ಕುಲಸಚಿವ ಪದನಾಮದ ದುರ್ಬಳಕೆ ನಿಲ್ಲಲಿ

Update: 2018-09-20 18:33 GMT

ಮಾನ್ಯರೇ,

ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಕೆಲವು ಸ್ವಾಯತ್ತ ಕಾಲೇಜಿನ ಪರೀಕ್ಷಾ ನಿಯಂತ್ರಕರು (ಕಂಟ್ರೋಲರ್ ಆಫ್ ಎಕ್ಸಾಮಿನೇಶನ್) ತಮ್ಮನ್ನು ತಾವೇ ಸ್ವಘೋಷಿತ ಸ್ವಾಯತ್ತ ಕಾಲೇಜಿನ ಕುಲಸಚಿವರೆಂದು ಕರೆಯಿಸಿಕೊಳ್ಳುವುದು, ಕಾಲೇಜಿನ ಕುಲಸಚಿವರೆಂದು ಪತ್ರಿಕಾ ಹೇಳಿಕೆ ನೀಡುವುದು, ಕಾರ್ಯಕ್ರಮಗಳ ಪತ್ರಿಕಾ ವರದಿಗಳಲ್ಲಿ ಕುಲಸಚಿವ ಎಂದು ನಮೂದಿಸುವುದು ಸಾಮಾನ್ಯವಾಗುತ್ತಲಿದೆ.
ನಾನು ತಿಳಿದ ಪ್ರಕಾರ ಕುಲಸಚಿವ ಹುದ್ದೆ ಪ್ರಾಂಶುಪಾಲರ ಹುದ್ದೆಗಿಂತ ಮೇಲ್ಪಟ್ಟದ್ದಾಗಿರುತ್ತದೆ ಮತ್ತು ಕೇವಲ ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಯವರ/ಸಹ ಕುಲಪತಿಯವರ ನಂತರದ ಮಟ್ಟದಲ್ಲಿರುತ್ತದೆ. ಕುಲಸಚಿವರಾಗಲು ಕನಿಷ್ಠ ಪ್ರೊಫೆಸರ್ (ಪ್ರಾಧ್ಯಾಪಕ) ಮಟ್ಟದ ಹುದ್ದೆಯಲ್ಲಿರಬೇಕಾಗುತ್ತದೆ. ಯಾವುದೇ ಶಾಸನಬದ್ಧ ಸಮರ್ಥನೆ, ಶೈಕ್ಷಣಿಕ ಅರ್ಹತೆ ಮತ್ತು ನೈತಿಕ ಸ್ಥಾನಮಾನವಿಲ್ಲದೆ ಸ್ವಾಯತ್ತ ಕಾಲೇಜಿನವರು ಕುಲಸಚಿವ ಪದನಾಮ ಉಪಯೋಗಿಸುವುದು ಎಷ್ಟು ಸರಿ? ಯುಜಿಸಿಯ ನಿಯಮಗಳಲ್ಲಿ ಸ್ವಾಯತ್ತ ಕಾಲೇಜುಗಳಲ್ಲಿ ಕೇವಲ ಪರೀಕ್ಷಾ ನಿಯಂತ್ರಕರ ಹುದ್ದೆ ಮಾತ್ರ ಸೃಷ್ಟಿಸಲಾಗಿದೆ. ಮಂಗಳೂರು ವಿವಿ ಹೊರತುಪಡಿಸಿ ಕರ್ನಾಟಕದಾದ್ಯಂತ ಅಥವಾ ಇನ್ಯಾವುದೇ ರಾಜ್ಯದಲ್ಲಿ ಸ್ವಾಯತ್ತ ಕಾಲೇಜುಗಳು ಕುಲಸಚಿವ ಪದನಾಮ ಉಪಯೋಗಿಸುವುದು ಕಂಡುಬರುವುದಿಲ್ಲ. ಈ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ನಿಲುವು ಸ್ಪಷ್ಟವಾಗಬೇಕಾಗಿದೆ. ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ವಿಭಾಗ ಮತ್ತು ರಾಜ್ಯ ಶಿಕ್ಷಣ ಪರಿಷತ್ತು ಸರಿಯಾದ ಮಾಹಿತಿ ನೀಡಲು ಕೋರಿಕೆ. ಕಾನೂನು ಬಾಹಿರವಾಗಿ ಸ್ವಾಯತ್ತ ಕಾಲೇಜಿನವರು ಕುಲಸಚಿವ ಪದನಾಮದ ದುರ್ಬಳಕೆ ಮಾಡುತ್ತಿದ್ದರೆ ಅದು ಶಿಕ್ಷಿತ ವರ್ಗ ಜನಸಾಮಾನ್ಯರಿಗೆ ಮತ್ತು ಸಮಾಜಕ್ಕೆ ಮಾಡುವ ವಂಚನೆಯೇ ಸರಿ. ಆದುದರಿಂದ ಸ್ವಾಯತ್ತ ಕಾಲೇಜಿನವರು ಮಾಡುವ ಕುಲಸಚಿವ ಪದನಾಮದ ದುರ್ಬಳಕೆಯನ್ನು ತುರ್ತಾಗಿ ನಿಷೇಧಿಸಬೇಕು

Writer - -ಶಿಕ್ಷಕ, ಮಂಗಳೂರು

contributor

Editor - -ಶಿಕ್ಷಕ, ಮಂಗಳೂರು

contributor

Similar News