ಮಂಡ್ಯ: ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Update: 2018-09-22 17:58 GMT

ಮಂಡ್ಯ, ಸೆ.22: ಇಬ್ಬರು ಮಕ್ಕಳ ಜತೆ ದಂಪತಿ ವಿಷ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಸುಂಕಾತೊಣ್ಣುರು ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ  ನಡೆದಿದೆ.

ಗ್ರಾಮದ ನಂದೀಶ್(37), ಪತ್ನಿ ಕೋಮಲಾ(33), ಪುತ್ರಿ ಚಂದನ(15) ಹಾಗೂ ಪುತ್ರ ಮನೋಜ್(13) ಊರ ಹೊರವಲಯದ ತಮ್ಮ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲಬಾಧೆ ತಾಳಲಾರದೆ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎನ್ನಲಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬರೆದಿರುವ ಡೆತ್‍ನೋಟ್ (ಮರಣಪತ್ರ) ಸ್ಥಳದಲ್ಲಿ ಪತ್ತೆಯಾಗಿದೆ.

ಸಿಎಂಗೆ ಡೆತ್‍ನೋಟ್? 
ನನ್ನ ಸಮಸ್ಯೆ ಬಗ್ಗೆ ನಿಮಗೆ ಪತ್ರ ಬರೆದಿದ್ದರೂ ಸಮಸ್ಯೆ ಬಗೆಹರಿಯದ ಕಾರಣ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ನಮ್ಮೆಲ್ಲರ ಶವಗಳನ್ನು ಯಾರೂ ಮುಟ್ಟದಹಾಗೆ ಕಾರ್ಪೋರೇಷ್‍ಗೆ ಒಪ್ಪಿಸಿಬಿಡಿ ಪ್ಲೀಸ್. ನಮ್ಮೆಲ್ಲರ ಸಾವಿಗೆ ಈ ವ್ಯವಸಾಯನೇ ಕಾರಣ, ಬೇರೆ ಯಾರೂ ಅಲ್ಲಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಂಬೋಧಿಸಿ ನಂದೀಶ್ ಕುಟುಂಬ ಮರಣಪತ್ರ ಬರೆದಿದೆ. ನಂದೀಶ್ ಕೃಷಿ ಚಟುವಟಿಕೆಗೆ ಸುಮಾರು 5 ಲಕ್ಷ ರೂ.ವರೆಗೆ ಸಾಲ ಮಾಡಿಕೊಂಡಿದ್ದು, ತನ್ನ ಸಮಸ್ಯೆ ಬಗೆಹರಿಸಿಕೊಡುವಂತೆ ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮದಲ್ಲಿ ಎರಡು ಬಾರಿ ನಿವೇದಿಸಿಕೊಂಡಿದ್ದರು ಎನ್ನಲಾಗಿದೆ.

ಶುಕ್ರವಾರ ತಡರಾತ್ರಿ ಮಾಂಸಾಹಾರದಲ್ಲಿ ವಿಷ ಬೆರಸಿ ನಾಲ್ಕು ಜನರು ಸೇವಿಸಿದ್ದು, ನಂತರ ಹೊಟ್ಟೆನೋವು ತಾಳಲಾರದೆ ಮನೆಯಿಂದ ಹೊರಬಂದು ನರಳಾಡಿ ಜೀವಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆದೇಶದ ಹಿನ್ನೆಲೆಯಲ್ಲಿ ನಂದೀಶ್ ಅವರ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮವಹಿಸುವಂತೆ ಮಂಡ್ಯ  ಜಿಲ್ಲಾಧಿಕಾರಿ ಅವರು ಪಾಂಡವಪುರ ತಹಸೀಲ್ದಾರ್ ಅವರಿಗೆ ಆದೇಶಿಸಿದ್ದರು ಎನ್ನಲಾಗಿದೆ. ಈ ನಡುವೆ ಒಂದು ಎಕರೆ ಜಮೀನು ಮಾರಾಟ ಮಾಡಿ ಸ್ವಲ್ಪ ಸಾಲ ತೀರಿಸಿದ್ದು, ಉಳಿದ ಸಾಲ ಮರುಪಾವತಿಗೆ ಒತ್ತಡ ಹೆಚ್ಚಾಗಿದೆ. ಇದರಿಂದ ಬೇರೆದಾರಿ ಕಾಣದೆ ನಂದೀಶ್ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.

ನಂದೀಶ್ ಅವರ ಇಬ್ಬರು ಸಹೋದರಿಯರು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಪುತ್ರನ ಕುಟುಂಬವನ್ನು ಕಳೆದುಕೊಂಡ ನಂದೀಶ್ ತಂದೆ ಕೆಂಪೇಗೌಡ, ತಾಯಿ ಕಮಲಮ್ಮ ಅವರು ರೋದಿಸುತ್ತಿದ್ದಾರೆ.

ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ದುಡಿಕಿನ ನಿರ್ಧಾರ: ಸಚಿವ ಸಿ.ಎಸ್.ಪುಟ್ಟರಾಜು
ನಂದೀಶ್ ಕುಟುಂಬಕ್ಕೆ ನೆರವಾಗಲು ಸಿಎಂ ಜನತಾ ದರ್ಶನದಲ್ಲಿ ಸೂಚಿಸಿದ್ದರು. ಅದರಂತೆ ನಾನು ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದ್ದೆ. ಆದರೂ, ನಂದೀಶ್ ಕುಟುಂಬ ದುಡುಕಿ ಈ ನಿರ್ಧಾರ ತೆಗೆದುಕೊಂಡಿದೆ. ಅವರ ನಿರ್ಧಾರ ತುಂಬಾ ನೋವುಂಟುಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ವಿಷಾದಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಘಟನೆ ಸುದ್ದಿ ತಿಳಿಯುತ್ತಿದ್ದಂತೆ, ಸಿಎಂ ಮಾಹಿತಿ ಪಡೆದಿದ್ದಾರೆ. ಮೃತ ನಂದೀಶ್ ತಂದೆ-ತಾಯಿಗೆ ಸರಕಾರದಿಂದ ಅಗತ್ಯ ನೆರವು ನೀಡಲಾಗುವುದು. ತಲಾ 5 ಲಕ್ಷ ರೂಪಾಯಿ ಪರಿಹಾರ ಕೊಡಲು ಅವಕಾಶವಿದೆ. ಈ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News