ಬಿಎಸ್ ವೈ ಪರ್ಸೆಂಟೇಜ್ ನ ಜನಕ : ಸಿಎಂ ಹೆಚ್ ಡಿಕೆ

Update: 2018-09-20 12:07 GMT

ಬೆಂಗಳೂರು, ಸೆ.20: ರಾಜ್ಯದಲ್ಲಿ ಪರ್ಸಂಟೇಜ್ ವ್ಯವಸ್ಥೆಯನ್ನು ಜಾರಿಗೆ ತಂದ ಮಹಾನುಭಾವ, ಪಿತಾಮಹ, ಪಿತೃ, ಜನಕ ಎಲ್ಲವೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಗುರುವಾರ ನಗರದ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಲಸಂಪನ್ಮೂಲ ಡಿ.ಕೆ.ಶಿವಕುಮಾರ್ ಆರೋಗ್ಯವನ್ನು ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗುಲ್ಬರ್ಗ, ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಶಿವಕುಮಾರ್ ಅನಾರೋಗ್ಯಕ್ಕೆ ಈಡಾದರು. ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದೇನೆ. ಜೊತೆಗೆ, ಬಿಜೆಪಿ ಸ್ನೇಹಿತರ ರಾಜಕೀಯ ಚಟುವಟಿಕೆಗಳ ಬಗ್ಗೆಯೂ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ ಎಂದು ಅವರು ಹೇಳಿದರು.

ಅಪ್ಪ-ಮಕ್ಕಳು ಲೂಟಿಕೋರರು, ರಾಜ್ಯದ ಖಜಾನೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಯಾವ ರೀತಿಯಲ್ಲಿ ನಾವು ಲೂಟಿ ಮಾಡಿದ್ದೇವೆ ಎಂಬ ಸಣ್ಣ ಉದಾಹರಣೆಯನ್ನು ನೀಡಲಿ. ಈ ಹಿಂದೆ 2008ರಲ್ಲಿ ನಾಡಿನ ಜನತೆ ಇವರಿಗೆ ಆಡಳಿತ ನಡೆಸಲು ಅವಕಾಶ ಕೊಟ್ಟಾಗ, ಹುಬ್ಬಳ್ಳಿಯಲ್ಲಿ ಅಪ್ಪ ಮಕ್ಕಳನ್ನು ರಾಜಕೀಯವಾಗಿ ಮುಗಿಸಿ, ಜೈಲಿಗೆ ಕಳುಹಿಸುವುದೇ ನನ್ನ ಗುರಿ ಎಂದಿದ್ದರು. ಆದರೆ, ನಮ್ಮನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದವರೇ ಜೈಲು ಪಾಲಾದರು ಎಂದು ಅವರು ತಿರುಗೇಟು ನೀಡಿದರು.

ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್‌ಗೌಡರನ್ನು ನಿನ್ನೆ ಸಂಪರ್ಕಿಸಿರುವ ಬಿಜೆಪಿ ನಾಯಕರು, ಇಂದು ಅವರ ಜೊತೆ ನಗರದ ಬೌರಿಂಗ್ ಇನ್ಸ್‌ಟಿಟ್ಯೂಟ್‌ನಲ್ಲಿ ಸಭೆ ನಡೆಸುತ್ತಿದ್ದಾರೆ. ನನಗೆ ಪ್ರತಿಯೊಂದು ಮಾಹಿತಿಯೂ ಸಿಗುತ್ತಿದೆ. ಅದೇ ರೀತಿ ಕಾಂಗ್ರೆಸ್ ಶಾಸಕ ಸಿ.ಎಸ್.ಶಿವಳ್ಳಿಯನ್ನು ಸಂಪರ್ಕಿಸಿ ನಮ್ಮ ಜೊತೆ ಬನ್ನಿ 5 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿರುವ ವಿಚಾರವು ಗೊತ್ತು ಎಂದು ಕುಮಾರಸ್ವಾಮಿ ಹೇಳಿದರು.

