ಭಾರತ- ಪಾಕ್ ವಿದೇಶಾಂಗ ಸಚಿವರ ಭೇಟಿ?

Update: 2018-09-21 05:03 GMT

ಹೊಸದಿಲ್ಲಿ, ಸೆ.21: ಭಾರತ ಹಾಗೂ ಪಾಕಿಸ್ತಾನ ನಡುವೆ 2015ರ ಬಳಿಕ ಮೊತ್ತ ಮೊದಲ ಬಾರಿಗೆ ದ್ವಿಪಕ್ಷೀಯ ಮಾತುಕತೆಯ ಲಕ್ಷಣಗಳು ಕಂಡುಬಂದಿವೆ. ಉಭಯ ದೇಶಗಳ ವಿದೇಶಾಂಗ ಸಚಿವರು ಈ ತಿಂಗಳ ಕೊನೆಗೆ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯಸಭೆ ಅಧಿವೇಶನದ ವೇಳೆ ಪರಸ್ಪರ ಭೇಟಿಯಾಗುವ ನಿರೀಕ್ಷೆ ಇದೆ.

ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್‌ಖಾನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ವಿದೇಶಾಂಗ ಸಚಿವರ ಪರಸ್ಪರ ಭೇಟಿಗೆ ಅವಕಾಶ ಕೋರಿದ್ದಾರೆ. ಭಾರತ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಉಭಯ ಮುಖಂಡರಿಗೆ ಅನುಕೂಲವಾಗುವ ದಿನ ನ್ಯೂಯಾರ್ಕ್‌ನಲ್ಲಿ ಭೇಟಿ ಮಾಡಬಹುದು ಎಂದು ಪತ್ರ ಬರೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಗಳು ಹೇಳಿವೆ.

ಸ್ವತಃ ಪಾಕಿಸ್ತಾನಿ ಪ್ರಧಾನಿಯಿಂದಲೇ ಪತ್ರ ಬಂದಿದ್ದು, ಸೋಮವಾರ ಮೋದಿಗೆ ಈ ಪತ್ರ ವಿತರಿಸಲಾಗಿದೆ. ಇದರಿಂದ ಭೇಟಿ ಪ್ರಸ್ತಾವದ ಬಗ್ಗೆ ಭಾರತಕ್ಕೆ ಹಿಂಜರಿಕೆಯಿಂದ ಹೊರಬರಲು ಸಾಧ್ಯವಾಗಿದೆ. ಆದರೆ ಮಾತುಕತೆ ಮತ್ತು ಭಯೋತ್ಪಾದಕ ಕೃತ್ಯಗಳು ಜತೆಜತೆಗೆ ಸಾಗಲು ಸಾಧ್ಯವಿಲ್ಲ ಎಂದು ಭಾರತ ತನ್ನ ನಿಲುವು ಸ್ಪಷ್ಟಪಡಿಸಿದೆ ಎಂದು ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಈ ಮಾತುಕತೆಯನ್ನು ಸಮಗ್ರ ದ್ವಿಪಕ್ಷೀಯ ಮಾತುಕತೆಯ ಪುನರಾರಂಭ ಎಂದು ತಪ್ಪಾಗಿ ಭಾವಿಸಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಸಾರ್ಕ್ ಶೃಂಗಸಭೆ ಆಯೋಜಿಸುವ ಸಾಧ್ಯತೆ ಪರಿಶೀಲಿಸುವಂತೆಯೂ ಇಮ್ರಾನ್ ಖಾನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಆದರೆ ಇದಕ್ಕೆ ಇನ್ನೂ ಅನುಕೂಲಕರ ವಾತಾವರಣ ಇಲ್ಲ ಎಂದು ಭಾರತ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News