ಮಡಿಕೇರಿ: ತಹಶೀಲ್ದಾರ್ ಮೇಲೆ ಹಲ್ಲೆ ಆರೋಪ; ಇಬ್ಬರು ಮಹಿಳೆಯರು ಸೇರಿ 15 ಮಂದಿಯ ಬಂಧನ

Update: 2018-09-21 11:23 GMT

ಮಡಿಕೇರಿ, ಸೆ.21: ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತದ ಮೂಲಕ ನಡೆಯುತ್ತಿರುವ ಪರಿಹಾರ ಕೇಂದ್ರಕ್ಕೆ ಸಂತ್ರಸ್ತರ ಹಾಜರಾತಿ ಪಡೆಯಲು ತೆರಳಿದ್ದ ಸೋಮವಾರಪೇಟೆ ತಹಶೀಲ್ದಾರರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ಮಹಿಳೆಯರು ಸೇರಿದಂತೆ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ಕರ್ತವ್ಯ ನಿರತ ತಹಶೀಲ್ದಾರರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಮಕ್ಕಂದೂರಿನ ರಾಟೆಮನೆ ಕಾಲೋನಿಯ ಪಿ.ಟಿ.ಸಂಜೀವ, ಟಿ.ವಿ.ವಸಂತಕುಮಾರ್, ಟಿ.ಸಿ. ಸಿದ್ದು, ಆರ್.ಅಣ್ಣಪ್ಪ, ಪಿ.ಕೆ.ಸಂಜು, ಪಿ.ಕೆ.ತಿಮ್ಮಪ್ಪ, ಪಿ.ಕೆ.ಮಂಜುನಾಥ, ಎಂ.ಎಂ.ಮೋಹನ್, ಆನಂದ, ಪಿ.ವಿ.ರೋಶನ್, ಪಿ.ಎಸ್.ಮಂಜುನಾಥ್, ಚಿತ್ರಾ, ನಿಶಾ, ಕಡಗದಾಳುವಿನ ಸಿ.ಕೆ.ತೇಜಕುಮಾರ್, ಹಾಲೇರಿಯ ಪೈಸಾರಿಯ ಎನ್.ಇ.ಆದೀಶ್‍ಕುಮಾರ್ ಎಂಬವರುಗಳನ್ನು ಬಂಧಿಸಲಾಗಿದ್ದು, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಜಿಲ್ಲಾಡಳಿತದಿಂದ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ತೆರೆದು ಊಟ, ವಸತಿ ಕಲ್ಪಿಸಲಾಗಿದ್ದು, ಇಂತಹ ಕೇಂದ್ರಗಳಲ್ಲಿ ಸಂತ್ರಸ್ತರಲ್ಲದ ಕೆಲವರು ಸೇರಿಕೊಂಡು ಸರಕಾರದ ಪರಿಹಾರ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿತ್ತು. ಅದರಂತೆ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಸುಮಾರು 287 ಮಂದಿಗೆ ಆಶ್ರಯ ಪಡೆದಿದ್ದು, ಸರಕಾರದ ಸವಲತ್ತುಗಳ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರ ಪೂರ್ವಾಪರಗಳ ಬಗ್ಗೆ ಮಾಹಿತಿ ಕಲೆಹಾಕುವಂತೆ ತಾಲೂಕು ದಂಡಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿತ್ತು ಎಂದು ಸುಮನ್ ತಿಳಿಸಿದರು.

ವಾಲ್ಮೀಕಿ ಭವನದ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಲ್ಲದವರೂ ಅನಧಿಕೃತವಾಗಿ ಸೇರಿಕೊಂಡಿರುವುದಾಗಿ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸೆ.18ರಂದು ರಾತ್ರಿ ಸೋಮವಾರಪೇಟೆ ತಾಲೂಕು ದಂಡಾಧಿಕಾರಿ ಮಹೇಶ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದರು. ಕೇಂದ್ರದಲ್ಲಿರುವವರ ಹಾಜರಾತಿ ಪಡೆಯುತ್ತಿದ್ದ ಸಂದರ್ಭ ಕೆಲವರು ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ವಾಗ್ವಾದಕ್ಕಿಳಿದು ತಾಲೂಕು ದಂಡಾಧಿಕಾರಿಯವರಿಗೆ ಬೆದರಿಕೆ ಹಾಕಿದ್ದರು. ಇದಕ್ಕೆ ಬೆದರದೆ ಪರಿಶೀಲನೆಗೆ ಮುಂದಾದಾಗ ಅಲ್ಲಿದ್ದ ಸಂಜೀವ, ವಸಂತ ಹಾಗೂ ಇತರರು ದಂಡಾಧಿಕಾರಿಯವರನ್ನು ಸುತ್ತುವರಿದು ಅವರ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಈ ಸಂದರ್ಭ ಕಂದಾಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಮಹೇಶ್ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಕುಶಾಲನಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ನೀಡಿದ ದೂರಿನ ಅನ್ವಯ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದ ಮೇರೆಗೆ, ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಘಟನೆಯ ಬಗ್ಗೆ ಚಿತ್ರೀಕರಿಸಿದ್ದ ವೀಡಿಯೋ ಕ್ಲಿಪ್‍ಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ಸುಮನ್ ತಿಳಿಸಿದರು.

ಆರಂಭದಲ್ಲಿ ತಾಲೂಕು ದಂಡಾಧಿಕಾರಿಯವರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ಕ್ಲಿಪ್ ಹರಿದಾಡುತ್ತಿತ್ತಾದರೂ, ಆ ಬಳಿಕ ಅಲ್ಲಿದ್ದ ಇತರ ವೀಡಿಯೋಗಳನ್ನು ಗಮನಿಸಿ ಕೂಲಂಕಷ ತನಿಖೆ ನಡೆಸಿದಾಗ ಇಡೀ ಪ್ರಕರಣದ ಸತ್ಯಾಸತ್ಯತೆ ಬೆಳಕಿಗೆ ಬಂದಿದೆ. ಮಹಿಳೆಯರಿಬ್ಬರು ಅವಾಚ್ಯ ಶಬ್ಧಗಳಿಂದ ದಂಡಾಧಿಕಾರಿಯವರನ್ನು ನಿಂದಿಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದ್ದು, ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಹಲ್ಲೆ ನಡೆದಿದೆ ಎಂಬುದು ಸುಳ್ಳು ಎಂದು ಎಸ್‍ಪಿ ಸುಮನ್ ಸ್ಪಷ್ಟಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News