ಪ್ರಸ್ತುತ ರಾಜಕೀಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಚಿವ ಜಿ.ಟಿ.ದೇವೇಗೌಡ

Update: 2018-09-21 11:45 GMT

ಮೈಸೂರು,ಸೆ.21: ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಂತಹದೇನಾದರು ಇದ್ದರೆ ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿದೇವೇಗೌಡ ಹೇಳಿದರು.

ಮೈಸೂರು ಅರಮನೆ ಆವರಣದಲ್ಲಿ ಶುಕ್ರವಾರ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೆ ಏರ್ಪಡಿಸಿದ್ದ ಭೋಜನಕೂಟದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿಗಳ ದಂಗೆ ಹೇಳುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ರಾಜ್ಯದ ಅಭಿವೃದ್ದಿಗೆ ಅಡೆ ತಡೆ ಉಂಟುಮಾಡುವವರ ವಿರುದ್ಧ ದಂಗೆ ಏಳಿ ಎಂದು ಹೇಳಿರುವುದಾಗಿ ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಒಂದು ಕಡೆ ಬರ ಮತ್ತೊಂದು ಕಡೆ ನೆರೆ ಇಂತಹ ಸಂದರ್ಭದಲ್ಲಿ ಬಿಜೆಪಿಯವರು ಅಭಿವೃದ್ಧಿಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವ ಹಿನ್ನಲೆಯಲ್ಲಿ ಹೇಳಿದ್ದಾರೆ. ದಂಗೆ ಹೇಳಿ ಎಂದರೆ ಒಡೆದಾಡಿ ಅಂತಾ ಅಲ್ಲ ಎಂದ ಅವರು, ಈ ವಿಷಯವನ್ನು ದೊಡ್ಡದು ಮಾಡುವುದು ಬೇಡ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಸಂಪೂರ್ಣವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಡಳಿತ ನಡೆಸಲಿದ್ದಾರೆ ಎಂದರು. ದಸರಾ ಉದ್ಘಾಟನೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ನೆರವೇರಿಸಲಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ರಸ್ತೆಗಳ ಅಭಿವೃದ್ಧಿಗೆ 216 ಕೋಟಿ ರೂ: ಈಗಾಗಲೇ ಮೈಸೂರು ಜಿಲ್ಲೆಯ ರಸ್ತೆಗಳ ಅಭಿವೃದ್ದಿಗೆ 216 ಕೋಟಿ ರೂ. ಗಳ ಪ್ರಸ್ತಾವನೆಯನ್ನು ಲೊಕೋಪಯೋಗಿ ಇಲಾಖೆ ಸರ್ಕಾರಕ್ಕೆ ಕಳುಹಿಸಿದ್ದು, ಪ್ರವಾಸೋದ್ಯಮ ಅಭಿವೃದ್ದಿಗೆ 10 ಕೋಟಿ.ರೂ ಬೇಡಿಕೆ ಇಡಲಾಗಿದೆ. ಸರ್ಕಾರದ ಅನುಮೋದನೆ ದೊರೆತ ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಸೆ.25 ರೊಳಗೆ ದಸರಾ ಉಪಸಮಿತಿ ರಚನೆ: ದಸರ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳು ಸುಲಲಿತವಾಗಿ ನಡೆಯುವ ಉದ್ಧೇಶದಿಂದ ಉಪಸಮಿತಿಗಳನ್ನು ರಚಿಸಿ ಆಯಾ ಸದಸ್ಯರುಗಳಿಗೆ ಜವಾಬ್ದಾರಿ ನೀಡಲಾಗುತ್ತದೆ. ಈ ಹಿನ್ನಲೆಯಲ್ಲಿ ದಸರಾ ಉಪಸಮಿತಿ ರಚನೆಯನ್ನು ಸೆ.25 ರೊಳಗೆ ರಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಮೇಯರ್ ಆಯ್ಕೆ ವಿಳಂಬ: ದಸರಾ ಮಹೋತ್ಸವದಲ್ಲಿ ಮೈಸೂರಿನ ಪ್ರಥಮ ಪ್ರಜೆ ಅನುಪಸ್ಥಿತಿ ಕುರಿತು ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವುದರಿಂದ ಸ್ವಲ್ಪ ವಿಳಂಬವಾಗುತ್ತಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಬರದಿರುವುದು ಸಹ ಮೇಯರ್ ಆಯ್ಕೆಗೆ ಹಿನ್ನಡೆಯುಂಟಾಗಿದೆ. ಆದಷ್ಟು ಬೇಗ ಮೇಯರ್ ಆಯ್ಕೆ ಕುರಿತು ತೀರ್ಮಾನಿಸಲಾಗುವುದು ಎಂದು ಹೇಳಿದರು.

ಹಾಸ್ಯ ಚಟಾಕಿ: ಬಿಜೆಪಿ ಶಾಸಕರಾದ ರಾಮದಾಸ್, ಹರ್ಷವರ್ಧನ್, ಎಲ್.ನಾಗೇಂದ್ರ ನನ್ನ ಜೊತೆಯಲ್ಲೇ ಇದ್ದಾರೆ ಎಂದು ಸಚಿವ ಜಿ.ಟಿ.ದೇವೇಗೌಡ ನಗೆ ಚಟಾಕಿ ಹಾರಿಸಿದರು.

ಸಮ್ಮಿಶ್ರ ಸರ್ಕಾರದ ಅಭದ್ರತೆ ಕುರಿತು ಮಾತನಾಡುವ ವೇಳೆ ಬಿಜೆಪಿಯ ಎಷ್ಟು ಶಾಸಕರು ನಿಮ್ಮೊಂದಿಗಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಸರಾ ಗಜಪಡೆಗಳ ಮಾವುತರು, ಕಾವಾಡಿಗಳು ಮತ್ತು ಕುಟುಂಬಸ್ಥರ ಸಹಪಂಕ್ತಿ ಭೋಜನ ಕೂಟಕ್ಕೆ ಆಗಮಿಸಿದ್ದ ಬಿಜೆಪಿಯ ಶಾಸಕರನ್ನು ಕುರಿತು ಇವರೆಲ್ಲರೂ ನನ್ನ ಜೊತೆಯಲ್ಲೇ ಇದ್ದಾರೆ ಎಂದು ತಮಾಷೆಯಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News