ಜಯಲಲಿತಾ ಆಸ್ಪತ್ರೆಯಲ್ಲಿದ್ದ ಅವಧಿಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿಲ್ಲ: ಅಪೋಲೋ ಆಸ್ಪತ್ರೆ

Update: 2018-09-20 07:56 GMT

ಚೆನ್ನೈ, ಸೆ.20: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಇಲ್ಲಿನ ಅಪೋಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವಧಿಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿಲ್ಲ ಎಂದು ಆಸ್ಪತ್ರೆ, ನ್ಯಾಯಮೂರ್ತಿ ಎ.ಅರ್ಮುಗಸ್ವಾಮಿ ಆಯೋಗಕ್ಕೆ ತಿಳಿಸಿದೆ. ಹಲವು ಬಾರಿ ಅದರ ಮೇಲೆ ಇತರ ದೃಶ್ಯಾವಳಿಗಳು ಓವರ್‍ರೈಟ್ ಆಗಿರುವುದರಿಂದ ಅದನ್ನು ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಜಯಲಲಿತಾ ಅವರ ಸಾವಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ಆಯೋಗ ತನಿಖೆ ನಡೆಸುತ್ತಿದೆ. ಆಸ್ಪತ್ರೆಯ ಕೆಲ ನಿರ್ದಿಷ್ಟ ಪ್ರದೇಶಗಳ ಸಿಸಿ ಟಿವಿ ದೃಶ್ಯಾವಳಿ ತುಣುಕುಗಳನ್ನು ಪ್ರಸ್ತುತಪಡಿಸುವಂತೆ ಆಯೋಗ ಆಸ್ಪತ್ರೆಗೆ ಸೂಚನೆ ನೀಡಿತ್ತು.

"ಸಿಸಿ ಟಿವಿ ರೆಕಾರ್ಡಿಂಗ್‍ನಲ್ಲಿ 30 ದಿನಗಳು ಕಳೆದ ಬಳಿಕ ಸ್ವಯಂಚಾಲಿತವಾಗಿ ಅದರ ಮೇಲೆ ಹೊಸ ದೃಶ್ಯಾವಳಿ ದಾಖಲಾಗುತ್ತದೆ. ಈ ಮಾಹಿತಿಯನ್ನು ಸೆಪ್ಟೆಂಬರ್ 11ರಂದು ಆಯೋಗಕ್ಕೆ ತಿಳಿಸಲಾಗಿದೆ ಎಂದು ಅಪೋಲೊ ಆಸ್ಪತ್ರೆಯ ವಕೀಲರಾದ ಮೈಮೂನಾ ಬಾದ್‍ಷಾ ಹೇಳಿದ್ದಾರೆ. ಹಿಂದಿನ ದೃಶ್ಯಾವಳಿ ತಾನಾಗಿಯೇ ರದ್ದಾಗಿ, ಹೊಸ ದೃಶ್ಯಾವಳಿ ದಾಖಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜಯಲಲಿತಾ ಅವರು 2016ರ ಸೆಪ್ಟೆಂಬರ್ 22ರಿಂದ 2016ರ ಡಿಸೆಂಬರ್ 5ರವರೆಗೆ ಜಯಲಲಿತಾ ಆಸ್ಪತ್ರೆಯಲ್ಲಿದ್ದರು. ಅಷ್ಟು ಹಳೆಯ ದೃಶ್ಯಾವಳಿಗಳನ್ನು ಸಲ್ಲಿಸಲು ಸಾಧ್ಯವಿಲ್ಲ" ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.

ಸಿಸಿಟಿವಿಗಳು ಸ್ವಿಚ್ ಆಫ್ ಆಗಿದ್ದವೇ ಎಂದು ಕೇಳಿದ ಪ್ರಶ್ನೆಗೆ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರತಾಪ್ ಸಿ.ರೆಡ್ಡಿಯವರು, "ಅದು ಬೇರೆ ವಿಚಾರ" ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News