ರಾಜ್ಯದ ಎಲ್ಲಾ ಶೈಕ್ಷಣಿಕ ಆವರಣ ಡ್ರಗ್ಸ್ ಮುಕ್ತವಾಗಬೇಕು: ಡಾ.ಜಿ.ಪರಮೇಶ್ವರ್

Update: 2018-09-20 11:59 GMT

ತುಮಕೂರು,ಸೆ.20: ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ, ಶಾಲಾ, ಕಾಲೇಜುಗಳು ಮಾದಕ ವಸ್ತು ರಹಿತ ಕ್ಯಾಂಪಸ್ ನಿರ್ಮಾಣ ಮಾಡಬೇಕೆಂಬುದು ನನ್ನ ಇಚ್ಚೆಯಾಗಿದ್ದು, ಇದಕ್ಕೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಗೃಹ ಇಲಾಖೆ ಯೊಂದಿಗೆ ಸಹಕರಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದ ತುಮಕೂರು ವಿವಿಯ ಡಾ.ಶ್ರೀಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಹಾಗಲವಾಡಿ ಜುಂಜಪ್ಪ, ವಿಶ್ವ ಮಾನವ ಸಂದೇಶ ಸಾರಿಗೆ ಕುವೆಂಪು, ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಮತ್ತು ನೀರಾವರಿ ತಜ್ಞ ಜಿ.ಪರಮಶಿವಯ್ಯ ಅವರ ಅಧ್ಯಯನ ಪೀಠಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಮ್ಮೆ ಓರ್ವ ವಿದ್ಯಾರ್ಥಿ ಈ ಡ್ರಗ್ಸ್ ಚಟಕ್ಕೆ ದಾಸನಾದರೆ, ಆತನ ಜೀವನವೇ ಸಂಪೂರ್ಣವಾಗಿ ನಾಶವಾಗಲಿದೆ. ಆದ್ದರಿಂದ ವಿವಿಗಳ ಮತ್ತು ಶಾಲಾ, ಕಾಲೇಜಗಳ ಬಳಿ ಇಂತಹ ದಂಧೆ ನಡೆಸುವವರ ಚಲನವಲನಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಗೃಹ ಇಲಾಖೆಗೆ ಸಹಕರಿಸಬೇಕು. ಹಾಗೆಯೇ ಪೊಲೀಸ್ ಅಧಿಕಾರಿಗಳು ಸಹ ತಿಂಗಳಿಗೊಮ್ಮೆ ಅತಿ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿರುವ ಕ್ಯಾಂಪಸ್‍ಗಳಿಗೆ ಭೇಟಿ ನೀಡಿ, ಡ್ರಗ್ಸ್ ಚಟದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.

ಭಾರತ ಇಂದು ಇಡೀ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ತಾಂತ್ರಿಕ ಮಾನವ ಸಂಪನ್ಮೂಲವನ್ನು ಹೊಂದಿರುವ ದೇಶವಾಗಿದೆ. ನಾಸಾದ ಶೇ30ರಷ್ಟು ಇಂಜಿನಿಯರ್‍ಗಳು ಭಾರತೀಯರು. ವಿದೇಶಗಳಲ್ಲಿ ಹೆಸರು ಮಾಡಿರುವ ವೈದ್ಯರು, ಇತರೆ ತಂತ್ರಜ್ಞರಲ್ಲಿ ಭಾರತೀಯರ ಸಂಖ್ಯೆ ಅಧಿಕವಾಗಿದೆ. ಪ್ರತಿಭೆ ಇದ್ದರೆ ಎಲ್ಲ ಕಡೆಯೂ ನಿಮಗೆ ಮನ್ನಣೆ ದೊರೆಯಲಿದೆ. ಜಾಗತಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಆಪಾರವಾದ ಬದಲಾವಣೆಗಳಾಗುತ್ತಿದ್ದು, ನಿಮ್ಮಲ್ಲಿ ಪ್ರತಿಭೆ ಇದ್ದರೆ ವಿಶ್ವದ ಯಾವುದೇ ವಿವಿಗೆ ಪ್ರವೇಶ ಪಡೆಯ ಬಹುದು. ತುಮಕೂರು ವಿವಿ ಅತ್ಯಾಧುನಿಕ ತಾಂತ್ರಿಕ ವಿಷಯಗಳನ್ನು ಒಳಗೊಂಡ ಪ್ರಪಂಚದ ಉತ್ತಮ ವಿವಿಗಳಲ್ಲಿ ಒಂದಾಗಬೇಕೆಂಬುದು ನನ್ನ ಇಚ್ಚೆಯಾಗಿತ್ತು. ಮುಂದಿನ ದಿನಗಳಲ್ಲಿ ಅದು ಸಕಾರಗೊಳ್ಳಲಿ ಎಂಬ ಆಶಯವನ್ನು ಡಾ.ಜಿ.ಪರಮೇಶ್ವರ್ ವ್ಯಕ್ತಪಡಿಸಿದರು.

