ರಾಫೇಲ್ ಒಪ್ಪಂದಲ್ಲಿ ದೇಶಕ್ಕೆ ದ್ರೋಹವೆಸಗಿದ ಮೋದಿ: ರಾಹುಲ್ ವಾಗ್ದಾಳಿ

Update: 2018-09-22 10:31 GMT

ಹೊಸದಿಲ್ಲಿ, ಸೆ.22: “ಪ್ರಧಾನಿ ನರೇಂದ್ರಿ ಮೋದಿ ಹಾಗೂ ರಿಲಯನ್ಸ್ ಡಿಫೆನ್ಸ್ ಮಾಲಕ ಅನಿಲ್ ಧೀರೂಭಾಯಿ ಅಂಬಾನಿ  ಜಂಟಿಯಾಗಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ‘ಸರ್ಜಿಕಲ್ ದಾಳಿ’ಯನ್ನು ಭಾರತದ ರಕ್ಷಣಾ ಪಡೆಗಳ ಮೇಲೆ ನಡೆಸಿದ್ದಾರೆ. ರಾಫೇಲ್ ಒಪ್ಪಂದಲ್ಲಿ ಪ್ರಧಾನಿ ಪಾತ್ರ ವಹಿಸಿ ದೇಶಕ್ಕೆ ದ್ರೋಹವೆಸಗಿದ್ದಾರೆ'' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರಾಫೇಲ್ ಖರೀದಿಗೆ ಸಂಬಂಧಿಸಿದಂತೆ ಭಾರತ ಸರಕಾರ  ರಿಲಯನ್ಸ್ ಡಿಫೆನ್ಸ್ ಹೆಸರು ಸೂಚಿಸಿದ್ದರಿಂದ ಫ್ರಾನ್ಸಿಗೆ ಬೇರೆ ಆಯ್ಕೆಗಳಿರಲಿಲ್ಲ ಎಂದು ಫ್ರಾನ್ಸಿನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲೆಂಡ್ ಅವರು ಹೇಳಿದ ಹಿನ್ನೆಲೆಯಲ್ಲಿ ರಾಹುಲ್ ಅವರ ಈ ಹೇಳಿಕೆ ಬಂದಿದೆ.

“ಪ್ರಧಾನಿ ಮತ್ತು ಅನಿಲ್ ಅಂಬಾನಿ ಜಂಟಿಯಾಗಿ 1,300 ಕೋಟಿ ಸರ್ಜಿಕಲ್ ದಾಳಿಯನ್ನು ಭಾರತೀಯ ರಕ್ಷಣಾ ಪಡೆಗಳ ಮೇಲೆ ನಡೆಸಿದ್ದಾರೆ'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

``ಮೋದೀಜಿ ನೀವು  ನಮ್ಮ ಹುತಾತ್ಮ ಸೈನಿಕರ ನೆತ್ತರನ್ನು ಅವಮಾನಿಸಿದ್ದೀರಿ. ನಿಮಗೆ ನಾಚಿಕೆಯಾಗಬೇಕು. ನೀವು ಭಾರತದ ಆತ್ಮಕ್ಕೆ ದ್ರೋಹವೆಸಗಿದ್ದೀರಿ'' ಎಂದು ರಾಹುಲ್ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.

ಶುಕ್ರವಾರ ಹೊಲ್ಲೆಂಡ್ ಅವರ ಸಂದರ್ಶನ ಹಾಗೂ ಅವರು ಬಯಲಿಗೆಳೆದ ಮಾಹಿತಿ ಭಾರತದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಟ್ವೀಟ್ ಮಾಡಿದ ರಾಹುಲ್ ``ಪ್ರಧಾನಿ ವೈಯಕ್ತಿಕವಾಗಿ ಮಾತುಕತೆ ನಡೆಸಿ ರಫೇಲ್ ಒಪ್ಪಂದವನ್ನು ಮುಚ್ಚಿದ ಬಾಗಿಲುಗಳ ಹಿಂದೆ ಬದಲಾಯಿಸಿದ್ದರು,'' ಎಂದಿದ್ದರು.

``ಫ್ರಾಂಕೋಯಿಸ್ ಹೊಲ್ಲೆಂಡ್ ಅವರಿಗೆ ಧನ್ಯವಾದಗಳು.  ದಿವಾಳಿ ಅನಿಲ್ ಅಂಬಾನಿಗೆ  ಬಿಲಿಯಗಟ್ಟಲೆ ಡಾಲರ್ ಮೌಲ್ಯದ ಒಪ್ಪಂದವನ್ನು ಯಾರು ವೈಯಕ್ತಿಕವಾಗಿ ನೀಡಿದರೆಂದು ಈಗ ನಮಗೆ ತಿಳಿದಿದೆ''ಎಂದೂ ರಾಹುಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News