ರಾಜಕಾರಣಿಗಳು ನಮ್ಮನ್ನು ಅವಮಾನಿಸಿದರೆ ನಾಲಗೆ ಸೀಳುತ್ತೇನೆ: ಎಚ್ಚರಿಕೆ ನೀಡಿದ ಪೊಲೀಸ್ ಸಿಬ್ಬಂದಿ

Update: 2018-09-21 11:03 GMT

ಹೈದರಾಬಾದ್, ಸೆ.21: “ಯಾವುದೇ ರಾಜಕಾರಣಿ ಪೊಲೀಸರನ್ನು ಅವಮಾನಿಸಿದರೆ ನಾನು ಅವರ ನಾಲಗೆಯನ್ನು ಸೀಳುತ್ತೇನೆ,'' ಎಂದು ಎಚ್ಚರಿಸಿದ್ದಾರೆ ಅನಂತಪುರ್ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಗೊರಂತ್ಲ ಮಾಧವ್.

ಅನಂತಪುರ್ ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ರಾಜಕಾರಣಿಗಳು ಪೊಲೀಸರನ್ನು ನಿಂದಿಸಿ ನೀಡುವ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ರಾಜಕಾರಣಿಗಳು ಮಾಧ್ಯಮಗಳ ಮೂಲಕ ಪೊಲೀಸರನ್ನು ಅವಮಾನಿಸುತ್ತಿದ್ದಾರೆ ನಾವು ಕೂಡ ಇದೇ ರೀತಿ ಪ್ರತಿಕ್ರಿಯಿಸಬೇಕಾಗಬಹುದು ಎಂದು ಅವರು ಹೇಳಿದ್ದಾರೆ.

“ಸಮಾಜವಿರೋಧಿ ಶಕ್ತಿಗಳು ತೊಂದರೆ ಸೃಷ್ಟಿಸಿದಾಗ ಕಾನೂನು ಸುವ್ಯವಸ್ಥೆ ಕಾಪಾಡಿದವರು ಪೊಲೀಸರು. ಆದರೆ ಶಾಸಕರು ಮತ್ತು ಸಂಸದರಿಗೆ ಪೊಲೀಸರಿಗೆ ನೋವುಂಟು ಮಾಡುವ ಹೇಳಿಕೆಗಳನ್ನು ನೀಡುವುದು ಅಭ್ಯಾಸವಾಗಿ ಬಿಟ್ಟಿದೆ, ಇಲ್ಲಿಯ ತನಕ ನಾವು ತಾಳ್ಮೆಯಿಂದಿದ್ದೆವು ಅವರು ಪೊಲೀಸ್ ಪಡೆಗೆ ಅಗೌರವ ತೋರಿಸಲು  ಸಾಧ್ಯವಿಲ್ಲ, ನಾವಿರುವುದು ಜನಸಾಮಾನ್ಯರಿಗೆ ಸಹಾಯ ಮಾಡಲು ರಾಜಕಾರಣಿಗಳಿಗೆ ಭದ್ರತೆ ನೀಡುವುದಕ್ಕಲ್ಲ'' ಎಂದವರು ಹೇಳಿದರು.

ಈ ವಾರ ತಡಿಪತ್ರಿಯಲ್ಲಿನ ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆಂದು ತರಾಟೆಗೆ ತೆಗೆದುಕೊಂಡ ಅನಂತಪುರ್ ಸಂಸದ ಟಿಡಿಪಿಯ ಜೆ ಸಿ ದಿವಾಕರ ರೆಡ್ಡಿ ಹೇಳಿಕೆಗೆ ಅವರು ಪ್ರತಿಕ್ರಿಯಿಸಿ ಮೇಲಿನಂತೆ ಹೇಳಿದ್ದಾರೆ. ಚಿನ್ನಪೊಲಮದ ಗ್ರಾಮದಲ್ಲಿ ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿ ಭುಗಿಲೆದ್ದ ಹಿಂಸೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಹಲವರು ಗಾಯಗೊಂಡಿದ್ದರು.

ಸ್ವಾಮಿ ಪ್ರಬೋಧಾನಂದ ಆಶ್ರಮದ ನಿವಾಸಿಗಳು ಮತ್ತು ಸ್ಥಳೀಯರ ನಡುವೆ ಘರ್ಷಣೆ ಸಂಭವಿಸಿದಾಗ ಹಲವಾರು ಆಶ್ರಮ ವಾಸಿಗಳು ಪೆಟ್ರೋಲ್ ಬಾಂಬುಗಳನ್ನೆಸೆದ ಪರಿಣಾಮ ಹಲವು ವಾಹನಗಳು ಹಾನಿಗೊಂಡಿದ್ದವು. “ಪೊಲೀಸರು ಇಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ. ಅವರೇಕೆ ಆಶ್ರಮದೊಳಕ್ಕೆ ಹೊಕ್ಕು ಆರೋಪಿಗಳನ್ನು ಬಂಧಿಸಿಲ್ಲ?'' ಎಂದು ಸಂಸದ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಮಾಧವ್ ``ರಾಜಕಾರಣಿಗಳು ವಿಫಲವಾಗುವುದಿಲ್ಲವೇನು ?, ತಪ್ಪುಗಳನ್ನು ಅಥವಾ ಸಣ್ಣ ನಿರ್ಲಕ್ಷ್ಯವನ್ನು ಮಾನವರು ತೋರುವುದು ಸಹಜ, ಅದಕ್ಕೆ  ಏನು ಬೇಕಾದರೂ ಹೇಳಲು ಸಾಧ್ಯವಿಲ್ಲ,'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News