ಜಯಪುರ: ನಕ್ಸಲ್ ಪೀಡಿತ ಪ್ರದೇಶದ ಎಸ್ಟೇಟ್‍ನಲ್ಲಿ ತಂಗಿದ ಸಿಎಂ

Update: 2018-09-23 18:42 GMT

ಜಯಪುರ, ಸೆ.23: ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶವಾದ ತಲವಾನೆ ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಿದ್ದು, ಮಲೆನಾಡಿನ ಭಾಗಗಳಲ್ಲಿ ಅತಿವೃಷ್ಠಿಯಿಂದಾದ ಹಾನಿ ಹಾಗೂ ಬೆಳೆನಾಶದ ಕುರಿತ ವರದಿಯನ್ನು ಪರಿಶೀಲನೆ ನಡೆಸಿದರು.

ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾ.ಪಂ ವ್ಯಾಪ್ತಿಯ ತಲವಾನೆ ಎಸ್ಟೇಟ್‍ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ರಾತ್ರಿ ತಂಗಿದ್ದರು. ಈ ವೇಳೆ ಅವರು, ಈ ಭಾಗದ ಸಮಸ್ಯೆಗಳ ಕುರಿತ ಮಾಹಿತಿಯನ್ನು ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರುಗಳಿಂದ ಪಡೆದು ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರೆಂದು ತಿಳಿದು ಬಂದಿದೆ. ಶನಿವಾರ ಬೆಳಗಿನ ಉಪಹಾರಕ್ಕೆ ಸಿಎಂ, ಮಲೆನಾಡಿನ ವಿಶೇಷವಾದ ಅಕ್ಕಿರೊಟ್ಟಿ, ಎಣ್ಣೆಗಾಯಿ ಪಲ್ಯ ಸವಿದು ಬಳಿಕ ಶೃಂಗೇರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡರೊಬ್ಬರು ಕುಮಾರಸ್ವಾಮಿಯವರನ್ನು ಖಾಸಗಿಯಾಗಿ ಭೇಟಿಯಾಗಿದ್ದು, ಅಚ್ಚರಿಗೆ ಕಾರಣವಾಯಿತು. 

ಎಸ್ಪಿ ಅಣ್ಣಾಮಲೈ, ಐಜಿಪಿ ಅರುಣ್ ಚಕ್ರವರ್ತಿ, ಮಂಗಳೂರು ಎಸ್ಪಿ ರವಿಕಾಂತೆಗೌಡ, ಡಿವೈಎಸ್ಪಿ ರವೀಂದ್ರನಾಥ್.ಎಸ್‍ಜಾಗೀರ್‍ದಾರ್, ಎಂ.ಎಲ್.ಸಿ ಬೋಜೆಗೌಡ, ಮುಖಂಡರಾದ ತಲವಾನೆ ಪ್ರಕಾಶ, ಶ್ರೀ ರಂಗನಾಥ, ನಟರಾಜ್, ವಿಜಯತೇಜ, ಕುಕ್ಕುಡಿಗೆ ರವೀಂದ್ರ, ಗೋಪಾಲಕೃಷ್ಣ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News