ದಾವಣಗೆರೆ: ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ, ಬೆಳ್ಳಿ ಪದಕ ವಿತರಣಾ ಕಾರ್ಯಕ್ರಮ

Update: 2018-09-21 12:44 GMT

ದಾವಣಗೆರೆ,ಸೆ.21: ಮುಂಬರುವ ದಿನಗಳಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಮತ್ತು ಐಪಿಎಸ್, ಐಎಎಸ್ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ವೆಚ್ಚ ಬರಿಸುವ ಚಿಂತನೆಯಿದ್ದು, ಶ್ರೀಘದಲ್ಲಿ ಇದನ್ನು ಜಾರಿಗೆ ತರಲು ಬ್ಯಾಂಕ್‍ನಲ್ಲಿ ಠೇವಣಿ ಹಣ ಜಮಾ ಮಾಡಲಾಗುವುದು ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.

ನಗರದ ಬಾಪೂಜಿ ಸಭಾಂಗಣದಲ್ಲಿ ಶುಕ್ರವಾರ ಡಾ.ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಮತ್ತು ಬೆಳ್ಳಿ ಪದಕ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕಳೆದ ಏಳು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು ಎನ್ನುವ ಉದ್ದೇಶ ವಿದ್ಯಾರ್ಥಿ ವೇತನ ವಿತರಿಸುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಉನ್ನತ ವ್ಯಾಸಂಗ ಮಾಡುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶೀಘ್ರವೇ ಬ್ಯಾಂಕ್‍ನಲ್ಲಿ ಹಣ ಠೇವಣಿ ಇರಿಸುವುದಾಗಿ ತಿಳಿಸಿದರು.

ಸಮಾಜದ ಎಲ್ಲವರ್ಗದ ಜನರಿಗೂ ಅನುಕೂಲವಾಗುವ  ಜೊತೆಗೆ ಆರ್ಥಿಕ ಸಹಾಯವಾಗಲಿ ಎನ್ನುವುದೇ ಈ ಕಾರ್ಯಕ್ರಮ ಉದ್ದೇಶ. ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡಿ ಶಾಲಾ ಕಾಲೇಜುಗಳಿಗೆ ಕೀರ್ತಿ ತರಬೇಕು. ಇರುವಷ್ಟು ದಿನ ಒಳ್ಳೇಯ ಕೆಲಸ ಮಾಡಬೇಕು ಎನ್ನುವ ದೃಷ್ಠಿಯಿಂದ ನಮ್ಮ ಕೈಲಾದ ಮಟ್ಟಿಗೆ ಸೇವೆ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಉತ್ತಮವಾಗಿ ಓದಿ ತಂದೆ –ತಾಯಿ ಮತ್ತು ದೇಶಕ್ಕೆ ಒಳ್ಳೇಯ ಹೆಸರು ತರುವಂತೆ ಕಿವಿಮಾತು ಹೇಳಿದರು. 

ಅಂಕಣಕಾರ ಕೃಷ್ಣೇಗೌಡ ಮಾತನಾಡಿ, ಪ್ರಸ್ತುತ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಆ ಹಂತಕ್ಕೆ ಜನರ ಆಲೋಚನೆಗಳು ವಿಕಾಸಗೊಂಡಿವೆ. ಆದರೆ ಜ್ಞಾನಕ್ಕಾಗಿ ಜ್ಞಾನ ಕೊಡಿಸುವ ಅಥವಾ ಜ್ಞಾನ ಬೇಕು ಎನ್ನುವ ಹಂತಕ್ಕೆ ನಮ್ಮಲ್ಲಿ ಆಲೋಚನೆಗಳು ವಿಕಾಸಗೊಂಡಿಲ್ಲ. ಭವಿಷ್ಯದಲ್ಲಿ ಇದು ಸಾಧ್ಯವಾಗಲಿದೆ ಎಂದು ಅಭಿಪ್ರಾಯಿಸಿದರು.

ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇನೆ ಎನ್ನುವುದರ ಮೇಲೆ ಒಬ್ಬ ವ್ಯಕ್ತಿಯ ಗೌರವ ನಿರ್ಧಾರವಾಗುತ್ತದೆಯೇ ಹೊರತು ಆತ ಎಷ್ಟು ಪದವಿಗಳನ್ನು ಪಡೆದಿದ್ದಾನೆ ಎನ್ನುವುದರ ಆಧಾರದ ಮೇಲೆ ಅಲ್ಲ. ಇಂಥಹ ವಿವೇಕಯುತವಾದ ಕೆಲಸವನ್ನು ಡಾ.ಶಾಮನೂರು ಶಿವಶಂಕರಪ್ಪ ಅವರು ಮಾಡುತ್ತಿದ್ದಾರೆ. ಕಳೆದ 7 ವರ್ಷಗಳಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾದುದು. ದಾವಣಗೆರೆಯನ್ನು ಕರ್ನಾಟಕದ ‘ಶೈಕ್ಷಣಿಕ ರಾಜಧಾನಿ’ಯನ್ನಾಗಿ ಮಾಡಿದ್ದಾರೆ. ಜಗತ್ತಿನ ಎಲ್ಲ ಕಡೆ ಜ್ಞಾನ ಇದೆ ಎನ್ನುವುದನ್ನು ದರ್ಶನ ಮಾಡಿಸದಿದ್ದರೆ ಅದು ನಿಜವಾದ ಶಿಕ್ಷಣ ಎನಿಸಿಕೊಳ್ಳುವುದಿಲ್ಲ. ಯಾವುದೇ ಅರಿವು ನಮ್ಮ ಹೃದಯಕ್ಕೆ ಮುಟ್ಟಿದಾಗ ಮಾತ್ರ ಅದು ನಿಜವಾದ ಶಿಕ್ಷಣವಾಗುತ್ತದೆ ಎಂದರು.

ಟ್ರಸ್ಟ್ ಕಾರ್ಯದರ್ಶಿ ಅಥಣಿ ವೀರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಅಣಬೇರು ರಾಜಣ್ಣ, ಬಾಪೂಜಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಬಿ.ಮುರುಗೇಶ್, ಪ್ರೊ.ವೈ.ವೃಷಭೇಂದ್ರಪ್ಪ, ಡಾ.ಬಿ.ಎಸ್.ರೆಡ್ಡಿ, ಡಾ.ಎಂ.ಜಿ.ಈಶ್ವರಪ್ಪ, ಜೆಜೆಎಂ ಮೆಡಿಕಲ್ ಕಾಲೇಜು ನಿರ್ದೇಶಕ ಎಂ.ಜಿ.ರಾಜಶೇಖರಪ್ಪ, ಡಾ.ವಸುಂಧರ ರಾಜಣ್ಣ, ಬಾಪೂಜಿ ಇಂಗ್ಲೀಷ್ ಶಾಲಾ ಪ್ರಾಂಶುಪಾಲ ಕೆ.ಇಮಾಂ, ಡಾ.ವೀರಪ್ಪ, ಎಂಬಿಎ ಕಾಲೇಜು ನಿರ್ದೇಶಕ ಡಾ.ತ್ರಿಭುವನ್, ಪ್ರೊ.ವೀರೇಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News