ಸೋಮವಾರಪೇಟೆ ರಾಜ್ಯ ಹೆದ್ದಾರಿ ಲಘು ವಾಹನ ಸಂಚಾರಕ್ಕೆ ಮುಕ್ತ

Update: 2018-09-22 11:43 GMT

ಮಡಿಕೇರಿ, ಸೆ.22: ಮಹಾಮಳೆಗೆ ಅಸ್ತಿತ್ವವವನ್ನೇ ಕಳೆದುಕೊಂಡು ಕಳೆದ ಒಂದು ತಿಂಗಳಿಗೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡಿದ್ದ ಸೋಮವಾರಪೇಟೆ, ಮಾದಾಪುರ, ಹಟ್ಟಿಹೊಳೆ, ಮಡಿಕೇರಿ ರಾಜ್ಯ ಹೆದ್ದಾರಿ ಇದೀಗ ಲಘು ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.

ಮಾದಾಪುರದಿಂದ ಹಾಲೇರಿಯ ವರೆಗೆ 6 ಕಡೆಗಳಲ್ಲಿ ರಾಜ್ಯ ಹೆದ್ದಾರಿ ಕುಸಿತಗೊಂಡು ಕೆಸರಿನಾರ್ಭಟಕ್ಕೆ ಕೊಚ್ಚಿಕೊಂಡು ಹೋಗಿತ್ತು. ಹಟ್ಟಿಹೊಳೆಯಿಂದ ಮುಂದಕ್ಕೆ ಸುಮಾರು 100 ಮೀಟರ್ ರಸ್ತೆ ಕಣ್ಮರೆಯಾಗಿದ್ದು, ಮಣ್ಣು ತುಂಬಿಸುವ ಕಾರ್ಯ ನಡೆದಿದೆ. ಇದರೊಂದಿಗೆ ರಸ್ತೆಯ ಮೇಲಿದ್ದ ಮಣ್ಣನ್ನು ತೆರವುಗೊಳಿಸಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ರಸ್ತೆಯ ಎಡಭಾಗದಲ್ಲಿ ಕುಸಿತ, ಬಲಭಾಗದಲ್ಲಿ ಬರೆ ಕುಸಿತದಿಂದ ಸಾವಿರಾರು ಲೋಡ್ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದರಿಂದ ಕಳೆದ ಒಂದು ತಿಂಗಳಿನಿಂದ ಈ ರಸ್ತೆ ಬಂದ್ ಆಗಿತ್ತು. ಇದರೊಂದಿಗೆ ಹಾಲೇರಿ ಬಳಿಯಲ್ಲಿ ಸಿಂಕೋನ ಮತ್ತು ಬಾಲಾಜಿ ಎಸ್ಟೇಟ್ ಇರುವ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತಗೊಂಡಿದ್ದು, 20 ಮೀಟರ್ ರಸ್ತೆ ಇನ್ನಿಲ್ಲದಂತೆ ಮಾಯಾವಾಗಿ, ರಸ್ತೆ ಸಂಪರ್ಕ ಅಸಾಧ್ಯ ಎಂಬಷ್ಟರ ಮಟ್ಟಿಗೆ ಸನ್ನಿವೇಶ ಸೃಷ್ಟಿಯಾಗಿತ್ತು.

ಮಾದಾಪುರದಿಂದ ಹಟ್ಟಿಹೊಳೆ ರಸ್ತೆಯವರೆಗೆ ಒಂದು ಬದಿಯಲ್ಲಿ ಸ್ಯಾಂಡ್ ಬ್ಯಾಗ್‍ಗಳಿಂದ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಹಾಲೇರಿ ಬಳಿ ರಸ್ತೆ ತುಂಡಾಗಿರುವ ಪ್ರದೇಶಕ್ಕೆ ಬದಲಾಗಿ, ಸಿಂಕೋನ ಎಸ್ಟೇಟ್‍ಗೆ ಸೇರಿದ ಎರಡು ಏಕರೆ ತೋಟವನ್ನು ಬಳಸಿಕೊಂಡು ಬದಲಿ ಮಾರ್ಗ ನಿರ್ಮಾಣ ಕಾರ್ಯ ನಡೆಸಲಾಗಿದ್ದು, 36 ದಿನಗಳ ನಂತರ ರಸ್ತೆ ನಿರ್ಮಾಣ ಪೂರ್ಣಗೊಂಡಿದೆ. 

