ಚಿಕ್ಕಮಗಳೂರು: ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ

Update: 2018-09-22 16:06 GMT

ಚಿಕ್ಕಮಗಳೂರು, ಸೆ.22: ರಾಜ್ಯದ 6 ಜಿಲ್ಲೆಗಳಲ್ಲಿ ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿದ್ದು, ಕಾಫಿ, ಕಾಳು ಮೆಣಸು ಹಾಗೂ ಅಡಿಕೆ ಸೇರಿದಂತೆ ಇತರ ಬೆಳೆಗಳ ಹಾನಿ ಪ್ರಮಾಣ ಸಾಕಷ್ಟಾಗಿದೆ. ಆದರೆ ಅಧಿಕಾರಿಗಳು ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಸಾಕಷ್ಟು ಲೋಪಗಳಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಅಧಿಕಾರಿಗಳು ಕಾಟಾಚಾರದ ಸಮೀಕ್ಷೆ ನಡೆಸಿದ್ದು, ನಿಖರ ಮಾಹಿತಿ ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಕೇಂದ್ರದ ಬಳಿ ಅತೀವೃಷ್ಟಿ ಹಾನಿ ಸಂಬಂಧ ನಿರ್ದಿಷ್ಟ ಪ್ರಮಾಣದಲ್ಲಿ ಪರಿಹಾರ ಕೇಳಲು ಸಾಧ್ಯವಾಗಿಲ್ಲ. ಇನ್ನು 15 ದಿನಗಳ ಒಳಗೆ ಈ ಸಂಬಂಧ ನಿಖರ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ಸಿಎಂ ಕುಮಾರಸ್ವಾಮಿ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ನಗರದ ಜಿಪಂ ಕಚೇರಿಯ ನಝೀರ್ ಸಾಬ್ ಸಭಾಂಗಣದಲ್ಲಿ ಶನಿವಾರ ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಮಳೆ ಬೆಳೆ ಪರಿಸ್ಥಿತಿ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀನಾ ಸಭೆಯಲ್ಲಿ ಅತೀವೃಷ್ಟಿ ಹಾನಿ ಸಮೀಕ್ಷೆ ಸಂಬಂಧ ಜಿಲ್ಲಾಧಿಕಾರಿ ನೀಡಿದ ಮಾಹಿತಿಗೆ ಜಿಲ್ಲೆಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ವೇಳೆ ಪ್ರತಿಕ್ರಿಯಿಸಿದ ಅವರು, ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ 6 ಜಿಲ್ಲೆಗಳಲ್ಲಿ ಈ ಬಾರಿ ಸುರಿದ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿ ಹಾಗೂ ಬೆಳೆ ಹಾನಿ ಸಂಭವಿಸಿದೆ. ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ರಾಜ್ಯ ಸರಕಾರ ಕೇಂದ್ರದ ಬಳಿ 660 ಕೋ. ರೂ. ಅತೀವೃಷ್ಟಿ ಪರಿಹಾರ ಒದಗಿಸಲು ಮನವಿ ಮಾಡಲಾಗಿದೆ ಎಂದ ಅವರು, ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಶೇ.33ರಷ್ಟು ಮಾತ್ರ ಬೆಳೆಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು, ಕಾಫಿ ಮಂಡಳಿ ಸಮೀಕ್ಷಾ ವರದಿ ನೀಡಿರುವುದರಲ್ಲಿ ಸಾಕಷು ನ್ಯೂನತೆಗಳಿವೆ. ಜಿಲ್ಲಾಡಳಿತ ಮತ್ತೊಮ್ಮೆ ಬೆಳೆ ಹಾನಿ ಸಂಬಂಧ ಸಮಗ್ರ ಮಾಹಿತಿಯ ವರದಿ ಸಂಗ್ರಹಿಸಿ ಸರಕಾರಕ್ಕೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗೆ ಸೂಚಿಸಿದ ಅವರು, ಈಗಾಗಲೇ ಅತೀವೃಷ್ಟಿ ಪರಿಹಾರ ನೀಡಲು 25 ಕೋ. ರೂ. ಬಿಡುಗಡೆ ಮಾಡಿದ್ದು, ಅದನ್ನು ಇಲಾಖಾವಾರು ಹಂಚಿಕೆ ವಿತರಣೆಗೆ ಆದೇಶಿಸಲಾಗಿದೆ ಎಂದರು. 

