿ, ಕಸಾಪ ಅಧ್ಯಕ್ಷ ಹಾಲೇಶ್ ನವಲೆ, ಪ್ರಮುಖರಾದ ಪಾಣಿ ರಾಜಪ್ಪ, ಟಿ.ಆರ್.ಸುರೇಶ್, ಈರೇಶ ಮೇಸ್ತ್ರಿ, ಷಣ್ಮುಖಾಚಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News