ದಂಗೆ ಪದ ಬಳಕೆ: ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಮಡಿಕೇರಿಯಲ್ಲಿ ಬಿಜೆಪಿ ಧರಣಿ

Update: 2018-09-21 11:36 GMT

ಮಡಿಕೇರಿ, ಸೆ.21: ಜನರನ್ನು ದಂಗೆ ಏಳುವಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ನಗರದಲ್ಲಿ ಪ್ರತಿಭಟನೆ ನಡೆಸಿತು. 

ಸರಕಾರ ಅಸ್ಥಿರಗೊಳಿಸಲು ಮುಂದಾದಲ್ಲಿ ದಂಗೆ ಏಳಲು ರಾಜ್ಯದ ಜನತೆಗೆ ಕರೆ ನೀಡುವುದಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಹೋರಾಟ ನಡೆಸುವ ಅಧಿಕಾರವಿದೆ. ಆದರೆ ಸಂವಿಧಾನದಡಿಯಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಮುಖ್ಯಮಂತ್ರಿಯೇ ದಂಗೆ ಏಳುವಂತೆ ಕರೆ ನೀಡುವುದು ಅಸಂವಿಧಾನಿಕವಾಗಿದೆ ಎಂದು ಟೀಕಿಸಿದರಲ್ಲದೆ, ಈ ಸಂಬಂಧ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ತಾವು ಯಾವ ಪಕ್ಷದಲ್ಲಿರಬೇಕು ಎಂದು ತೀರ್ಮಾನಿಸುವ ಅಧಿಕಾರ ಶಾಸಕರಿಗಿದೆ. ಆದರೆ ಅವರ ಪಕ್ಷದ ಶಾಸಕರನ್ನು ಹತೋಟಿಯಲ್ಲಿಟ್ಟುಕೊಳ್ಳಲು ವಿಫಲರಾಗಿರುವ ಮುಖ್ಯಮಂತ್ರಿಯವರು ಬಿಜೆಪಿ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಅವರು ಮುಖ್ಯಮಂತ್ರಿಯೇ ಎಂಬ ಸಂಶಯ ಮೂಡುತ್ತಿದೆ ಎಂದು ಟೀಕಿಸಿದರು. ಯಾವುದೇ ಒಬ್ಬ ಮುಖ್ಯಮಂತ್ರಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ, ಸಾಮರಸ್ಯವನ್ನು ಉಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಆದರೆ ಅದನ್ನು ಮರೆತು ಕುಮಾರಸ್ವಾಮಿ ಅವರು ದಂಗೆ ಏಳುವಂತೆ ಜನತೆಗೆ ಕರೆ ನೀಡಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಆದುದರಿಂದ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವ ಅರ್ಹತೆಯನ್ನು ಕಳೆದುಕೊಂಡಿದ್ದು, ಅವರ ವಿರುದ್ಧ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು

ರಾಜ್ಯದ ಜನತೆ ಬಹುಮತದಿಂದ ಆಯ್ಕೆ ಮಾಡಿದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಏಕೈಕ ಉದ್ದೇಶದಿಂದ ರಾಜ್ಯದ ಜನತೆಯಿಂದ ತಿರಸ್ಕರಿಸಲ್ಪಟ್ಟು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಜಾತ್ಯತೀತ ಜನತಾದಳವನ್ನು ಅಧಿಕಾರಕ್ಕೆ ತಂದ ಕಾಂಗ್ರೆಸ್ ಕೂಡಾ ಮುಖ್ಯಮಂತ್ರಿಯವರ ನಡೆಗೆ ಜವಾಬ್ದಾರಿ ಹೊರಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನ ರವಿ ಮಾತನಾಡಿ, ದಂಗೆ ಏಳುವಂತೆ ರಾಜ್ಯದ ಜನತೆಗೆ ಕರೆ ನೀಡುವ ಮೊದಲು ತಾನು ಮುಖ್ಯಮಂತ್ರಿ ಎಂಬುದನ್ನು ಕುಮಾರಸ್ವಾಮಿ ಅವರು ಮರೆತಂತಿದೆ. ಬಿಜೆಪಿ ಯುವ ಮೋರ್ಚಾ ಇದೀಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದು, ಮುಂದೆ ಎಲ್ಲಾ ಸಚಿವರುಗಳ ಮನೆಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು  ಎಚ್ಚರಿಕೆ ನೀಡಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ಎ.ಕೆ.ಮನುಮುತ್ತಪ್ಪ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾದವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ರಾಜ್ಯದ ಜನತೆ ದಂಗೆ ಏಳುವಂತೆ ಮುಖ್ಯಮಂತ್ರಿಯೇ ಕರೆ ನೀಡಿರುವುದು ಈ ರಾಜ್ಯದ ದುರಂತ ಎಂದು ಟೀಕಿಸಿದರು. ಅಲ್ಲದೆ ಈ ರೀತಿಯ ಹೇಳಿಕೆ ಮೂಲಕ ಜನರನ್ನು ಪ್ರಚೋದಿಸುತ್ತಿರುವ ಕುಮಾರಸ್ವಾಮಿ ಅವರು ಆ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆಯನ್ನು ಕಳೆದುಕೊಂಡಿದ್ದು, ಅವರು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಬಾರದು ಎಂದರು. ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಸರಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ವಿ.ಕೆ.ಲೋಕೇಶ್, ನಗರಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಸುಬ್ರಮಣಿ, ಪ್ರಮುಖರಾದ ಶಜಿಲ್‍ಕೃಷ್ಣ, ಬಿ.ಕೆ. ಅರುಣ್‍ಕುಮಾರ್, ಬಿ.ಕೆ.ಜಗದೀಶ್, ಕಂಠಿ ಕಾರ್ಯಪ್ಪ, ಭಾರತೀ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News