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಲೋಕೋಪಯೋಗಿ ಇಲಾಖಾ ಸಚಿವ ರೇವಣ್ಣ ಮಾತನಾಡಿ, ಕಾಫಿ ಬೆಳೆಯುವ ಮೂರು ಜಿಲ್ಲೆಗಳಲ್ಲಿ ಸಮಗ್ರ ಸಮೀಕ್ಷೆ ನಡೆಸಲು ವಿಶೇಷ ಸಮೀಕ್ಷಾ ತಂಡ ಕಳುಹಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗೆ ಸಲಹೆ ನೀಡಿದರು. ಶಾಸಕ ಸಿ.ಟಿ.ರವಿ, ಬೆಳೆ ಹಾನಿ ಸಂಬಂಧ ಕೇಂದ್ರದ ಬಳಿ ನಿಯೋಗ ಕೊಂಡೊಯ್ಯುವಂತೆ ಸಿಎಂಗೆ ಮನವಿ ಮಾಡಿದರು.

ಜಿಲ್ಲೆಯ ಮಲೆನಾಡು ವ್ಯಾಪ್ತಿಯ ತಾಲೂಕುಗಳಲ್ಲಿ ಅತೀವೃಷ್ಟಿಯಾಗಿದ್ದರೂ ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯಲ್ಲಿ ಮಳೆಯಾಗದೇ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದಾಗ, ಶಾಸಕ ಸಿಟಿ ರವಿ ಮಧ್ಯಪ್ರವೇಶಿಸಿ, ಲಕ್ಯಾ ಹೋಬಳಿಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ ಮಾಡಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಭೋಜೇಗೌಡ ರವಿ ಮಾತಿಗೆ ಸಹಮತ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೇವಣ್ಣ, ಜಿಲ್ಲಾಧಿಕಾರಿ ಫಂಡ್‍ನಿಂದ 50 ಲಕ್ಷ. ರೂ. ಅನುದಾನದಲ್ಲಿ ಹೋಬಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸೂಚಿಸಿದರು.

ನಂತರ ಮಾತನಾಡಿದ ಶಾಸಕ ಸಿಟಿ ರವಿ, ಕಳೆದ ಒಂದೂವರೆ ವರ್ಷದಿಂದ ತಾಲೂಕಿನ ಸಖರಾಯಪಟ್ಟಣ, ಲಕ್ಯಾ ಹೋಬಳಿ ವ್ಯಾಪ್ತಿಯ ಕ್ಯಾತನಬೀಡು, ಗಾಣದಾಳು ಮತ್ತಿತರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ. ಆದರೆ ಜಿಲ್ಲಾಡಳಿತ ಟ್ಯಾಂಕರ್ ಮಾಲಕರಿಗೆ ಐದೂವರೆ ಕೋ. ರೂ. ಬಾಕಿ ನೀಡಬೇಕಿದ್ದು, ಹಣ ಬಿಡುಗಡೆ ಮಾಡಿಲ್ಲ. 14ನೇ ಹಣಕಾಸು ಯೋಜನೆಯಡಿ ಗ್ರಾಪಂಗಳಿಗೂ ಹಣ ಬಿಡುಗಡೆಯಾಗಿಲ್ಲ. ಈ ಬಾಕಿ ಹಣವನ್ನು ಜಿಲ್ಲಾಧಿಕಾರಿ ನಿಧಿಯಿಂದಲೇ ಭರಿಸಬೇಕೆಂದು ಒತ್ತಾಯಿಸಿದರು.

