ರಾಜ್ಯಪಾಲರು ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಬೇಕು: ಮಾಜಿ ಸಚಿವ ಎಸ್.ಶಿವಣ್ಣ

Update: 2018-09-21 12:12 GMT

ತುಮಕೂರು,ಸೆ.21: ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಿಂದ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಮುನ್ನ ರಾಜ್ಯಪಾಲರು ವಿಧಾನಸಭೆ ವಿಸರ್ಜಿಸಿ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ 1 ತಿಂಗಳಿನಿಂದ ರಾಜ್ಯದಲ್ಲಿ ಅಧಿಕಾರಕ್ಕಾಗಿ ರಾಜಕೀಯ ಚೆಲ್ಲಾಟ, ಪುಂಡಾಟಿಕೆ ನಡೆಯುತ್ತಿದ್ದು ರಾಜ್ಯದ ಜನರಲ್ಲಿ ಅಸಹ್ಯ ಮೂಡಿಸಿದೆ. ಸಮಾಜ ಬದುಕಬೇಕು, ಪ್ರಜಾಪ್ರಭುತ್ವ ಉಳಿಯಬೇಕು. ಇದಕ್ಕಾಗಿ ರಾಜ್ಯಪಾಲರು ಅಗತ್ಯ ವರದಿ ತರಿಸಿಕೊಂಡು ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

ಪ್ರಸಕ್ತ ರಾಜ್ಯದ ರಾಜಕೀಯ ವಿದ್ಯಾಮಾನಗಳು ರಾಷ್ಟ್ರಪತಿ ಆಡಳಿತ ಘೋಷಣೆಗೆ ಸೂಕ್ತವಾಗಿದ್ದು, ಇದಾದ ನಂತರ ಡಿಸೆಂಬರ್ ತಿಂಗಳಲ್ಲಿ ನಡೆಯುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಜೊತೆಯಲ್ಲಿಯೇ ಕರ್ನಾಟಕದಲ್ಲೂ ಚುನಾವಣೆ ನಡೆದು ಸ್ಪಷ್ಟ ಬಹುಮತದ ಸರಕಾರ ಅಸ್ತಿತ್ವಕ್ಕೆ ಬರುವಂತಾಗಲು ರಾಜ್ಯಪಾಲ, ರಾಷ್ಟ್ರಪತಿ, ಚುನಾವಣಾ ಆಯೋಗ, ಕರ್ನಾಟಕ ರಾಜ್ಯದ ರಾಜಕೀಯ ವಿದ್ಯಾಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ವಿನಂತಿಸಿದರು.

ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಒಂದೊಂದು ಜಾತಿಯ ನಾಯಕರ ಹಿಡಿತದಲ್ಲಿದ್ದು, ರಾಜಕೀಯ ನಾಯಕರು ತಮ್ಮ ಜಾತಿ, ಸಮುದಾಯದ ಹೆಸರಿನಲ್ಲಿ ಅಂಕಿ, ಅಂಶಗಳನ್ನು ಹೇಳಿಕೊಂಡು ತಮ್ಮ ಅಧಿಕಾರದ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಜನತೆಯ ಹಿತರಕ್ಷಣೆ, ಸಮಸ್ಯೆಯ ನಿವಾರಣೆಗೆ ಆಡಳಿತ ಪಕ್ಷವಾಗಲೀ, ವಿರೋಧ ಪಕ್ಷವಾಗಲೀ ಚರ್ಚಿಸಿ ಪರಿಹಾರ ಕಂಡುಕೊಳ್ಳದೆ ಇರುವುದು ಈ ನಾಡಿನ ಜನತೆಯ ದುರಾದೃಷ್ಟ ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಠಿ, ಕೆಲವು ಕಡೆ ಬರಗಾಲ ಇದ್ದು ಇಂತಹ ಜ್ವಲಂತ ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ರಾಜಕೀಯ ನಾಯಕರು ಗುಂಪುಗಾರಿಕೆ ಮಾಡಿಕೊಂಡು ಅಧಿಕಾರಕ್ಕಾಗಿ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಂಡು ಓಡಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೂಕ್ತವಲ್ಲ ಎಂದರು.

