ಶಾಂತಿ ಕಾಪಾಡುವುದೇ ಶ್ರೇಷ್ಠ ಎಂದು ಪ್ರವಾದಿ ಮುಹಮ್ಮದ್ ಪೈಗಂಬರ್ ಹೇಳಿದ್ದಾರೆ: ಚಿಂತಕ ರಂಜಾನ್ ದರ್ಗಾ

Update: 2018-09-23 06:02 GMT

ದಾವಣಗೆರೆ,ಸೆ.22: ದಾನ, ಧರ್ಮ, ನಮಾಜಿಗಿಂತ ಸಮಾಜದಲ್ಲಿ ಶಾಂತಿ ಕಾಪಾಡುವುದೇ ಶ್ರೇಷ್ಠ ಎಂದು ಪ್ರವಾದಿ ಮುಹಮ್ಮದ್ ಪೈಗಂಬರ್ ಹೇಳಿದ್ದಾರೆ ಎಂದು ಚಿಂತಕ ರಂಜಾನ್ ದರ್ಗಾ ಹೇಳಿದರು. 

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಮುಸ್ಲಿಂ ಚಿಂತಕರ ಚಾವಡಿ ವತಿಯಿಂದ ಏರ್ಪಡಿಸಿದ್ದ ಕನ್ನಡದ ಪ್ರಮುಖ ಲೇಖಕರ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಉಪವಾಸ, ಪ್ರಾರ್ಥನೆ, ಧ್ಯಾನಕ್ಕಿಂತ ಉತ್ತಮ ಮನುಷ್ಯ ಸಂಬಂಧ ಹೊಂದುವುದು ದೊಡ್ಡದು ಎಂಬುದಾಗಿ ಭಾವಿಸಿದ್ದರು. ಆದರೆ, ಇದನ್ನು ಪ್ರಸ್ತುತ ಯಾರೂ ಅರಿಯದ ಕಾರಣ ದಂಗೆ, ಜಗಳ ಹೆಚ್ಚಾಗಿ ಮನುಷ್ಯ ಕುಲ ವಿನಾಷದತ್ತ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೊರಗಿನ ಕೋಮುವಾದಿಗಳನ್ನು ಹಾಗೂ ಒಳಗಿನ ಮೂಲಭೂತವಾದಿಗಳನ್ನು ಎದುರಿಸಿ ಬರೆಯುವ ದೊಡ್ಡ ಸವಾಲು ಭಾರತೀಯ ಮುಸ್ಲಿಂ ಬರಹಗಾರರ ಎದುರಿಗಿದೆ ಎಂದು ಹೇಳಿದರು.   

ಎ.ಎಸ್.ಮಕಾನ್‍ದಾರ್ ಅವರ ಅಕ್ಕಡಿ ಸಾಲು ಕವನ ಸಂಕಲನ ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರು ಪರಸ್ಪರ ಸಹಕಾರ ನೀಡುವ ಮೂಲಕ ಬದುಕುವ ನಿಸರ್ಗ ಕ್ರಮನ್ನು ಅನಾವರಣಗೊಳಿಸಿದೆ. ಅದೇ ರೀತಿ ಬೋಡೆ ರಿಯಾಜ್ ಅಹಮದ್ ತಿಮ್ಮಾಪುರಿ ಅವರ ಪ್ರೇಮ, ಸೂಫಿ, ಬಂದೇನವಾಜ್ ಕೃತಿಯು ಲೌಕಿಕ ಆಕರ್ಷಣೆಯನ್ನು ಮೂಡಿಸುತ್ತದೆ. ಬಂದೇನವಾಜ್ ಅವರು ಗದ್ಯದಲ್ಲಿ ಸೂಫಿ ಸಾಹಿತ್ಯ ರಚಿಸಿದ ಜಗತ್ತಿನ ಮೊಟ್ಟಮೊದಲ ಸೂಫಿ ಸಂತರಾಗಿದ್ದಾರೆ. ಇವರು ತಮ್ಮ ಸೂಫಿ ಸಾಹಿತ್ಯದ ಮೂಲಕ ಜನರಿಗೆ ರಾಮಾಯಣ-ಮಹಾಭಾರತವನ್ನು ಹೇಳಿ ಕೊಡುವುದರ ಜೊತೆ, ಜೊತೆಯಾಗಿಯೇ ಸೂಫಿ ಚಿಂತನೆಯನ್ನು ಹೇಳುತ್ತಿದ್ದರು ಎಂಬುದನ್ನು ಕವಿ ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆಂದು ಹೇಳಿದರು.

