ರೈತ ಸಂಘದ ಕಾರ್ಯದರ್ಶಿ ನಿರ್ವಾಣಪ್ಪ ಬಂಧನಕ್ಕೆ ಖಂಡನೆ: ಮಡಿಕೇರಿಯಲ್ಲಿ ಸಮಾನ ಮನಸ್ಕರ ವೇದಿಕೆ ಪ್ರತಿಭಟನೆ

Update: 2018-09-22 11:47 GMT

ಮಡಿಕೇರಿ, ಸೆ.22: ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಸದಸ್ಯ ಹಾಗೂ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಅವರ ಬಂಧನವನ್ನು ಖಂಡಿಸಿ ಸಮಾನ ಮನಸ್ಕರ ವೇದಿಕೆ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ದುರ್ಬಲರ ಪರ ಧ್ವನಿ ಎತ್ತುವ ಹೋರಾಟಗಾರರನ್ನು ಹತ್ತಿಕ್ಕುವ ಯತ್ನ ಆಡಳಿತ ವ್ಯವಸ್ಥೆಯಿಂದ ನಿರಂತರವಾಗಿ ನಡೆಯುತ್ತಿದೆ ಎಂದು ವೇದಿಕೆಯ ಪ್ರಮುಖರು ಆರೋಪಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ತಹಶೀಲ್ದಾರ್ ಹಾಗೂ ಪೋಲಿಸ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹಿಸಿನ್, ಹೋರಾಟಗಾರರನ್ನು ಹತ್ತಿಕ್ಕುವ ಯತ್ನ ರಾಷ್ಟ್ರವ್ಯಾಪಿ ನಡೆಯುತ್ತಿದ್ದು, ಕೊಡಗು ಜಿಲ್ಲೆಯಲ್ಲೂ ಈ ಪ್ರಯತ್ನ ಮುಂದುವರೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅತಿವೃಷ್ಟಿಯಿಂದ ನಿರಾಶ್ರಿತರಾದ ಜನಸಾಮಾನ್ಯರಿಗೆ ಅನ್ಯಾಯವಾದಾಗ ಹೋರಾಡುವ ಮೂಲಕ ನ್ಯಾಯ ದೊರಕಿಸಿಕೊಡುವ ಕಾಳಜಿಯನ್ನು ನಿರ್ವಾಣಪ್ಪ ಅವರು ತೋರಿದ್ದಾರೆ. ಅಸಹಾಯಕರಿಗೆ ಸಹಾಯ ಮಾಡುವುದಕ್ಕಾಗಿ ದಿಡ್ಡಲ್ಲಿ ಹೋರಾಟದ ಮಾದರಿಯಲ್ಲೇ ಹೋರಾಟ ರೂಪಿಸುತ್ತೇವೆ ಎಂದು ನೀಡಿದ ಹೇಳಿಕೆಯನ್ನೇ ನೆಪ ಮಾಡಿಕೊಂಡು ಜನಪರ ಹೋರಾಟಗಾರನನ್ನು ಬಂಧಿಸಿರುವುದು ಖಂಡನೀಯ ಎಂದು ಹೇಳಿದರು.

ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್ ಮಾತನಾಡಿ, ಜಿಲ್ಲಾಧಿಕಾರಿಯವರ ಹೆಸರು ಕೆಡಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೋರಾಟಗಾರರನ್ನು ಹತ್ತಿಕ್ಕುವ ಉದ್ದೇಶದಿಂದ ನಿರ್ವಾಣಪ್ಪರನ್ನು ಬಂಧಿಸುವ ಕೆಲಸ ಮಾಡಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕರ ವೇದಿಕೆಯ ಪ್ರಮುಖ ಅಲ್ಲಾರಂಡ ವಿಠಲ್ ನಂಜಪ್ಪ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಸಮಿತಿ ಸಂಚಾಲಕ ಸಿರಿಮನೆ ನಾಗರಾಜು, ಬಹುಜನ ಸಮಾಜ ಪಕ್ಷದ ಮೋಹನ್ ಮೌರ್ಯ, ಪಿಎಫ್‍ಐ ಜಿಲ್ಲಾಧ್ಯಕ್ಷ ಹಾರಿಸ್, ಹೊದ್ದೂರು ಗ್ರಾ.ಪಂ ಸದಸ್ಯೆ ಕುಸುಮ, ಬಹುಜನ ಕಾರ್ಮಿಕ ಸಂಘದ ಪ್ರಮುಖ ಮೊಣ್ಣಪ್ಪ ಮತ್ತಿತರರು ಪಾಲ್ಗೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News