ಲಜ್ಜೆಗೆಟ್ಟವರಂತೆ ವರ್ತಿಸುತ್ತಿರುವ ಬಿಜೆಪಿ ನಾಯಕರಿಂದ ಸರಕಾರ ಅಸ್ಥಿರಗೊಳಿಸುವ ಪ್ರಯತ್ನ: ಸಿದ್ದರಾಮಯ್ಯ

Update: 2018-09-20 14:07 GMT

ಹೊಸದಿಲ್ಲಿ, ಸೆ.20: ಬಿಜೆಪಿಯ ಕೆಲವು ನಾಯಕರು ಲಜ್ಜೆಗೆಟ್ಟವರಂತೆ ವರ್ತಿಸುತ್ತಿದ್ದಾರೆ. ಸುಮ್ಮನೆ ಸಿದ್ಧಾಂತಗಳ ಬಗ್ಗೆ ಮಾತನಾಡುವ ಬಿಜೆಪಿಯವರು, ವಿಧಾನಸಭೆ ಚುನಾವಣೆಯಲ್ಲಿ ಸೋತ ಮೇಲೆ ಮರ್ಯಾದೆಯಿಂದ ವಿರೋಧ ಪಕ್ಷವಾಗಿ ಕೆಲಸ ಮಾಡುವ ಬದಲು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಅವರ ಪಕ್ಷದ ಇತರ ನಾಯಕರು ರಾಜ್ಯದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ ಎಂದು ಕಿಡಿಗಾರಿದರು.

ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯವರ ಪ್ರಯತ್ನ ಫಲ ನೀಡುವುದಿಲ್ಲ. ಬಿಜೆಪಿಯ ಚಟುವಟಿಕೆಗಳನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.

ಕೇಂದ್ರದಲ್ಲಿ ನಮ್ಮ ಸರಕಾರ ಇದೆ ಎಂದು ಯಡಿಯೂರಪ್ಪ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಯಾವ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಅವರು ಏನು ಮಾಡುತ್ತಾರೋ ನೋಡೋಣ ಎಂದು ಸವಾಲು ಹಾಕಿದರು.

ಶಾಸಕರ ಜೊತೆ ಚರ್ಚೆ: ಸಚಿವ ರಮೇಶ್ ಜಾರಕಿಹೊಳಿ, ಹರಿಹರ ಶಾಸಕ ರಾಮಪ್ಪ ಸೇರಿದಂತೆ ಇನ್ನಿತರ ಕಾಂಗ್ರೆಸ್ ಶಾಸಕರ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿರುವ ಬಗ್ಗೆ ಮಾಹಿತಿ ಪಡೆದು ಕೊಂಡರು. ಅಲ್ಲದೆ, ಯಾವುದೇ ಕಾರಣಕ್ಕೂ ಬಿಜೆಪಿ ನಾಯಕರ ಆಮಿಷಕ್ಕೆ ಬಲಿಯಾಗಬೇಡಿ, ಅವರಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಬೇಡಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News