ಕಲುಷಿತಗೊಂಡ ರಾಜಕಾರಣವನ್ನು ಸರಿಪಡಿಸುವ ಕೆಲಸ ಆಗಬೇಕಿದೆ: ಸಂಸದ ಮುದ್ದಹನುಮೇಗೌಡ

Update: 2018-09-22 12:53 GMT

ತುಮಕೂರು,ಸೆ.22: ರಾಜಕಾರಣ ಎನ್ನುವ ಸಾರ್ವಜನಿಕ ಜೀವನ ಎಂಬುದು ಅತ್ಯಂತ ಕಲುಷಿತವಾಗಿದ್ದು, ಇದನ್ನು ಶುದ್ಧೀಕರಿಸುವ ಕೆಲಸವನ್ನು ಸರಕಾರಿ ನೌಕರರು ಮತ್ತು ನಾಗರಿಕರು ಮಾಡಬೇಕಾಗಿದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.

ನಗರದ ಭಾಲಭವನದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘ, ಸರಕಾರಿ ನೌಕರರ ಸಂಘದ ಪತ್ತಿನ ಸಹಕಾರ ಸಂಘ ಜಂಟಿಯಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ರಾಜಕಾರಣ ಮಿತಿಮೀರಿ ಕೆಟ್ಟಿದೆ. ಇದನ್ನು ಸರಿದಾರಿಗೆ ತರಲು ಸಕಾಲ. ಈಗ ನಿರ್ಲಕ್ಷಿಸಿದರೆ ಜನರು ಬಹಳ ಬೆಲೆ ತರಬೇಕಾಗುತ್ತದೆ. ಜನರು ಮತ್ತು ಸರಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಸರಕಾರಿ ನೌಕರರು ಎಚ್ಚೆತ್ತುಕೊಂಡು, ಸಾರ್ವಜನಿಕರೊಂದಿಗೆ ಸೇರಿ ಒಳ್ಳೆಯವರನ್ನು ಆಯ್ಕೆ ಮಾಡುವ ಮೂಲಕ ರಾಜಕಾರಣಕ್ಕೆ ಅಂಟಿರುವ ಕೊಳೆಯನ್ನು ತೊಳೆಯಬೇಕೆಂದರು.

ಸರಕಾರದ ಯಾವುದೇ ಯೋಜನೆ ಸಫಲವಾಗಬೇಕಾದರೆ ಸರಕಾರಿ ನೌಕರರು ಅತ್ಯಂತ ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ನಿಮ್ಮ ಸೇವೆ ಬಹಳ ಮಹತ್ವ ಪಡೆದುಕೊಳ್ಳುತ್ತದೆ ಎಂದು ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.

ಪ್ರತಿಭಾ ಪ್ರೋತ್ಸಾಹದ ಜೊತೆಗೆ, ಪ್ರತಿಭಾ ಅನ್ವೇಷಣೆ ಅತಿ ಮುಖ್ಯವಾದುದ್ದು, ಇಂದು ನಮ್ಮ ನಡುವೆ ಜಾಗತಿಕ ಸ್ಪರ್ಧೆ ಇದೆ. ಕುಗ್ರಾಮದಲ್ಲಿ ಯಾವುದೇ ಸವಲತ್ತುಗಳಿಲ್ಲದೆ ಕಲಿತ ವಿದ್ಯಾರ್ಥಿ, ದೆಹಲಿಯ ಪ್ರತಿಷ್ಠಿತ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯೊಂದಿಗೆ ಸೆಣಸಬೇಕಾಗಿದೆ. ಇಷ್ಟೆಲ್ಲಾ ಕೊರತೆಗಳ ನಡುವೆಯೂ ನಮ್ಮ ಗ್ರಾಮೀಣ ಯುವಜನತೆ ಹೆಚ್ಚಿನ ಸಾಧನೆ ಮಾಡುತ್ತಿರುವುದು ಸಂತೋಷದ ವಿಷಯ. ಇವರಿಗೆ ಉತ್ತಮ ಮಾರ್ಗದರ್ಶನದ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಒಂದು ಸರಕಾರಿ ಯೋಜನೆ ಅನುಷ್ಠಾನಗೊಳ್ಳಬೇಕಾದರೆ ಕಾರ್ಯಾಂಗ ಮತ್ತು ಶಾಸಕಾಂಗ ಒಗ್ಗೂಡಿ ಕೆಲಸ ಮಾಡಬೇಕಾಗುತ್ತದೆ. ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಕೃಷಿ, ತೋಟಗಾರಿಕೆ, ಕಂದಾಯ, ಆರೋಗ್ಯ ಇಲಾಖೆಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಪ್ರತಿಭೆ ಎನ್ನುವುದು ಕೇವಲ ಹೆಸರಿಗಷ್ಟೇ. ಸಮಾಜದಲ್ಲಿ ಬದುಕುವುದಕ್ಕೆ ಅಂಕಗಳಿಗಿಂತ ಅನುಭವದಿಂದ ಕಲಿತ ಪಾಠ ಮುಖ್ಯ. ವೃತ್ತಿ ಶಿಕ್ಷಣಗಳಿಂತ ಉತ್ತಮವಾದ ಬೇರೆ ಕ್ಷೇತ್ರಗಳಿದೆ. ಅವುಗಳ ಕಡೆಗೆ ಮಕ್ಕಳು ಗಮನಹರಿಸಬೇಕೆಂದರು.