ಲೋಕೋಪಯೋಗಿ ಇಲಾಖೆ ಮೂಲಕ ನಡೆದ ಕಾಮಗಾರಿಯಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಇಲಾಖೆಯ ಅಭಿಯಂತರರು, ಗುತ್ತಿಗೆದಾರರು, ಕಾರ್ಮಿಕರು ಸಮರೋಪಾದಿ ಕಾರ್ಯ ನಿರ್ವಹಿಸಿದ್ದರ ಫಲವಾಗಿ ಇದೀಗ ರಸ್ತೆ ಸಂಪರ್ಕ ಸಾಧ್ಯವಾಗಿದೆ.

ಹಲವರ ಸಹಕಾರದಿಂದ ಶೀಘ್ರಗತಿಯಲ್ಲಿ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಸೋಮವಾರಪೇಟೆ, ಹಟ್ಟಿಹೊಳೆ, ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾದಾಪುರ, ಗರಗಂದೂರು, ಸುಂಟಿಕೊಪ್ಪ ಮಾರ್ಗವಾಗಿ ತೆರಳುತ್ತಿದ್ದ ಸೋಮವಾರಪೇಟೆ ಭಾಗದ ಸಾರ್ವಜನಿಕರಿಗೆ ಈ ರಸ್ತೆ ಹೆಚ್ಚು ಸಹಕಾರಿಯಾಗಿದೆ.

ರಸ್ತೆಗಾಗಿ 3 ಎಕರೆ ತೋಟವನ್ನು ಬಿಟ್ಟು ಕೊಟ್ಟರು
ಮಕ್ಕಂದೂರು ಬಳಿ ರಸ್ತೆಯೇ ಕೊಚ್ಚಿ ಹೋಗಿರುವ ಕಡೆಯಲ್ಲಿ ಪರ್ಯಾಯ ಮಾರ್ಗ ರಚನೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಯೋಜನೆ ಸಾಕಾರಗೊಳ್ಳಲು ಸಿಂಕೋನ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ಶೆಟ್ಟಿ ಅವರು ಪ್ರಮುಖ ಕಾರಣಕರ್ತರಾಗಿದ್ದಾರೆ. ರಸ್ತೆ ನಿರ್ಮಾಣಕ್ಕಾಗಿ ಮೂರು ಎಕರೆ ಜಾಗವನ್ನು ಬಿಟ್ಟು ಕೊಟ್ಟು ಪ್ರಶಂಸೆಗೆ ಒಳಗಾಗಿದ್ದಾರೆ. ಮಕ್ಕಂದೂರಿನಲ್ಲಿ ರಸ್ತೆ ಇಲ್ಲದ ಕಾರಣ ಕುಸಿದ ಭಾಗದಲ್ಲಿ ಎರಡೂ ಬದಿಯನ್ನು ಜೋಡಿಸಲು ಸಾಧ್ಯವೇ ಇರಲಿಲ್ಲ. ಇದಕ್ಕೆ ಭಾರೀ ವೆಚ್ಚ ಮಾಡಿ ಸೇತುವೆ ನಿರ್ಮಾಣ ಮಾಡಬೇಕಿದ್ದು, ಕೋಟ್ಯಂತರ ರೂ. ವೆಚ್ಚವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರು ಸಿಂಕೋನ ಮಾಲಕ ಅಶೋಕ್ ಕುಮಾರ್ ಅವರೊಂದಿಗೆ ಚರ್ಚೆ ನಡೆಸಿ ಮನವಿ ಮಾಡಿದ ಹಿನ್ನೆಲೆಯಲ್ಲಿ 3 ಎಕರೆ ಜಾಗವನ್ನು ನೀಡಿದ್ದಾರೆ.

ಇಲ್ಲಿ ಇದೀಗ ಪರ್ಯಾಯ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಪರಿಣಾಮ, ಅಲ್ಪವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಲಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ವೇಳೆ ಪರ್ಯಾಯ ಮಾರ್ಗ ಇಲ್ಲದಿದ್ದಲ್ಲಿ ಸಾಕಷ್ಟು ತಿಂಗಳು ಕಾಲ ಈ ವಿಭಾಗದಲ್ಲಿ ವಾಹನ ಸಂಚಾರ ಸಾಧ್ಯವಾಗುತ್ತಿರಲಿಲ್ಲ. ವಿದ್ಯಾರ್ಥಿಗಳು, ಕಾರ್ಮಿಕರು, ಸರಕಾರಿ ನೌಕರರು ಹಾಗೂ ಸಾರ್ವಜನಿಕರು ಬೆಟ್ಟಹತ್ತಿ ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News