ಬೊಳುವಾರು ಮುಹಮದ್ ಕುಂಞ ಅವರು ಉಮ್ಮಾ ಕಾದಂಬರಿಯ ಮೂಲಕ ಇಡೀ ಧರ್ಮವನ್ನು ಭೂಮಿಗೆ ತರುವ ಪ್ರಯತ್ನ ಮಾಡಿದ್ದಾರೆ. ಈ ಕೃತಿಯಲ್ಲಿ ಮಾನವೀಯ ವಿಮೋಚನೆಯ ಪ್ರಶ್ನೆ ಇದೆಯೇ ಹೊರತು, ಎಲ್ಲೂ ಗಂಡಸಿನ ಕ್ರೌರ್ಯ, ಹೆಣ್ಣಿನ ಹೋರಾಟವಿಲ್ಲ. ಬದಲಿಗೆ ಜೀವನ ಹೋರಾಟವಿದೆ ಎಂದು ವಿಶ್ಲೇಷಿಸಿದರು.

ಅಕ್ಕಡಿ ಸಾಲು ಕೃತಿ ಕುರಿತು ಮಾತನಾಡಿದ ಉಪನ್ಯಾಸಕ ಡಾ.ಎ.ಬಿ.ರಾಮಚಂದ್ರಪ್ಪ, ಸಂಸ್ಕೃತಿಯ ಹೆಸರಿನಲ್ಲಿರುವ ಕೆಲ ವೇದಿಕೆಗಳು ಕೋಮುವಾದ ಹರಡುತ್ತಿರುವ ಸಂದರ್ಭದಲ್ಲಿ ಮುಸ್ಲಿಂ ಚಿಂತಕರ ಚಾವಡಿ ಸಾಂಸ್ಕೃತಿಕ ಮನಸ್ಸುಗಳನ್ನು ಬೆಸೆಯುತ್ತಿರುವುದು ಅತ್ಯಂತ ಶ್ಲಾಘನೀಯ. ಪೂರ್ವ ಕಾಲದಿಂದಲೂ ವರ್ಣ, ಜಾತಿ, ಧರ್ಮಗಳ ವಿರುದ್ಧ ಸಾಹಿತ್ಯ ವಲಯ ತಕರಾರರು ಎತ್ತುತ್ತಲೇ ಬಂದಿದೆ. ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ತಲ್ಲಣಗಳು ನಮ್ಮನ್ನು ಅಪಾರವಾಗಿ ಬಾಧಿಸುತ್ತಿರುವ ಸಂದರ್ಭದಲ್ಲಿ ಕವಿಯೊಬ್ಬ ಸಾಂಸ್ಕೃತಿಕ ಮನಸ್ಸು ಬೆಸೆಯುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.

ಅಕ್ಕಡಿ ಸಾಲು ಕೃತಿ ಲೋಕಾರ್ಪಣೆ ಮಾಡಿದ ಜಿ.ಪಂ. ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಕೃಷಿ ಮೂಲದಿಂದ ಬಂದಂಥಹ ನನ್ನಂತವರಿಗೆ ಅಕ್ಕಡಿಸಾಲು ಎಂದರೆ, ಒಂದೇ ಜಮೀನಿನಲ್ಲಿ ನಾಲ್ಕಾರು ಬೆಳೆ ಬೆಳೆಯುವ ಕೃಷಿ ವಿಧಾನವಾಗಿದ್ದು, ಈ ನಿಟ್ಟಿನಲ್ಲಿಯೇ ವಿವಿಧ ಜಾತಿ, ಆಚಾರ, ವಿಚಾರಗಳನ್ನು ಒಂದಾಗಿಸಿ ಪರಸ್ಪರ ಪ್ರೀತಿ, ಸಾಮರಸ್ಯ ಮೂಡಿಸುವ ಜಾತ್ಯಾತೀತ ಸಮಾಜ ನಿರ್ಮಾಣವೇ ಈ ಕೃತಿಯ ಉದ್ದೇಶವಾಗಿದೆ ಎಂದರು.