ಸಂಘದ ಅಧ್ಯಕ್ಷ ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 25 ವರ್ಷಗಳಿಂದ ಸರಕಾರಿ ನೌಕರರ ಸಂಘದವತಿಯಿಂದ ಎಲ್ಲಾ ವರ್ಗದ ಮಕ್ಕಳಿಗೂ ಪ್ರತಿಭ ಪುರಸ್ಕಾರ ನಡೆಸುತ್ತಾ ಬಂದಿದ್ದೇವೆ. ಅಲ್ಲದೆ ನೆರೆ, ಭೂಕಂಪ ಇನ್ನಿತರ ಸಂಕಷ್ಟದಲ್ಲಿರುವ ಜನರಿಗೆ ನೌಕರರ ಸಂಘ ನೆರವಾಗುತ್ತಾ ಬಂದಿದೆ. ಈ ಬಾರಿ ಕೊಡುಗೆ ಸಂತ್ರಸ್ಥರಿಗಾಗಿ ತಮ್ಮ ಒಂದು ದಿನದ ವೇತನವಾದ 120 ಕೋಟಿ ರೂಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ ಎಂದರು.

ಸರಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಮಾತನಾಡಿ, ಪ್ರತಿಭಾ ಪುರಸ್ಕಾರ ದಿನ ಸಂಘಕ್ಕೆ ಸಂತೋಷದ ದಿನ. ಸತತ 25 ವರ್ಷಗಳಿಂದ ಈ ಕಾರ್ಯ ನಡೆಸುತ್ತಾ ಬಂದಿವೆ. ಸಮಾಜದಿಂದ ವೇತನ ಪಡೆಯುವ ನಾವು, ಪ್ರತಿಭಾಪುರಸ್ಕಾರದ ಮೂಲಕ ಸಮಾಜಕ್ಕೆ ನೀಡುವ ಕೆಲಸ ಮಾಡುತ್ತಿದ್ದೇವೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗ ಒಗ್ಗೂಡಿ ಕೆಲಸ ಮಾಡಿದರೆ ಈ ದೇಶ ರಾಮರಾಜ್ಯವಾಗಲಿದೆ ಎಂದರು.

ವೇದಿಕೆಯಲ್ಲಿ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮು, ಪ್ರಧಾನ ಕಾರ್ಯದರ್ಶಿ ಮಾಲತೇಶ್ ಬಡಿಗೇರ್, ಕೋಶಾಧ್ಯಕ್ಷ ಸಿ.ಎಸ್.ಷಡಕ್ಷರಿ, ಗೌರವಾಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ಹಿರಿಯ ಉಪಾಧ್ಯಕ್ಷ ಶ್ರೀನಿವಾಸ್, ಕೆ.ಜೆ.ಅಂಜನಪ್ಪ, ಮಹೇಶ್, ಗಿರಿಗೌಡ, ಜಿಲ್ಲಾ ಸಂಘದ ಪದಾಧಿಕಾರಿಗಳಾದ ಹೆಚ್.ಕುಮಾರ್, ವಿವಿಧ ತಾಲೂಕು ಅಧ್ಯಕ್ಷರಾದ ಹೆಚ್.ಇ.ರಮೇಶ್, ಗೋಪಾಲ್, ನಾಗಭೂಷಣ್, ಲಕ್ಷ್ಮೀಶ್, ರಾಮಾಂಜೀನಪ್ಪ, ಮಹಾಲಿಂಗೇಶ್, ಮಂಜಣ್ಣ, ಪರಮ ಶಿವಮೂರ್ತಿ, ವಿ.ಕೆ.ವೀರಕ್ಯಾತಯ್ಯ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News