ಜಿಲ್ಲೆಯ ನೀರಾವರಿ ಸಮಸ್ಯೆ ಸಂಬಂಧ ಸಭೆಯ ಗಮನಸೆಳೆದ ವಿ.ಪ.ಸದಸ್ಯ ಧರ್ಮೇಗೌಡ, ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಭದ್ರಾನದಿ ನೀರನ್ನು ಚಿಕ್ಕಮಗಳೂರು, ಕಡೂರು ತಾಲೂಕು ವ್ಯಾಪ್ತಿಗೆ ಪೂರೈಸಲು ಚಿಂತಿಸಿದ್ದು, ಈ ಯೋಜನೆ ಜಾರಿಯಿಂದ ಈ ಭಾಗದ ನೀರಿನ ಸಮಸ್ಯೆ ನೀಗಲಿದೆ ಎಂದರು. ಈ ವೇಳೆ ಸಿಟಿ ರವಿ ಮಾತನಾಡಿ, ಯಗಚಿ ಡ್ಯಾಂ ನೀರು ಸರಬರಾಜು ಯೋಜನೆ ಜಾರಿಯಿಂದ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ನೀರು ಪೂರೈಕೆ ಸಾಧ್ಯ ಎಂದರು. 

ತರೀಕೆರೆ ಶಾಸಕ ಸುರೇಶ್, ತಾಲೂಕು ವ್ಯಾಪ್ತಿಯಲ್ಲಿ ಕೈಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 5 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ತಾಲೂಕಿನ 16 ಹಳ್ಳಿಗಳಿಗೆ ಇಂದಿಗೂ ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ಇದೆ ಎಂದಾರು. ಇದಕ್ಕೆ ಸಚಿವ ರೇವಣ್ಣ ಪ್ರತಿಕ್ರಿಯಿಸಿ, ಬಾಳೆಹೊನ್ನೂರು ಭಾಗದಲ್ಲಿ ಭದ್ರಾನದಿಗೆ ಸಣ್ಣ ಅಣೆಕಟ್ಟು ನಿರ್ಮಿಸಿ ನೀರು ಸರಬರಾಜು ಮಾಡುವ ಯೋಜನೆ ಸಂಬಂಧ ಆಲೋಚಿಸಲಾಗುವುದು ಎಂದರು. 

ಇದೇ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ರಾಜ್ಯಾದ್ಯಂತ ಕುಡಿಯುವ ನೀರಿನ ತೀವ್ರ ಸಮ್ಯೆಗಳಿರುವ ಪ್ರದೇಶಗಳಿಗೆ ನೀರು ಪೂರೈಸಲು ರಾಜ್ಯ ಸರಕಾರ ಜಲದಾರೆ ಯೋಜನೆ ಜಾರಿಗೆ ಚಿಂತನೆ ನಡೆಸಿದ್ದು, ಜಿಲ್ಲೆಯಲ್ಲಿ ಇಂತಹ ಗ್ರಾಮಗಳ ಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿದಲ್ಲಿ ಈ ಯೋಜನೆ ವ್ಯಾಪ್ತಿಯಲ್ಲಿ ನೀರು ಪೂರೈಕೆಗೆ ಕ್ರಮವಹಿಸಲಾಗುವುದು ಎಂದರು.

