ಶಿವಮೊಗ್ಗ: ರೈಲ್ವೆ-ಅರಣ್ಯ ಸಿಬ್ಬಂದಿಗಳ ಮೇಲಿನ ಹಲ್ಲೆ ಪ್ರಕರಣ; ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕನ ಬಂಧನ

Update: 2018-09-20 13:49 GMT

ಶಿವಮೊಗ್ಗ, ಸೆ. 20: ರೈಲ್ವೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಸುರೇಶ್ ಬಿ. ಸ್ವಾಮಿರಾವ್‍ರನ್ನು ಹೊಸನಗರ ತಾಲೂಕು ರಿಪ್ಪನ್‍ಪೇಟೆ ಠಾಣೆ ಪೊಲೀಸರು ಕಾರವಾರ ಜಿಲ್ಲೆಯ ಗೋವಾ ಗಡಿಯ ಬಳಿ ಬಂಧಿಸಿದ್ದಾರೆ. 

ರಿಪ್ಪನ್‍ಪೇಟೆ ಠಾಣೆ ಸಬ್ ಇನ್ಸ್ ಪೆಕ್ಟರ್ ರಾಜಶೇಖರ್ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಮಂಗಳವಾರ ಸಂಜೆ ಆರೋಪಿತ ಸುರೇಶ್ ಬಿ.ಸ್ವಾಮಿರಾವ್‍ರನ್ನು ನ್ಯಾಯಾಲಯದ ಮುಂಭಾಗ ಪೊಲೀಸರು ಹಾಜರು ಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ನಡುವೆ ಅನಾರೋಗ್ಯದ ಹಿನ್ನೆಲೆಯಲ್ಲಿ, ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. 

ಘಟನೆ ಹಿನ್ನೆಲೆ: ಹೊಸನಗರ ತಾಲೂಕಿನ ನಗರ ಜಿ.ಪಂ. ಕ್ಷೇತ್ರದ ಸದಸ್ಯರಾಗಿರುವ ಸುರೇಶ್‍ರವರು ಮಾಜಿ ಶಾಸಕ ಬಿ.ಸ್ವಾಮಿರಾವ್‍ರವರ ಪುತ್ರರಾಗಿದ್ದಾರೆ. ಕಳೆದ ಸೆ.2 ರಂದು ರಾತ್ರಿ ಹೊಸನಗರ ತಾಲೂಕಿನ ಸೂಡೂರು ರೈಲ್ವೆ ಕ್ರಾಸಿಂಗ್ ಬಳಿ ಈ ಘಟನೆ ನಡೆದಿತ್ತು. ಮೈಸೂರು - ತಾಳಗುಪ್ಪ ರೈಲು ತೆರಳುತ್ತಿದ್ದ ಕಾರಣದಿಂದ ಅಲ್ಲಿನ ರೈಲ್ವೆ ಸಿಬ್ಬಂದಿ ಕ್ರಾಸಿಂಗ್ ಗೇಟ್ ಹಾಕಿದ್ದರು. ಈ ವೇಳೆ ಶಿವಮೊಗ್ಗದ ಕಡೆಯಿಂದ ಕಾರಿನಲ್ಲಿ ಆಗಮಿಸಿದ್ದ ಸುರೇಶ್ ಬಿ. ಸ್ವಾಮಿರಾವ್‍ರವರು, ತಾನು ಜಿ.ಪಂ. ಸದಸ್ಯನಾಗಿದ್ದು, ಗೇಟ್ ತೆರೆಯುವಂತೆ ರೈಲ್ವೆ ಸಿಬ್ಬಂದಿಗೆ ಸೂಚಿಸಿದ್ದರು. ಗೇಟ್ ತೆರೆಯಲು ನಿರಾಕರಿಸಿದ ಸಿಬ್ಬಂದಿ ಜೊತೆ ಜಗಳವಾಡಿದ್ದರು ಎನ್ನಲಾಗಿದೆ. 

ನಂತರ ಕಾರಿನಲ್ಲಿದ್ದ ತ್ರಿಭುವನ್ ಎಂಬಾತನ ಜೊತೆ ಸೇರಿಕೊಂಡು, ರೈಲ್ವೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ತಡೆಯಲೆತ್ನಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೂ ಥಳಿಸಿದ್ದರು. ಗಾಯಗೊಂಡ ಈ ಇಬ್ಬರು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. 

ಈ ಕುರಿತಂತೆ ರಿಪ್ಪನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಸುರೇಶ್ ಬಿ. ಸ್ವಾಮಿರಾವ್ ಹಾಗೂ ತ್ರಿಭುವನ್ ವಿರುದ್ಧ ದೂರು ದಾಖಲಾಗಿತ್ತು. ಇದರ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು, ತ್ರಿಭುವನ್‍ನನ್ನು ಬಂಧಿಸಿದ್ದರು. ಈ ನಡುವೆ ಸುರೇಶ್ ಬಿ. ಸ್ವಾಮಿರಾವ್‍ರವರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದರು. 

ವೈರಲ್ ಆಗಿತ್ತು: ಸುರೇಶ್ ಬಿ. ಸ್ವಾಮಿರಾವ್ ಹಾಗೂ ತ್ರಿಭುವನ್‍ರವರು ರೈಲ್ವೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ನಡೆಸಿದ ಹಲ್ಲೆಯ ದೃಶ್ಯವನ್ನು ಮೊಬೈಲ್ ಫೋನ್‍ನಲ್ಲಿ ಕೆಲವರು ಸೆರೆ ಹಿಡಿದಿದ್ದರು. ಈ ದೃಶ್ಯಾವಳಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News