ಕಾಸಿಗಾಗಿ ಸುದ್ದಿ: ಸುಪ್ರೀಂಕೋರ್ಟ್‌ಗೆ ಚುನಾವಣಾ ಆಯೋಗ ಹೇಳಿದ್ದೇನು ?

Update: 2018-09-23 03:16 GMT

ಹೊಸದಿಲ್ಲಿ, ಸೆ. 23: ರಾಜಕೀಯ ಮುಖಂಡರು ತಮ್ಮ ಸಾಧನೆಗಳನ್ನು ಬಿಂಬಿಸಿಕೊಳ್ಳುವ ಮತ್ತು ತಮ್ಮ ಪರ ಮತ ಚಲಾಯಿಸುವಂತೆ ಕೋರುವ ಹೊಗಳಿಕೆ ಸುದ್ದಿಗಳನ್ನು ಕೂಡಾ ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುವುದು ಎಂದು ಭಾರತದ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಇದಕ್ಕೆ ಹಣ ಪಾವತಿಸಿದ್ದಕ್ಕೆ ಯಾವುದೇ ದಾಖಲೆ ಅಥವಾ ಪುರಾವೆ ಇಲ್ಲದಿದ್ದರೂ ಇದನ್ನು ಹಣ ಪಾವತಿಸಿದ ಸುದ್ದಿ ಎಂದೇ ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಅಭ್ಯರ್ಥಿಗಳು ತಮ್ಮ ಪ್ರಭಾವ ಬಳಸಿಕೊಂಡು ಇಂಥ ಸುದ್ದಿಗಳನ್ನು ಪ್ರಕಟಿಸುತ್ತಾರೆ. ಇದನ್ನು ನಿಷ್ಪಕ್ಷಪಾತ ಸುದ್ದಿ ಎಂದು ಪರಿಗಣಿಸುವಂತಿಲ್ಲ. ಕಾಸಿಗಾಗಿ ಮಾಡುವ ಸುದ್ದಿ ಎಂದು ಪರಿಗಣಿಸಬೇಕಾದರೆ ಸೂಕ್ತ ದಾಖಲೆ ಸಹಿತ ಪುರಾವೆಗಳು ಬೇಕು ಎಂದು ಕಡ್ಡಾಯಪಡಿಸಿದರೆ, ಇಂಥ ನುಣುಚಿಕೊಳ್ಳುವಿಕೆಯ ಲಾಭ ಪಡೆದು ನಿಯಂತ್ರಿಸಲು ಅಸಾಧ್ಯವಾದ ಹಣ ಹರಿಯುತ್ತದೆ. ಇದು ಅಭ್ಯರ್ಥಿಗಳು ತಮ್ಮ ಪ್ರಭಾವ ಮತ್ತು ಸಮಾಜದಲ್ಲಿ ಹೊಂದಿರುವ ಜಾಲವನ್ನು ಬಳಸಿಕೊಂಡು ಪ್ರಭಾವ ಬೀರುವುದನ್ನು ತಡೆಯುವ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಈ ಮೂಲಕ ಇತರರ ವಿರುದ್ಧ ನ್ಯಾಯಸಮ್ಮತವಲ್ಲದ ಪ್ರಯೋಜನ ಪಡೆಯಲು ಕಾರಣವಾಗುತ್ತದೆ ಎಂದು ವಿವರಿಸಿದೆ.

ಕಾಸು ನೀಡಿ ಸುದ್ದಿ ಪ್ರಕಟಿಸಿಕೊಂಡ ಆರೋಪದಲ್ಲಿ ಮಧ್ಯಪ್ರದೇಶದ ಸಚಿವ ನರೋತ್ತಮ ಮಿಶ್ರಾ ಅವರನ್ನು ಮೂರು ವರ್ಷಗಳ ಕಾಲ ಅನರ್ಹಗೊಳಿಸಿದ ಚುನಾವಣಾ ಆಯೋಗದ ಕ್ರಮವನ್ನು ರದ್ದುಪಡಿಸಿದ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ವೇಳೆ ಈ ವಿಚಾರ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗ ಹೇಳಿದ ಮಾತ್ರಕ್ಕೆ ವರದಿಯ ಅಂಶಗಳನ್ನು ನಿರ್ಧರಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗವು ಚುನಾವಣಾ ವೆಚ್ಚದ ಲೆಕ್ಕಪತ್ರಗಳನ್ನು ಅಭ್ಯರ್ಥಿ ಸರಿಯಾಗಿ ನೀಡಿದ್ದಾರೆಯೇ ಎಂದಷ್ಟೇ ಪರಿಶೀಲಿಸಬಹುದು. ಪರೋಕ್ಷವಾಗಿ ಸುದ್ದಿಯ ಅಂಶಗಳ ಮೇಲೆ ಪ್ರಭಾವ ಬೀರುವುದು, ನಾಗರಿಕರ ಮುಕ್ತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.

ಆದರೆ ಕಾಸಿಗಾಗಿ ಸುದ್ದಿ ಮಾಡುವ ಅನಿಷ್ಟ ಪದ್ಧತಿಯ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಹೈಕೋರ್ಟ್ ನಿರ್ಬಂಧಿಸಿದೆ ಎಂದು ಚುನಾವಣಾ ಆಯೋಗದ ಪರ ವಕೀಲ ಅಮಿತ್ ಶರ್ಮಾ ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News