ಶೋಷಿತ ಸಮುದಾಯಕ್ಕೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿ ಕೂರಲ್ಲ: ಡಿಸಿಎಂ ಪರಮೇಶ್ವರ್

Update: 2018-09-20 13:51 GMT

ತುಮಕೂರು,ಸೆ.20: ಶೋಷಿತ ಸಮುದಾಯಕ್ಕೆ ಅನ್ಯಾಯವಾದರೆ ನಾನು ಅಧಿಕಾರದಲ್ಲಿ ಒಂದು ಕ್ಷಣ ಉಳಿಯುವುದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಘೋಷಿಸಿದ್ದಾರೆ.

ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಶೋಷಿತ ಸಮುದಾಯದ ಪ್ರತಿನಿಧಿಯಾಗಿ ಸರಕಾರದಲ್ಲಿ ಇರುವಾಗಲೇ ಭಡ್ತಿ ಮೀಸಲಾತಿ ಸೇರಿದಂತೆ ಯಾವುದೇ ವಿಧದಲ್ಲಿಯೂ ಸಮುದಾಯಕ್ಕೆ ಅನ್ಯಾಯವಾದರೆ ಅಂದೇ ರಾಜೀನಾಮೆ ನೀಡಿ ಹೊರಬರಲು ಸಿದ್ಧನಿದ್ದೇನೆ. ಶೋಷಿತ ಸಮುದಾಯಗಳ ಏಳ್ಗೆಗಾಗಿ ಆ ಕಾಲದಲ್ಲಿಯೇ ಅಂಬೇಡ್ಕರ್ ರಾಜೀನಾಮೆ ಕೊಟ್ಟಿರುವಾಗ, ನನ್ನ ರಾಜೀನಾಮೆ ಯಾವ ಲೆಕ್ಕ. ಪರಮೇಶ್ವರ್ ಗೆ ಶಕ್ತಿ ಇಲ್ಲ ಎಂದು ಯಾರಾದರೂ ತಿಳಿದುಕೊಂಡಿದ್ದರೆ ನಾನು ಅವರಿಗೆ ಎಚ್ಚರಿಕೆ ಕೊಡಲು ಬಯಸುತ್ತೇನೆ. ನಾನು ಕೂಡ ಸಂಘಟನಾತ್ಮಕ ಶಕ್ತಿ ಹೊಂದಿದ್ದೇನೆ ಎಂದು ವಿರೋಧಿಗಳಿಗೆ ಪರೋಕ್ಷವಾಗಿ ಪರಮೇಶ್ವರ್ ಎಚ್ಚರಿಕೆಯ ಸಂದೇಶ ರವಾನಿಸಿದರು.

ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳನ್ನು ಕೇವಲವಾಗಿ ಕಾಣುತ್ತಿದ್ದಾರೆ. ಅವರ ಆಸ್ತಿತ್ವಕ್ಕಾಗಿ ನಮ್ಮ ಜೊತೆ ಇದ್ದಾರೆ ಎಂಬ ಮನೋಭಾವ ಕಂಡುಬರುತ್ತಿದೆ. ಗೌರವವಿಲ್ಲದ ಕಡೆ ಒಂದು ಕ್ಷಣವೂ ಇರಲು ನಾವು ಇಷ್ಟಪಡುವುದಿಲ್ಲ. ಎಡ, ಬಲ, ಮಧ್ಯಮ ಎಂದು ಎಲ್ಲಿಯೂ ಸಂವಿಧಾನದಲ್ಲಿ ಹೇಳಿಲ್ಲ. ನಾವೆಲ್ಲರೂ ಸೇರಿದರೆ ಒಂದು ಶಕ್ತಿಯಾಗುತ್ತದೆ. ಸಂಘಟಿತರಾಗಿ ಮುನ್ನೆಡೆದರೆ ಮಾತ್ರ ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಲು ಸಾಧ್ಯ. ಶೋಷಿತ ಸಮುದಾಯಕ್ಕೆ ಅನ್ಯಾಯವಾದಾಗ ಜನಪ್ರತಿನಿಗಳು ಕೈ ಕಟ್ಟಿ ಕೂರುವುದಿಲ್ಲ ಎಂಬ ಸಂದೇಶವನ್ನು ಮನೆ ಮನೆಗೂ ತಲುಪಿಸುವ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ದೇಶದಲ್ಲಿ ಜಾತಿ ವ್ಯವಸ್ಥೆ ನಾಶವಾಗುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ. ಮುಂದಿನ ಪೀಳಿಗೆ ಯಾವುದೇ ಶೋಷಣೆ ಇಲ್ಲದೆ ಬದುಕುವಂತಾಗಬೇಕು. ಆಧುನಿಕ ಜಗತ್ತಿನಲ್ಲಿ ನಾವು ಬದುಕುತ್ತಿದ್ದರೂ ಇಂದಿಗೂ ಅಂತರ್ ಜಾತಿ ವಿವಾಹವಾದರೆ ಮರ್ಯಾದ ಹತ್ಯೆಯಂತಹ ಹೇಯ ಕೃತ್ಯಗಳು ನಡೆಯುತ್ತಿವೆ. ಇಂತಹ ಅನಿಷ್ಟ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲೇ ಶೋಷಿತರು ಶಿಕ್ಷಿತರಾಗಬೇಕು. ಅ ಮೂಲಕ ಸಂಘಟಿತರಾಗಿ, ನಮ್ಮ ಸ್ವಾಭಿಮಾನದ ಬದುಕಿನ ಹಕ್ಕಿಗೆ ಹೋರಾಟ ಮಾಡುವ ಶಕ್ತಿ ಬೆಳಸಿಕೊಳ್ಳಬೇಕು. ಶಿಕ್ಷಣದಿಂದ ಮಾತ್ರ ಬದಲಾವಣೆಯಿಂದ ಸಾಧ್ಯ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ, ನಮ್ಮ ಸಮುದಾಯ ಒಂದಾಗಬೇಕಿದೆ. 16 ಮಂದಿ ಶಾಸಕರಿದ್ದರೂ ಕಾರ್ಯಕ್ರಮಕ್ಕೆ ಬಂದಿಲ್ಲ. ಪಕ್ಷ ಯಾವುದೇ ಇರಲಿ, ಸಮುದಾಯಕ್ಕೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಛಲವಾದಿ ಮುಖಂಡ ಭಾನು ಪ್ರಕಾಶ್ ಮಾತನಾಡಿ, ನಿಗಮ-ಮಂಡಲಿ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಛಲವಾದಿಗಳನ್ನು ಪರಿಗಣಿಸಬೇಕು. ತಾಲೂಕು ಸಮಿತಿಗಳಿಗೆ ಕನಿಷ್ಟ 3 ಮಂದಿಯನ್ನು ನಾಮನಿರ್ದೇಶನ ಮಾಡಬೇಕು. ಎರಡನೇ ಹಂತದ ನಾಯಕರಿಗೆ ಮತ್ತಷ್ಟು ರಾಜಕೀಯ ಸ್ಥಾನಮಾನ ನೀಡಬೇಕು. ಛಲವಾದಿ ಅಭಿವೃದ್ಧಿ ನಿಗಮ ರಚನೆ ಹಾಗೂ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಛಲವಾದಿ ಭವನಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಬೇಕು ಎಂದು ಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಸ್.ದಿನೇಶ್, ತಾಪಂ ಅಧ್ಯಕ್ಷ ಗಂಗಾಜೀನಯ್ಯ, ಪಾಲಿಕೆ ಸದಸ್ಯೆ ಪ್ರಭಾವತಿ ಸುಧೀಶ್ವರ್, ಜಿಪಂ ಸದಸ್ಯೆ ಮಂಜುಳಾ, ದೊಡ್ಡನಂಜಯ್ಯ, ಗಂಗಧಾರ್, ಬಿ.ಜಿ.ನಿಂಗರಾಜು, ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಸೋಮಶೇಖರ್, ಮುಖಂಡರಾರದ ಸುರೇಶ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃತ ಸಾಲಮರದ ತಿಮ್ಮಕ್ಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಛಲವಾದಿ ಬಂಧುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News