ಯಡಿಯೂರಪ್ಪ ರಾಜಕೀಯ, ವಯಸ್ಸು, ಅನುಭವದಲ್ಲಿ ನನಗಿಂತ ಹಿರಿಯರು. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಯಾದ ನಂತರ, ಅವರು ಬಳಸುತ್ತಿರುವ ಪದಗಳ ಮೇಲೆ ಸ್ವಲ್ಪ ಹಿಡಿತ ಇಟ್ಟುಕೊಳ್ಳುವುದು ಉತ್ತಮ. ಎರಡು-ಮೂರು ದಿನಗಳಲ್ಲಿ ಶಿವಕುಮಾರ್‌ರನ್ನು ಜೈಲಿಗೆ ಕಳುಹಿಸುವುದಾಗಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಶಿವರಾಮಕಾರಂತ ಬಡಾವಣೆಯ ಕುರಿತು ಸುಪ್ರೀಂಕೋರ್ಟ್ ಏನು ಹೇಳಿದೆ. ಯಾರು ಅದಕ್ಕೆ ಕಾರಣಕರ್ತರು ಎಂಬುದೆಲ್ಲ ಗೊತ್ತಿದೆ. ನಮ್ಮ ಬಗ್ಗೆ ಮಾತನಾಡುವಾಗ ಹಿಡಿತವಿರಲಿ ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.

ಇವತ್ತು ಅಥವಾ ನಾಳೆಯೊಳಗೆ 18 ಜನ ಶಾಸಕರನ್ನು ಕರೆದುಕೊಂಡು ಮುಂಬೈಗೆ ಪ್ರಯಾಣ ಬೆಳೆಸುತ್ತಾರಂತೆ. ಆನಂತರ, ಮಿಲಿಟರಿ ಭದ್ರತೆಯೊಂದಿಗೆ ಶಾಸಕರನ್ನು ವಿಧಾನಸೌಧಕ್ಕೆ ಕರೆ ತರುತ್ತಾರಂತೆ. ಇವೆಲ್ಲ ವ್ಯರ್ಥ ಕಸರತ್ತುಗಳನ್ನು ಬಿಜೆಪಿಯವರು ಯಾಕೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ರಾಜ್ಯದ ಜನತೆ ಬಹಳ ಸೂಕ್ಷ್ಮವಾಗಿ ಇವೆಲ್ಲವನ್ನು ಗಮನಿಸುತ್ತಿದ್ದಾರೆ. ನಾವು ರಸ್ತೆಯಲ್ಲಿ ನಿಂತಿದ್ದೇವೆ. ನೀವು ಗಾಜಿನ ಮನೆಯಲ್ಲಿದ್ದೀರಾ? ಅಧಿಕಾರ ದುರುಪಯೋಗಪಡಿಸಿಕೊಂಡು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕವಾಗಿ ಯಾವ ರೀತಿ ಮಾತನಾಡಬೇಕು ಎಂಬುದನ್ನು ಮೊದಲು ಯಡಿಯೂರಪ್ಪ ಕಲಿತುಕೊಳ್ಳಲಿ ಎಂದು ಅವರು ಹೇಳಿದರು.

ಯಡಿಯೂರಪ್ಪ ಇತಿಹಾಸ ಎಂತಹದ್ದು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಅಪ್ಪ ಮಕ್ಕಳ ಬಗ್ಗೆ ಚರ್ಚೆ ಮಾಡುವುದು ನಿಲ್ಲಿಸಿ, ನಮ್ಮ ಸುದೀರ್ಘವಾದ ರಾಜಕಾರಣದಲ್ಲಿ ರಾಜ್ಯದ ಸಂಪತ್ತು ಉಳಿಸಲು ಪ್ರಯತ್ನ ಮಾಡಿದ್ದೇವೆಯೇ ಹೊರತು, ಲೂಟಿ ಮಾಡುವ ಕೆಲಸ ನಮ್ಮ ಕುಟುಂಬ ಎಂದಿಗೂ ಮಾಡಿಲ್ಲ. ಲೂಟಿ ಮಾಡಿರುವವರು ಇವರು, ನನ್ನ ವಿರುದ್ಧ ಲೂಟಿಕೋರ ಎಂಬ ಪದ ಬಳಕೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಾನು ಇಲ್ಲಿಯವರೆಗೆ ಬಹಳ ತಾಳ್ಮೆಯಿಂದ ಹೋಗುತ್ತಿದ್ದೇನೆ. ನನ್ನನ್ನು ಕೆದಕಿದರೆ ಹಲವಾರು ವಿಷಯಗಳು ಇವೆ. ಸರಕಾರ ನನ್ನ ಕೈಯಲ್ಲಿ ಇದೆ, ನಾಳೆ ಬೆಳಗ್ಗೆ ಏನು ಬೇಕಾದರೂ ಆಗಬಹುದು. ನನ್ನ ಕೈಯಲ್ಲಿ ಶಕ್ತಿ ಇಲ್ಲವೇ, ಸ್ವಲ್ಪ ಎಚ್ಚರಿಕೆಯಿಂದ ಇರಿ ಎಂದು ಯಡಿಯೂರಪ್ಪಗೆ ಸಲಹೆ ನೀಡಲು ಬಯಸುತ್ತೇನೆ.

ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News