ವಿಧಾನ ಪರಿಷತ್ ಚುನಾವಣೆಯ ಬಳಿಕ ಸಂಪುಟ ವಿಸ್ತರಣೆ

Update: 2018-09-20 13:58 GMT

ಬೆಂಗಳೂರು, ಸೆ. 20: ವಿಧಾನ ಪರಿಷತ್ ಉಪ ಚುನಾವಣೆ (ಅ.3) ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆ ಅಕ್ಟೋಬರ್ ಮೊದಲ ವಾರಕ್ಕೆ ಮುಂದೂಡಿಕೆಯಾಗಿದೆ.

ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ ಹಾಗೂ ಡಾ.ಜಿ.ಪರಮೇಶ್ವರ್ ಅವರು ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಅಕ್ಟೋಬರ್ 3ಕ್ಕೆ ಉಪ ಚುನಾವಣೆ ಘೋಷಣೆ ಮಾಡಿದೆ. ಹೀಗಾಗಿ ಸಂಪುಟ ವಿಸ್ತರಣೆಯೂ ಮುಂದೂಡಲ್ಪಟ್ಟಿದೆ.

ಸಂಪುಟದಲ್ಲಿ ಇನ್ನೂ ಏಳು ಸ್ಥಾನಗಳು ಖಾಲಿಯಿದ್ದು, ಆ ಪೈಕಿ ಕಾಂಗ್ರೆಸ್ ಪಕ್ಷದಿಂದ 6 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಹೈಕಮಾಂಡ್ ಈಗಾಗಲೇ ತೀರ್ಮಾನಿಸಿದೆ. ಎಂ.ಬಿ.ಪಾಟೀಲ್, ಪರಮೇಶ್ವರ್ ನಾಯ್ಕಾ, ಸುಧಾಕರ್, ಎಂಟಿಬಿ ನಾಗರಾಜ್, ಸಿ.ಎಸ್.ಶಿವಳ್ಳಿ, ಎಸ್.ಟಿ.ಸೋಮಶೇಖರ್ ರೋಷನ್‌ಬೇಗ್, ಬಿ.ಸಿ.ಪಾಟೀಲ್, ಹಾರಿಸ್, ಈ. ತುಕಾರಾಂ, ನಾಗೇಂದ್ರ, ಭೀಮಾನಾಯ್ಕಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ವಿಧಾನಸಭೆಯಿಂದ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ಹಾಗೂ ಪರಿಷತ್ತಿಗೆ ಮೂವರ ನಾಮನಿರ್ದೇಶನ ನಿರ್ದೇಶನ ಸೇರಿದಂತೆ ಆರು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳು ಬಹುತೇಕ ಖಚಿತವಾಗಿವೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು, ವರಿಷ್ಠರ ಒಪ್ಪಿಗೆಗೆ ರವಾನಿಸಲಾಗಿದೆ.

ಈ ಮಧ್ಯೆ ಸಂಪುಟ ವಿಸ್ತರಣೆ ಪದೇ ಪದೇ ಮುಂದೂಡಲಾಗುತ್ತಿದ್ದು, ಆಕಾಂಕ್ಷಿಗಳಲ್ಲಿ ಅತೃಪ್ತಿ, ಬೇಗುದಿಗೆ ಕಾರಣವಾಗುತ್ತಿದೆ. ವಿಧಾನ ಪರಿಷತ್ ಚುನಾವಣೆ ಬಳಿಕವಾದರೂ ಸಂಪುಟ ವಿಸ್ತರಣೆ ಮಾಡಬೇಕೆಂದು ಸಚಿವ ಸ್ಥಾನಕಾಂಕ್ಷಿಗಳು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News