ದತ್ತಪೀಠ ಬೇರೆ ಬಾಬಾಬುಡನ್ ದರ್ಗಾ ಬೇರೆ ಎಂಬ ಬಗ್ಗೆ ಸಾವಿರಾರು ವರ್ಷಗಳ ದಾಖಲೆಗಳಿದ್ದು, ರಾಜ್ಯ ಸರಕಾರ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕಕ್ಕೆ ಅಗತ್ಯ ಕ್ರಮವಹಿಸಬೇಕೆಂದು ಶಾಸಕ ಸಿಟಿ ರವಿ ಸಭೆಯಲ್ಲಿ ಒತ್ತಾಯಿಸಿದಾಗ, ವಿ.ಪ. ಸದಸ್ಯ ಬೋಜೇಗೌಡ ಮಾತನಾಡಿ, ಸುಪ್ರೀಕೋರ್ಟ್ ಸಮಸ್ಯೆಯನ್ನು ಸಾಮರಸ್ಯದಿಂದ ಬಗೆಹರಿಸಿಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ವರದಿ ಕೇಳಿದ್ದು, ಸರಕಾರ ಸಾಮರಸ್ಯದಿಂದ ಸಮಸ್ಯೆ ಬಗೆಹರಿಸಿ, ಸಮಸ್ಯೆಯ ಇತ್ಯರ್ಥ ಮಾಡಬೇಕೆಂದರು.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕಳಸ ಇನಾಂಲ್ಯಾಂಡ್ ಸಮಸ್ಯೆ ಪರಿಹಾರ ಸಂಬಂಧ ರಾಜ್ಯ ಸರಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಬೇಕು. ಕುದುರೆಮುಖ ವ್ಯಾಪ್ತಿಯಲ್ಲಿ ಸರಕಾರಿ ಜಾಗವನ್ನು ಅರಣ್ಯ ಇಲಾಖೆಗೆ ನೀಡುವ ಕ್ರಮದಿಂದ ಸಮಸ್ಯೆಗೆ ಪರಿಹಾರ ಒದಗಿಸಬಹುದು ಎಂದ ಅವರು, ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿನ ಡೀಮ್ಡ್ ಪಾರೆಸ್ಟ್ ಸಮಸ್ಯೆಯಿಂದಾಗಿ ಬಡಜನರಿಗೆ ಮನೆ ನಿವೇಶನ ಕಲ್ಪಿಸಲು ಸಾಧ್ಯವಾಗುತ್ತಿಲ್ಲ, ತಾಲೂಕು ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ಹೆಚ್ಚಿದೆ ಎಂದು ಸಮಸ್ಯೆ ಹೇಳಿಕೊಂಡಾಗ, ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಡೀಮ್ಡ್ ಪಾರೆಸ್ಟ್ ಸಂಬಂಧ ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರಕಾರದಿಂದ ಕ್ಲಿಯರೆನ್ಸ್ ಸಿಕ್ಕಿದ ಬಳಿಕ ಕ್ರಮದ ಭರವಸೆ ನೀಡಿದರು. 

ಚಿಕ್ಕಮಗಳೂರು, ಮೂಡಿಗೆರೆ, ಬೇಲೂರು, ಹಾಸನ ರೈಲ್ವೆ ಸಂಪರ್ಕ ಯೋಜನೆ ಸಂಬಂಧ ಶಾಸಕ ರವಿ ಗಮನಸೆಳೆದಾಗ, ಯೋಜನೆ ಜಾರಿ ಸಂಬಂಧ ಸರ್ವೇ ಕಾರ್ಯ ನಡೆಯುತ್ತಿದ್ದು, ಶೀಘ್ರ ಯೋಜನೆ ಜಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶೃಂಗೇರಿ ಹೊರನಾಡು ಕಳಸ ಮಾರ್ಗವಾಗಿ ಎಳನೀರು ಮೂಲಕ ಧರ್ಮಸ್ಥಳ ಸಂಪರ್ಕ ರಸ್ತೆ ಅಭಿವೃದ್ಧಿಗೆ ಅರಣ್ಯಾಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಚಾರ್ಮಾಡಿ ರಸ್ತೆ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದರು.

ಸಭೆಯಲ್ಲಿ ಚಿಕ್ಕಮಗಳೂರು, ತರೀಕೆರೆ, ಮೂಡಿಗೆರೆ, ಶೃಂಗೇರಿ, ಕಡೂರು ಶಾಸಕರು ವಿವಿಧ ಸಮಸ್ಯೆಗಳ ಬಗ್ಗೆ ಸಿಎಂ ಗಮನಸೆಳೆದರು. ಬಳಿಕ ವಿವಿಧ ಇಲಾಖಾಧಿಕಾರಿಗಳು ಪ್ರಗತಿ ವರದಿಯನ್ನು ಮಂಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆಜಾರ್ಜ್, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ಸಿಇಒ ಸತ್ಯಭಾಮ, ಎಂ.ಕೆ.ಪ್ರಾಣೇಶ್, ಕಡೂರು ಶಾಸಕ ಬೆಳ್ಳಿಪ್ರಕಾಶ್ ಮತ್ತಿತರರು ಉಪಸ್ಥಿತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News