ಮಂಡ್ಯ: ಕೂಲಿ ಕಾರ್ಮಿಕಳನ್ನು ಕಾರಿನಲ್ಲಿ ಎಳೆದೊಯ್ದ ವೀಡಿಯೋ ವೈರಲ್; ಪ್ರಕರಣ ದಾಖಲು

Update: 2018-09-20 18:45 GMT

ಮಂಡ್ಯ, ಸೆ.20: ಮುಂಗಡ ಹಣ ಪಡೆದುಕೊಂಡಿದ್ದ ತಮಿಳುನಾಡು ಮೂಲದ ಕೂಲಿ ಕಾರ್ಮಿಕ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಬಲವಂತವಾಗಿ ಎಳೆದೊಯ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಕೂಲಿ ಮಾಡಿಕೊಂಡು ಮದ್ದೂರು ತಾಲೂಕು ಬೆಕ್ಕಳಲೆ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಜಾನಕಮ್ಮ ಎಂಬಾಕೆಯನ್ನು ಎಳೆದೊಯ್ದಿರುವ ವೀಡಿಯೋ ವೈರಲ್ ಆಗಿದೆ. ಮದ್ದೂರು ತಾಲೂಕು ಕುದುರಗುಂಡಿ ಗ್ರಾಮದ ನಾಗೇಶ್ ಮತ್ತು ಅವರ ಸಹಚರರಾದ ಪಾಂಡು ಹಾಗೂ ಕರಿಯಪ್ಪ ಎಂಬುವರು ಈ ಕೃತ್ಯವೆಸಗಿದ್ದು, ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿನ್ನೆಲೆ: ತಮಿಳುನಾಡು ಮೂಲದ ಚಿನ್ನತಂಬಿ ಜಾನಕಮ್ಮ ದಂಪತಿ ಕುದುರಗುಂಡಿ ಗ್ರಾಮದ ನಾಗೇಶ್ ಬಳಿ 50 ಸಾವಿರ ಮುಂಗಡ ಪಡೆದು, ನಾಲ್ಕು ವರ್ಷದಿಂದ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಕುದರುಗುಂಡಿಯಿಂದ ನಾಪತ್ತೆಯಾದ ಚಿನ್ನತಂಬಿ ಜಾನಕಮ್ಮ ದಂಪತಿ, ಬೆಕ್ಕಳಲೆ ಗ್ರಾಮಕ್ಕೆ ಬಂದು ಕೂಲಿ ಮಾಡಿಕೊಂಡಿದ್ದರು. ಈ ನಡುವೆ ಚಿನ್ನತಂಬಿ ಸಾವನ್ನಪ್ಪಿದ್ದು, ಜಾನಕಮ್ಮ ಒಬ್ಬಳೇ ಇದ್ದಳು ಎಂದು ತಿಳಿದು ಬಂದಿದೆ. ಚಿನ್ನತಂಬಿ ಕುಟುಂಬ ಬೆಕ್ಕಳಲೆ ಗ್ರಾಮದಲ್ಲಿ ವಾಸವಿದೆ ಎಂಬು ವಿಷಯ ತಿಳಿದ ನಾಗೇಶ್, ತನ್ನ ಸಹಚರರೊಂದಿಗೆ ಬೆಕ್ಕಳಲೆ ಗ್ರಾಮದಕ್ಕೆ ತೆರಳಿ ಜಾನಕಮ್ಮನನ್ನು ಬಲವಂತವಾಗಿ ಕಾರಿನಲ್ಲೆ ಎಳೆದುಕೊಂಡು ಹೋಗಿದ್ದಾರೆ. ನಾಗೇಶ್ ಜತೆ ತೆರಳಲು ನಿರಾಕರಿಸಿದ ಜಾನಕಮ್ಮನಿಗೆ ಹಲ್ಲೆ ನಡೆಸುತ್ತಿರುವುದು, ಗ್ರಾಮಸ್ಥರು ಮೂಕಪ್ರೇಕ್ಷಕರಾಗಿ ನಿಂತಿರುವುದು, ಬಾಯಿ ಬಡಿದುಕೊಂಡರೂ ಬಲವಂತವಾಗಿ ಕಾರಿನಲ್ಲಿ ಎಳೆದೊಯ್ದಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕೊಪ್ಪ ಠಾಣೆ ಪೊಲೀಸರು ನಾಗೇಶ್ ಮತ್ತು ಸಹಚರರ ವಿರುದ್ಧ ಪ್ರಕರಣ ದಾಖಲಿಸಿದ್ದರೆ, ವಿಷಯ ತಿಳಿದ ಮದ್ದೂರು ತಹಸೀಲ್ದಾರ್ ರೂಪ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.

ಅಮಾನವೀಯ ಕೃತ್ಯ: ತಹಸೀಲ್ದಾರ್ ರೂಪ
'ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ನೊಂದ ಮಹಿಳೆಯಿಂದ ಮಾಹಿತಿ ಪಡೆದಿದ್ದೇನೆ. ಆಕೆ ತಮಿಳುನಾಡು ಮೂಲದವಳು ಎಂದು ತಿಳಿದು ಬಂದಿದೆ. ಬಲವಂತವಾಗಿ ಎಳೆದೊಯ್ದು ಹಲ್ಲೆ ನಡೆಸಲಾಗಿದೆ' ಎಂದು ರೂಪ ತಿಳಿಸಿದ್ದಾರೆ.

ಈಗಾಗಲೇ ಕೊಪ್ಪ ಪೊಲೀಸ್ ಠಾಣೆಯಲ್ಲಿ ಜತೆಗೆ, ಜೀತವಿಮುಕ್ತ ಪ್ರಾಧಿಕಾರದಿಂದಲೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪರಿಶೀಲಿಸಿ ಕಾನೂನಾತ್ಮಕವಾಗಿ ಕ್ರಮ ಜರುಗಿಸಲಾಗುವುದು ಎಂದು ಅವರು ಮಾಧ್ಯಮದವರಿಗೆ ಸ್ಪಷ್ಟಪಡಿಸಿದರು.

ತಾಲೂಕಿನಲ್ಲಿ ಜೀತ ಪದ್ದತಿ ಜೀವಂತವಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರಕಾರದ ವತಿಯಿಂದ ಜೀತಮುಕ್ತ ಆಂದೋಲನ ನಡೆಸಲಾಗುತ್ತಿದೆ. ಅಂತಹ ಪ್ರಕರಣ ಕಂಡುಬಂದರೆ ಕ್ರಮವಹಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News