ಬೋಡೆ ರಿಯಾಜ್ ಅಹಮದ್ ತಿಮ್ಮಾಪುರಿ ಅವರ 'ಪ್ರೇಮ, ಸೂಫಿ, ಬಂದೇನವಾಜ್' ಕೃತಿಯ ಬಗ್ಗೆ ಮಾತನಾಡಿದ ಶಿಕ್ಷಕ ಆರ್.ಕೆ.ಬಾಗವಾನ್, ಬಂದೇನವಾಜ್ ಒಬ್ಬ ಸೂಫಿ ಸಂತ. ಸೂಫಿ ಸಂತರ ಬಗ್ಗೆ ಹಲವು ಕೃತಿಗಳು ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ. ಆದರೆ, ತಿಮ್ಮಾಪುರಿಯವರು ಇದನ್ನು ಮೊಟ್ಟ ಮೊದಲಿಗೆ ಕನ್ನಡದಲ್ಲಿ ಬರೆದವರಾಗಿದ್ದಾರೆ. ಇದರಲ್ಲಿ ಐದು ಅಧ್ಯಾಯ ಮತ್ತು ಮೂರು ಅನುಬಂಧಗಳಿವೆ. ಈ ಪುಸ್ತಕದಲ್ಲಿ ಸೂಫಿ ಸಂತ ಬಂದೇನವಾಜ್ ಅವರ ಸಮಗ್ರ ವಿವರಣೆ ಇದೆ ಎಂದರು.

ಬೊಳುವಾರು ಮಹಮದ್ ಕುಂಞ ಅವರ ಉಮ್ಮಾ ಕಾದಂಬರಿಯ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ಬೊಳುವಾರು ಮೂಲತಃ ನಾಟಕಕಾರರಾಗಿದ್ದು, ಕಾದಂಬರಿಯೂ ಇದನ್ನು ಹೊರತಾಗಿಲ್ಲ. ಎಂಥಹ ಕಲ್ಲು ಮನಸ್ಸಿನ ಓದುಗನ ಕಣ್ಣಂಚಲಿ ನೀರು ಬರುವಂತೆ ಮಾಡುವ ಹೈಡ್ರಾಮಾ ಈ ಕಾದಂಬರಿಯಲ್ಲಿದೆ. ಸ್ವಗತದ ತಂತ್ರವನ್ನು ಕವಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 21ನೇ ಶತಮಾನದಲ್ಲಿ ನಿಂತು, 7ನೇ ಶತಮಾನದ ಹೆಣ್ಣುಮಕ್ಕಳು ಅನುಭವಿಸಬಹುದಾಗಿರುವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಇದು ಬೈರಪ್ಪನವರ ಪರ್ವ ಕಾದಂಬರಿಗಿಂತಲೂ ಎತ್ತರದ ಸ್ಥಾನಕ್ಕೆ ನಿಲ್ಲುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಲೇಖಕರಾದ ಬೊಳುವಾರು ಮುಹಮ್ಮದ್ ಕುಂಞ, ಬೋಡೆ ರಿಯಾಜ್ ಅಹ್ಮದ್ ತಿಮ್ಮಾಪುರಿ, ಎ.ಎಸ್.ಮಕಾನ್‍ದಾರ್, ಚಾವಡಿಯ ಡಾ.ಚಮನ್ ಫರ್ಜಾನ ಉಪಸ್ಥಿತರಿದ್ದರು. ಚಾವಡಿಯ ಜೆ.ಕಲೀಂಬಾಷ, ಅನೀಸ್ ಪಾಷ ಸ್ವಾಗತಿಸಿದರು. 

ಈ ಸಂದರ್ಭದಲ್ಲಿ ಲೇಖಕ ಬೊಳುವಾರು ಮುಹಮ್ಮದ್ ಕುಂಞ ಅವರ 'ಉಮ್ಮಾ' ಕಾದಂಬರಿ, ಕಲಬುರ್ಗಿಯ ಕವಿ ಬೋಡೆ ರಿಯಾಜ್ ಅಹ್ಮದ್ ಅವರ 'ಪ್ರೇಮ, ಸೂಫಿ, ಬಂದೇನವಾಜ್' ಕೃತಿ ಹಾಗೂ ಗದಗಿನ ಕವಿ ಎ.ಎಸ್.ಮಕಾನ್‍ದಾರ್ ಅವರ 'ಅಕ್ಕಡಿಸಾಲು' ಕವನ ಸಂಕಲನ ಬಿಡುಗಡೆಯಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News