ಎಲ್ಲಾ ಪಕ್ಷಗಳ ರಾಜಕೀಯ ಮುತ್ಸದ್ದಿಗಳು ಅಧಿಕಾರಕ್ಕೋಸ್ಕರ ಕೆಸರೆರಚಾಟ ಮಾಡುತ್ತಾ ಪರಸ್ಪರ ದ್ವೇಷ, ಅಸೂಯೆ ರಾಜಕಾರಣ ಮಾಡುತ್ತಿದ್ದು, ಜನರು ದಂಗೆ ಎಳುವಂತೆ ಪ್ರೇರೇಪಿಸುವುದು ಸರಿಯಲ್ಲ. ಹಾಗೆಯೇ ಒಂದೊಂದು ಪಕ್ಷದ ಶಾಸಕರನ್ನು ಅಮೀಷ ಒಡ್ಡಿ ಸೆಳೆಯುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದ ಅವರು, ಸ್ವಾತಂತ್ರ್ಯ ಬಂದ ಹೊಸದರಲ್ಲಿ ನಡೆದ ಚುನಾವಣೆಯಲ್ಲಿ ಟಾಟಾ ಬಿರ್ಲಾ ಅವರಂತಹ ಶ್ರೀಮಂತರು ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ. ಸರಳ, ಆದರ್ಶ ವ್ಯಕ್ತಿಗಳು ರಾಜಕೀಯ ಪ್ರವೇಶ ಮಾಡುತ್ತಿದ್ದ ಕಾಲ ಹೋಗಿ ಈಗ ಶ್ರೀಮಂತರು, ಹಣ ಇರುವವರು ಮಾತ್ರ ರಾಜಕೀಯ ಅಧಿಕಾರ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದರು.

ಕಳೆದ 7 ದಶಕಗಳ ಹಿಂದೆ ಈ ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಸಮಯದಲ್ಲಿ ಚರ್ಚಿಲ್‍ರವರು ನಿಮ್ಮ ದೇಶದ ರಾಜಕಾರಣವು ಭವಿಷ್ಯದಲ್ಲಿ ಸ್ಕೌಂಡ್ರಲ್ಸ್ ಅಂಡ್ ರ್ಯಾಸ್ಕೆಲ್ಸ್ ಅವರ ಕೈಗೆ ಸಿಗುತ್ತದೆ ಎಂದು ಹೇಳಿದ ಮಾತು, ಇಂದಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಸರಿಯೇನೋ ಎಂಬಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ದೇವರು ಎನ್ನುವಂತೆ ಬಿಂಬಿಸಿ ಅವರಿಗೆ ಎಲ್ಲಾ ರೀತಿಯ ದಕ್ಷಿಣೆಗಳನ್ನು ಕೊಟ್ಟು ಗೆದ್ದು ಬರುವ ಜನಪ್ರತಿನಿಧಿಗಳು, ಜನಸಾಮಾನ್ಯರ ಸೇವೆ ಮಾಡುವುದನ್ನು ಬಿಟ್ಟು ಬೇರೆಲ್ಲವನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ನೀತಿಗೆಟ್ಟ ರಾಜಕಾರಣ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ರಾಜ್ಯದ ವಿದ್ಯಾರ್ಥಿಗಳು, ಯುವ ಸಮೂಹ, ಮುತ್ಸದ್ಧಿಗಳು, ಸಾರ್ವಜನಿಕರು ಪರಸ್ಪರ ಚೆರ್ಚೆಯ ಮೂಲಕ ಯೋಗ್ಯ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ ಕೆಟ್ಟವರಿಗೆ ತಕ್ಕ ಪಾಠ ಕಲಿಸಬೇಕು. ಈ ಬಗ್ಗೆ ಮಾಧ್ಯಮಗಳ ಸಹ ಸಂಪೂರ್ಣ ಸಹಕಾರ ನೀಡಿ ಬೆಳಕು ಚೆಲ್ಲುವ ಮೂಲಕ ಕಲುಷಿತ ರಾಜಕೀಯ ವಾತಾವರಣ ನಿರ್ಮೂಲನೆಗೆ ಶ್ರಮಿಸುವಂತೆ ಮನವಿ ಮಾಡಿಕೊಂಡರು.

ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ಜಯಸಿಂಹರಾವ್, ಶಾಂತರಾಜು, ಕೆ.ಪಿ.ಮಹೇಶ್, ಬನಶಂಕರಿ ಬಾಬು, ಚಂದ್ರಶೇಖರ್, ಹರೀಶ್, ಗೋಪಾಲಕೃಷ್ಣ, ಎನ್.ಎಸ್.ಚಂದ್ರಣ್ಣ, ಬಸವರಾಜು, ಮದನ್‍ಸಿಂಗ್, ಗಣೇಶ್, ಪ್ರಕಾಶ್, ಗೋವಿಂದೇಗೌಡ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News