ಅಧಿಕಾರ ದಾಹದಿಂದ ಸಮ್ಮಿಶ್ರ ಸರ್ಕಾರ ಕೆಡವಲು ಯತ್ನಿಸುತ್ತಿರುವ ಬಿಜೆಪಿ: ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್

Update: 2018-09-21 12:48 GMT

ದಾವಣಗೆರೆ,ಸೆ.21: ಬಿಜೆಪಿಯವರು ಅಧಿಕಾರ ದಾಹದಿಂದ ರಾಜ್ಯದ ಸಮ್ಮಿಶ್ರ ಸರ್ಕಾರ ಕೆಡವಲು ಅಪರೇಷನ್ ಕಮಲಕ್ಕೆ ಕೈ ಹಾಕಿದೆ. ಕೋಟ್ಯಾಂತರ ಹಣದ ಅಮಿಷ ಒಡ್ಡುತ್ತಿರುವ ಬಿಜೆಪಿ ವಿರುದ್ಧ ಐಟಿ ಮತ್ತು ಇಡಿ ಸಂಸ್ಥೆಗಳು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಆಗ್ರಹಿಸಿದರು.   

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರುಗಳಿಗೆ ಹಣದ ಅಸೆ ತೋರಿಸಿ ತಮ್ಮ ಪಕ್ಷಕ್ಕೆ ಸೆಳೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸಾರ್ವಜನಿಕವಾಗಿ ಆಪರೇಷನ್ ಕಮಲದ ವಿಚಾರ ಚರ್ಚೆಯಾಗುತ್ತದೆ. ಇದಕ್ಕೆ ಬಿಜೆಪಿಗೆ ಎಲ್ಲಿದ ಹಣ ಬರುತ್ತದೆ. ದೇಶದ ಪ್ರಮುಖ ಸಂಸ್ಥೆಗಳಾದ ಐಟಿ, ಇಡಿ ಹಾಗೂ ಸಿಬಿಐ ಈ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರು ತಾವು ಸಿಎಂ ಆಗದಿದ್ದರೆ ಹತಾಶರಾಗುವ ಸ್ಥಿತಿಗೆ ತಲುಪಿದ್ದಾರೆ. ಅವರಿಗೆ ಅಧಿಕಾರದ ದಾಹ ಹೆಚ್ಚಾಗುತ್ತಿದೆ. ಅದಕ್ಕಾಗಿಯೇ ಈ ರೀತಿ ವರ್ತಿಸುತ್ತಿದ್ದಾರೆ. ಇನ್ನು ಮುಖ್ಯಂತ್ರಿಗಳು ಬಳಸಿರುವ ದಂಗೆ ಪದದ ಅರ್ಥ ಪ್ರತಿಭಟನೆ ಅಷ್ಟೇ. ಅದಕ್ಕೆ ಅಷ್ಟೊಂದು ಮಾನ್ಯತೆ ನೀಡುವ ಅಗತ್ಯವಿಲ್ಲ ಎಂದರು. 

78 ವರ್ಷಗಳ ಅನುಭವಿ ಹೆಚ್.ಎ.ಎಲ್ ಸಂಸ್ಥೆಗೆ ಯುದ್ದವಿಮಾನ ತಯಾರಿಸುವ ಸಾಮರ್ಥ್ಯವಿಲ್ಲವೆಂದು ಹೇಳುವ ಮೂಲಕ ಪ್ರಧಾನಿಗಳು ಸಂಸ್ಥೆಗೂ ಹಾಗೂ ಅಲ್ಲಿ ಸೇವೆ ಸಲ್ಲಿಸುತ್ತಿರುವ 35 ಇಂಜಿನಿಯರ್ ಗಳಿಗೆ ಅಪಮಾನ ಮಾಡಿದ್ದಾರೆ. ಯುದ್ದವಿಮಾನ ನಿರ್ಮಿಸುವಲ್ಲಿ ಹೆಚ್ ಎ ಎಲ್ ಸಂಸ್ಥೆಗೆ ವಿಶ್ವಮಾನ್ಯತೆ ದೊರೆತಿದೆ. ಹೀಗಿದ್ದರೂ ಪ್ರಧಾನಿ ತಮ್ಮ ಆಪ್ತ ಉದ್ಯಮಿ ಅನಿಲ್ ಅಂಬಾನಿಗೆ ಸಹಾಯ ನೀಡುವ ದುರುದ್ದೇಶದಿಂದ 78 ವರ್ಷದ ಅನುಭವಿ ಹೆಚ್.ಎ.ಎಲ್ ಕೈಬಿಟ್ಟು ಕೇವಲ 30 ದಿನಗಳ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ರಫೆಲ್ ಯುದ್ದ ವಿಮಾನ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವುದು ಖಂಡನೀಯ ಎಂದರು.

ಪ್ರಧಾನಿಯವರ ಏಕಪಕ್ಷೀಯ ತೀರ್ಮಾನದಿಂದಾಗಿ ದೇಶಕ್ಕೆ ರಫೆಲ್ ಯುದ್ದ ವಿಮಾನ ಖರೀದಿಯಲ್ಲಿ 41 ಸಾವಿರ ಕೋಟಿ ರೂ. ನಷ್ಟವಾಗಿದೆ. ಇನ್ನು ವಿದೇಶಗಳಿಗೆ ಸುತ್ತುವ ಪ್ರಧಾನಿಯವರು ಅಲ್ಲಿನ ಒಪ್ಪಂದಗಳನ್ನು ಮಾಡಿಕೊಳ್ಳುವ ವೇಳೆ ರಕ್ಷಣಾ ಸಚಿವರು ಹಾಗೂ ವಿದೇಶಾಂಗ ಸಚಿವರನ್ನು ತಮ್ಮೊಂದಿಗೆ ಕರೆದೊಯ್ಯುವುದಿಲ್ಲ. ಎಲ್ಲವನ್ನು ನಿಗೂಢವಾಗಿ ಮಾಡುವ ಪ್ರಧಾನಿಗಳು ದೇಶದ ಜನರಿಗೆ ಮೋಸ ಮಾಡುತ್ತಿದ್ದಾರೆ. ಹೊರದೇಶಗಳಲ್ಲಿ ನಡೆಯುವ ಒಪ್ಪಂದದ ವಿಷಯಗಳನ್ನು ಮರೆಮಾಚುತ್ತಿದ್ದಾರೆ. ಪ್ರಧಾನಿ ಅವರ ಆಡಳಿತ ಗುಪ್ತವಾಗಿ ನಡೆಯುತ್ತಿದೆ. ಅವರು ಚೌಕಿದಾರ್ ಎಂದು ತಮ್ಮನ್ನು ಕರೆದುಕೊಳ್ಳುತ್ತಾರೆ. ಆದರೆ ಭ್ರಷ್ಟರ ಜೊತೆಗೂಡಿ ಪಾಲುದಾರ ಆಗಿದ್ದಾರೆ. ಅವರು ಪ್ರಧಾನಿಯಾದ ಮೇಲೆ 21 ರಿಂದ 30 ಬಾರಿ ತೈಲ ಬೆಲೆ ಹೆಚ್ಚಳವಾಗಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಲಿಯಾಖತ್ ಅಲಿ, ಅಬ್ದುಲ್ ಜಬ್ಬಾರ್, ಹರೀಶ್, ಬಿ.ವಿನಾಯಕ್, ಡಿ.ಶಿವಕುಮಾರ್, ಹೆಚ್.ಡಿ.ವಿಜಯಕುಮಾರ್, ರಮೇಶ್ ಫಾರೂಕ್‍ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News