ಹೊಸಪೇಟೆ: ಕಟ್ಟಡ ಕುಸಿದು ಬಾಲಕಿ ಮೃತ್ಯು, 50ಕ್ಕೂ ಅಧಿಕ ಮಂದಿಗೆ ಗಾಯ

Update: 2018-09-21 05:29 GMT

ಹೊಸಪೇಟೆ, ಸೆ.21: ಇಲ್ಲಿನ ಚಿತ್ತವಾಡ್ಗಿ ಎಂಬಲ್ಲಿ ಮಸೀದಿಗೆ ಸಂಬಂಧಿಸಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ ವೀಕ್ಷಿಸಲು ಜನರು ನಿಂತಿದ್ದ ಕಟ್ಟಡವೊಂದು ಕುಸಿದ ಪರಿಣಾಮ ಓರ್ವ ಬಾಲಕಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಹುಲಗಪ್ಪ ಎಂಬವರ ಪುತ್ರಿ ಉಷಾ(14) ಮೃತಪಟ್ಟ ಬಾಲಕಿ. ಈಕೆ ಚಿತ್ತವಾಡ್ಗಿಯ ವಿನೋಭಾ ಭಾವೆ ಸರಕಾರಿ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಚಿತ್ತವಾಡ್ಗಿಯ ರಾಮಾಲಿ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಇಂದು ಬೆಳಗ್ಗೆ ಮೆರವಣಿಗೆಯ ಸಂದರ್ಭ ಈ ದುರಂತ ಸಂಭವಿಸಿದೆ.

ಮೆರವಣಿಗೆಯ ಹಿನ್ನೆಲೆಯಲ್ಲಿ ಚಿತ್ತವಾಡ್ಗಿಯಲ್ಲಿ ಇಂದು ಬೆಳಗ್ಗೆ ಭಾರೀ ಜನಸಂದಣಿಯಿತ್ತು. ಮೆರವಣಿಗೆ ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿರುವ ಕಟ್ಟಡಗಳ ಮೇಲೆಲ್ಲ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಚಿತ್ತವಾಡ್ಗಿ ವೃತ್ತದ ಬಳಿ ಮೆರವಣಿಗೆ ತಲುಪುತ್ತಿದ್ದಂತೆ ಅಲ್ಲಿನ ಹಳೆಯ ಕಟ್ಟಡವೊಂದರಲ್ಲಿ ಮೇಲೆ ನೂರಕ್ಕೂ ಅಧಿಕ ನಿಂತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಈ ಕಟ್ಟಡದ ಒಂದು ಪಾರ್ಶ್ವ ಕುಸಿದಿದೆ. ಈ ವೇಳೆ ಕಟ್ಟಡದ ಅಡಿಭಾಗದಲ್ಲಿ ನಿಂತಿದ್ದ ಉಷಾ ಕಟ್ಟಡಗಳ ಅವಶೇಷಗಳಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಉಳಿದಂತೆ ಕಟ್ಟಡದ ಮೇಲೆ ಹಾಗೂ ಅಡಿಭಾಗದಲ್ಲಿ ನಿಂತಿದ್ದ ಸುಮಾರು 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಆರೋಗ್ಯ ಸಚಿವರ ಭೇಟಿ

ಘಟನೆಯ ವಿವರ ತಿಳಿದು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಶಿವಾನಂದ ಎಸ್. ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

ದುರಂತದಲ್ಲಿ ಸಾವಿಗೀಡಾದ ಬಾಲಕಿ ಉಷಾಳ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ಘೋಷಿಸಿದ ಸಚಿವರು, ಸರಕಾರದಿಂದ ಇನ್ನಷ್ಟು ಪರಿಹಾರ ಒದಗಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News