ಅಸ್ಸಾಂ ಕಾರ್ಮಿಕನ ಕೊಲೆ ಪ್ರಕರಣ: ಅಧಿಕಾರಿಗಳ ಸಮ್ಮುಖದಲ್ಲಿ ಶವ ಹೊರ ತೆಗೆದು ದಫನ

Update: 2018-09-21 13:37 GMT

ಮೂಡಿಗೆರೆ, ಸೆ.21: ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಸ್ಸಾಂನ ಮೂವರು ಕಾರ್ಮಿಕರು ತಮ್ಮ ಜೊತೆಗಾರ ಕಾರ್ಮಿಕನನ್ನೇ  ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿ, ಶವವನ್ನು ಗುಂಡಿ ತೆಗೆದು ಹೂತು ಹಾಕಿ, ಅಸ್ಸಾಂಗೆ ಪರಾರಿಯಾಗಿದ್ದರು. ಈ ಘಟನೆ ಸಂಬಂಧ, ಆರೋಪಿಗಳನ್ನು ಗೋಣಿಬೀಡು ಪೊಲೀಸರು ಅಸ್ಸಾಂನಿಂದ ಕರೆ ತಂದು ಹೂತಿಟ್ಟ ಶವವನ್ನು ಶುಕ್ರವಾರ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ಮೂಡಿಗೆರೆ ಪಟ್ಟಣದ ಮುಸ್ಲಿಂ ಖಬರಸ್ಥಾನದಲ್ಲಿ ದಫನ ಮಾಡಿದರು. 

ದೇವವೃಂದ ಗ್ರಾಮದ ಎಂ.ಸಿ.ದಿನೇಶ್ ಎಂಬವರ ಕಾಫಿ ತೋಟದಲ್ಲಿ ಅಸ್ಸಾಂ ಮೂಲದ ನಾಲ್ವರು ಕಾರ್ಮಿಕರು ಕೂಲಿ ಕೆಲಸ ಮಾಡಿಕೊಂಡಿದ್ದರು. ಸೆ.7ರಂದು ತೋಟದ ಮಾಲಕರಿಂದ ಕೂಲಿ ಕೆಲಸದ ಸಂಬಳ ಪಡೆದು ಮದ್ಯಪಾನ ಮಾಡಿ, ಕೂಲಿ ಹಣದ ವಿಚಾರದಲ್ಲಿ ಪರಸ್ಪರ ಜಗಳವಾಡಿಕೊಂಡಿದ್ದಾರೆ. ಬಳಿಕ ಜಗಳ ತಾರಕಕ್ಕೇರಿ ತಮ್ಮ ಜೊತೆಗಾರ ಮತ್ಲಬ್ ಆಲಿ (17) ಎಂಬ ಯುವಕನನ್ನು ಕೊಲೆ ಮಾಡಿ, ಅಲ್ಲಿಯೇ ಗುಂಡಿ ತೆಗೆದು ಶವವನ್ನು ಹೂತು ಹಾಕಿ, ಮೂವರೂ ಅಸ್ಸಾಂಗೆ ಪಲಾಯನ ಮಾಡಿದ್ದರು. 

ಅವರ ಪೈಕಿ ಬಿಲಾಲ್ (21) ಎಂಬಾತ ರೈಲಿನಲ್ಲಿ ತೆರಳುವ ವೇಳೆ ತಪ್ಪಿಸಿಕೊಂಡಿದ್ದಾನೆ. ಉಳಿದ ಇಬ್ಬರು ಆರೋಪಿಗಳಾದ ವಾಯಿದುಲ್ಲ (20) ಮೋಹಿದುಲ್ಲಾ (20) ಇವರಿಬ್ಬರು ತಮ್ಮ ಊರಿಗೆ ಹೋಗಿದ್ದಾರೆ. ಮತ್ಲಬ್ ಆಲಿ ಬಾರದೇ ಇಬ್ಬರು ಮಾತ್ರ ಬಂದಾಗ, ಮತ್ಲಬ್ ಆಲಿಯ ಪೋಷಕರಿಗೆ ಅನುಮಾನ ಬಂದಿದೆ. ವಿಚಾರಿಸಿದಾಗ ಪ್ರಾರಂಭದಲ್ಲಿ ಇಬ್ಬರೂ ರೈಲಿನಲ್ಲಿ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದ್ದರು. ಅದನ್ನು ನಂಬದ ಮತ್ಲಬ್‍ಆಲಿಯ ತಂದೆ ತಾಲಿಬುನ್, ತಾಯಿ ಮುಕ್ತಬುನ್ನಿಸಾ ಅವರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. 

ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಬಿಲಾಲ್ ರೈಲಿನಲ್ಲಿ ತಪ್ಪಿಸಿಕೊಂಡಿದ್ದಾನೆ. ಮತ್ಲಬ್‍ಆಲಿಯನ್ನು ನಾವು ಕೆಲಸ ಮಾಡಿಕೊಂಡಿದ್ದ ತೋಟದಲ್ಲಿ ಕೊಲೆ ಮಾಡಿ, ಶವವನ್ನು ಹೂತು ಹಾಕಿದ್ದೇವೆಂದು ಬಾಯಿ ಬಿಟ್ಟಿದ್ದಾರೆ. ಅದರಂತೆ ಅಸ್ಸಾಂ ಪೊಲೀಸರು ಗೋಣಿಬೀಡು ಪೊಲೀಸರಿಗೆ ಮಾಹಿತಿ ನೀಡಿದಾಗ, ಗೋಣಿಬೀಡು ಪಿಎಸ್‍ಐ ರಾಕೇಶ್ ಮತ್ತು ಮೂವರು ಸಿಬ್ಬಂದಿಗಳು ಅಸ್ಸಾಂಗೆ ತೆರಳಿ ಆರೋಪಿಗಳಿಬ್ಬರನ್ನು ಕರೆ ತಂದಿದ್ದಾರೆ.

ಆರೋಪಿಗಳು ಮತ್ತು ಕೊಲೆಯಾದ ಯುವಕ ಅಸ್ಸಾಂ ರಾಜ್ಯದ ದೂರಂಗ್ ಜಿಲ್ಲೆಯ ಉಝೂಗಾಮ್ ಗ್ರಾಮದವರೆಂದು ತಿಳಿದುಬಂದಿದೆ. ಶುಕ್ರವಾರ ವೈದ್ಯರ ಸಮ್ಮುಖದಲ್ಲಿ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮತ್ಲಬ್‍ ಆಲಿಯ ಪೋಷಕರಿಗೆ ಶವವನ್ನು ಒಪ್ಪಿಸಲಾಯಿತು. ಬಳಿಕ ಸಮಾಜ ಸೇವಕ ಫಿಶ್ ಮೋನು ಮತ್ತು ಅವರ ತಂಡ ಮೂಡಿಗೆರೆ ಖಬರಸ್ಥಾನದಲ್ಲಿ ದಫನ ಕಾರ್ಯ ನಡೆಸಿದರು. 

ಶವ ಹೊರ ತೆಗೆಯುವ ವೇಳೆ ತಹಸೀಲ್ದಾರ್ ಪದ್ಮನಾಭ ಶಾಸ್ತ್ರಿ, ವೃತ್ತ ನಿರೀಕ್ಷಕ ಜಗದೀಶ್, ಎಂಜಿಎಂ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಂತೋಷ್, ಪಿಎಸ್‍ಐ ರಾಕೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News