ತಂಬಾಕು ದುಷ್ಟಪರಿಣಾಮಗಳ ಬಗ್ಗೆ ವ್ಯಾಪಕ ಅರಿವು ಅಗತ್ಯ: ಡಾ.ಜಿ.ಪರಮೇಶ್ವರ್

Update: 2018-09-21 12:16 GMT

ತುಮಕೂರು,ಸೆ.21: ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಯುವಜನರಿಗೆ ವ್ಯಾಪಕ ಅರಿವು ಮೂಡಿಸಿ ಅವರನ್ನು ಕ್ರೀಡೆ ಸೇರಿದಂತೆ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಿಪಿಸಬೇಕು ಎಂದು ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕರೆ ನೀಡಿದ್ದಾರೆ.

ನಗರದ ಬಾಲಭವನದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪೊಲೀಸ್, ಶಿಕ್ಷಣ ಇಲಾಖೆ, ಮಹಾನಗರಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೆಸ್ಸಾರ್ಟಿಸಿ, ನರ್ಸಿಂಗ್ ಕಾಲೇಜು ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರದಲ್ಲಿ ಕೈಗೊಂಡಿರುವ ತಂಬಾಕು ಮುಕ್ತ ತುಮಕೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದ ಅವರು, ಗುಟ್ಕಾ ಸೇರಿದಂತೆ ತಂಬಾಕುನಿಂದ ಕೂಡಿದ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಬರುತ್ತವೆ. ಮೂರನೆ ಹಂತದ ಕ್ಯಾನ್ಸರ್ ಗೆ ಬಾಧಿತರಾದರೆ ಜನರು ಬದುಕುಳಿಯುವುದು ಕಷ್ಟ ಸಾಧ್ಯ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯಕ್ಕೆ ಹಾನಿಕಾರ ಎಂಬ ಸಂದೇಶವನ್ನು ಹೊತ್ತ ಚಿತ್ರವನ್ನು ಪ್ರದರ್ಶಿಸಿದರೂ, ಜನರು ಅದನ್ನು ನೋಡಿಯೋ ನೋಡದಂತೆ ಅದೇ ವಸ್ತುವನ್ನು ಸೇವನೆ ಮಾಡುತ್ತಿರುವುದು ದುರದೃಷ್ಟಕರ ಎಂದರು.

ಮಾನಸಿಕ ಒತ್ತಡ ದಿಂದ ಹೊರ ಬರಲು ಸಿಗರೇಟ್ ಸೇದುವುದರಿಂದ ಹಾಗೂ ತಂಬಾಕು ವಸ್ತುಗಳನ್ನು ಸೇವನೆಯಿಂದ ಸಾಧ್ಯ ಎಂಬ ತಪ್ಪು ಅಭಿಪ್ರಾಯ ಬಹುತೇಕ ತಂಬಾಕು ಸೇವನೆದಾರರಲ್ಲಿ ಇದೆ. ಈ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಲು ಹಾಗೂ ತಂಬಾಕು ವಸ್ತುಗಳ ಸೇವನೆಯಿಂದ ಆಗುವ ದುಷ್ಟಪರಿಣಾಮಗಳ ಬಗ್ಗೆ ಯುವಜನರಿಗೆ ವ್ಯಾಪಕ ಅರಿವು ಮೂಡಿಸಬೇಕಾಗಿದೆ. ಅಲ್ಲದೆ ಕ್ರೀಡೆ ಸೇರಿದಂತೆ ಆರೋಗ್ಯಕರ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಪ್ರೇರಿಪಿಸಬೇಕು. ತುಮಕೂರು ಜಿಲ್ಲೆಯನ್ನು ಸಂಪೂರ್ಣ ತಂಬಾಕು ಮುಕ್ತಗೊಳಿಸುವುದು ತುಂಬಾ ಕಷ್ಟದ ಕೆಲಸ. ಜಿಲ್ಲೆಯನ್ನು ತಂಬಾಕು ಮುಕ್ತಗೊಳಿಸುವುದಕ್ಕೆ ನಮ್ಮ ಸಹಕಾರವಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

ಸಮಾರಂಭದಲ್ಲಿ ಶಾಸಕ ಜ್ಯೋತಿಗಣೇಶ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವೀರಭದ್ರಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News