ತುಮಕೂರು ವಿವಿ ಇಂದು ಈ ಭಾಗದ ಸಾಂಸ್ಕೃತಿಕ ನಾಯಕ ಜುಂಜಪ್ಪ ಅವರ ಅಧ್ಯಯನ ಪೀಠ ಆರಂಭಿಸುವ ಮೂಲಕ 15ನೇ ಶತಮಾನದಲ್ಲಿ ಯಾವುದೇ ಔಪಚಾರಿಕ ಶಿಕ್ಷಣವಿಲ್ಲದೆ, ತನ್ನ ಅನುಭವದ ಮೂಲಕವೇ ಜನರಿಗೆ ಹಲವು ಸಂದೇಶ ಗಳನ್ನು ನೀಡಿದ ಸಾಂಸ್ಕೃತಿಕ ನಾಯಕನೊಬ್ಬನ ಚರಿತ್ರೆಯನ್ನು ಇಡೀ ನಾಡಿಗೆ ಪರಿಚಯಿಸಲು ಹೊರಟಿರುವುದು ಸ್ವಾಗತಾರ್ಹ. ಹಾಗೆಯೇ ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು, ದ್ವನಿಯಿಲ್ಲದವರಿಗೆ ದ್ವನಿಯಾಗಿ, ಅವಕಾಶ ವಂಚಿತರಿಗೆ ವಿಶೇಷ ಸೌಲಭ್ಯದ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಬರದ ನಾಡಾದ ಬಯಲುಸೀಮೆಗೆ ನದಿ ನೀರು ತರುವ ಕನಸಿನೊಂದಿಗೆ ತನ್ನ ಜೀವನದ ಕೊನೆಯ ಉಸಿರಿನವರೆಗೆ ದುಡಿದ ನೀರಾವರಿ ತಜ್ಞ ಜಿ.ಪರಮಶಿವಯ್ಯ ಅವರ ಅಧ್ಯಯನ ಪೀಠಗಳು ಆರಂಭಗೊಳ್ಳುತ್ತಿರುವುದು ಸಂತೋಷದ ವಿಚಾರ. ಇದಕ್ಕಾಗಿ ವಿವಿಯ ಕುಲಪತಿಗಳು ಸೇರಿದಂತೆ ಎಲ್ಲರನ್ನು ಅಭಿನಂದಿಸುವುದಾಗಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಇತಿಹಾಸ ಓದುವುದರ ಮೂಲಕ ಇತಿಹಾಸ ಸೃಷ್ಟಿಸಬೇಕು ಎಂಬ ಕಾರಣಕ್ಕೆ ನಾಲ್ವರು ಸಾಧಕರ ಅಧ್ಯಯನ ಪೀಠಗಳನ್ನು ತುಮಕೂರು ವಿವಿ ಆರಂಬಿಸಿದೆ. ದೇಶದಲ್ಲಿ ಮಹಾನ್ ಸಾಧನೆ ಮಾಡಿದವರಲ್ಲಿ ಬಹುತೇಕ ಬಡತನದಲ್ಲಿಯೇ ಹುಟ್ಟಿ ಬೆಳೆದವರು. ಶಿಕ್ಷಣ ಕೇವಲ ಉದ್ಯೋಗ ಪಡೆಯಲು ಎಂಬ ಕಲ್ಪನೆಯನ್ನು ಬದಿಗಿರಿಸಿ, ವ್ಯಕ್ತಿತ್ವ ವಿಕಸನಕ್ಕೆ ಎಂಬ ಉದ್ದಾತ್ತ ಉದ್ದೇಶವನ್ನು ಮೈಗೂಡಿಸಿಕೊಂಡಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ. ನಮ್ಮೊಳಗಿನ ಕಷ್ಟಗಳನ್ನು ಅರ್ಥ ಮಾಡಿಕೊಂಡು, ಸರಳತೆಯಿಂದ ಬದುಕುವುದನ್ನು ರೂಢಿಸಿಕೊಂಡರೆ, ಎಲ್ಲರೂ ಮೆಚ್ಚುವಂತಹ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದರು.

ವೇದಿಕೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಶಾಸಕ ಬಿ.ಸತ್ಯನಾರಾಯಣ, ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ, ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಕುಲಸಚಿವ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News