ಕಾರು ಅಪಘಾತ: ನಟರಾದ ದರ್ಶನ್, ದೇವರಾಜ್, ಪ್ರಜ್ವಲ್‌ರಿಗೆ ಗಾಯ

Update: 2018-09-24 12:32 GMT

ಮೈಸೂರು,ಸೆ.24: ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಲಿಸುತ್ತಿದ್ದ ಕಾರಿನ ಟೈರ್ ಪಂಚರ್ ಆದ ಕಾರಣ ಅಪಘಾತಕ್ಕೀಡಾಗಿದ್ದು, ದರ್ಶನ್ ಕೈಮೂಳೆ ಮುರಿತಗೊಂಡು ನಟರಾದ ದೇವರಾಜ್, ಪ್ರಜ್ವಲ್ ದೇವರಾಜ್, ಚಾಲಕ ಮತ್ತು ಗನ್ ಮ್ಯಾನ್ ಆಂಟೋನಿ ರಾಯ್ ಅವರು ಗಾಯಗೊಂಡ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. 

ಮೈಸೂರಿನ ಹೊರವಲಯದ ರಿಂಗ್ ರಸ್ತೆಯಲ್ಲಿರುವ ಜೆ.ಎಸ್.ಎಸ್. ಹರ್ಬನ್ ಹಾಥ್ ಬಳಿ ಕಾರಿನ ಟೈರ್ ಪಂಚರ್ ಆಗಿ ತಡರಾತ್ರಿ 3 ಗಂಟೆ ವೇಳೆ ಅವಘಡ ಸಂಭವಿಸಿದ್ದು, ದರ್ಶನ್ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದರ್ಶನ್ ಗೆ ಚಿಕಿತ್ಸೆ ನೀಡಲಾಗಿದ್ದು, ತಜ್ಞ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. 

ನಿನ್ನೆ ತಡರಾತ್ರಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ದರ್ಶನ್ ಕೈ ಮೂಳೆ ಮುರಿದಿದೆ. ದರ್ಶನ್ ಜೊತೆ ನಟರಾದ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಕೂಡ ಪ್ರಯಾಣಿಸುತ್ತಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. 

ಆಸ್ಪತ್ರೆಗೆ ಆಗಮಿಸಿದ ಪತ್ನಿ, ತಾಯಿ: ದರ್ಶನ್ ಗೆ ಅಪಘಾತ ಸಂಭಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ದರ್ಶನ್ ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮಿ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿದರು. ನಂತರ ಪತ್ನಿ ವಿಜಯಲಕ್ಷ್ಮಿ ನಟ ದರ್ಶನ್ ಆವರಿಗೆ ಏನು ಆಗಿಲ್ಲ, ನನ್ನ ಜೊತೆ ಮಾತನಾಡಿದ್ದಾರೆ. ಸ್ವಲ್ಪ ಕೈಮೂಳೆ ಮುರಿದಿದೆ. ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ದಯವಿಟ್ಟು ಅಭಿಮಾನಿಗಳು ಆತಂಕಕ್ಕೊಳಗಾಗಬೇಡಿ ಎಂದು ಮನವಿ ಮಾಡಿದರು.

ದರ್ಶನ್ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ: ದರ್ಶನ್ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ದರ್ಶನ್ ಕೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು 25 ಹೊಲಿಗೆ ಹಾಕಲಾಗಿದೆ. ಮುಂಗೈ ಮುರಿದಿದೆ ಅದಕ್ಕೆ ಪ್ಲೇಟ್ ಹಾಕಿದ್ದೇವೆ. ಸದ್ಯ ಆಸ್ಪತ್ರೆಯಲ್ಲಿಯೇ ಇರುತ್ತಾರೆ. ಸಾಧ್ಯವಾದರೆ ಇಂದೇ ವಾರ್ಡ್‍ಗೆ ಶಿಫ್ಟ್ ಮಾಡಲಾಗುವುದು. 24 ರಿಂದ 48 ಗಂಟೆ ಪರಿಶೀಲನೆಯಲ್ಲಿ ಇರಿಸಲಾಗುತ್ತದೆ. ಇಬ್ಬರು ನುರಿತ ವೈದ್ಯರಿಂದ ಚಿಕಿತ್ಸೆ ನಡೆಸಲಾಗಿದೆ. ನಟ ದೇವರಾಜ್ ಅವರ ಎಡಗೈ ಬೆರಳಿಗೆ ಪೆಟ್ಟಾಗಿದೆ, ಪ್ರಜ್ವಲ್ ದೇವರಾಜ್ ಗೆ ಎದೆ ಹಾಗೂ ತಲೆ ಭಾಗಕ್ಕೆ ಗಾಯವಾಗಿದೆ. ಕಾರು ಚಾಲಕ ರಾಯ್ ಆಂಟೋನಿ ಕಾಲು, ಕೈಗೆ ಪೆಟ್ಟಾಗಿದೆ ಎಲ್ಲರೂ ಅಪಾಯದಿಮದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಉಪೇಂದ್ರ ಶೆಣೈ ಹೇಳಿದ್ದಾರೆ. ಡಾ. ಅಜಯ್ ಹೆಗ್ಡೆ, ಡಾ. ವಿಜಯ್ ವೈದ್ಯ ಸರ್ಜರಿ ನಡೆಸಿದ್ದು, 48 ಗಂಟೆಗಳ ಬಳಿಕ ಡಿಸ್ಚಾರ್ಜ್ ಮಾಡುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮಳೆಯಿಂದ ರಸ್ತೆ ಕಾಣಿಸದೆ ಅಪಘಾತ: ಮಳೆ ಬೀಳುತ್ತಿದ್ದರಿಂದ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ, ರಸ್ತೆ ಎಡಕ್ಕಿದೆ ಎಂದು ಕಾರನ್ನು ತಿರುಗಿಸಿದೆ. ನನಗೆ ಏನೂ ಕಾಣದೆ ರಸ್ತೆ ಬದಿಗೆ ಗುದ್ದಿದೆ ಆಗ ಟೈರ್ ಪಂಚರ್ ಆಯಿತು. ತಕ್ಷಣ ಏರ್ ಬ್ಯಾಗ್ ಓಪನ್ ಆಗಿ ನಾವು ಬದುಕುಳಿದೆವು ಎಂದು ಚಾಲಕ ಮತ್ತು ಗನ್ ಮ್ಯಾನ್ ಆಂಟೋನಿ ರಾಯ್ ವಿ.ವಿ.ಪುರಂ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನನ್ವಯ ವಿ.ವಿ.ಪುರಂ ಠಾಣೆಯಲ್ಲಿ 168/18 ಐಪಿಸಿ ಸೆಕ್ಷನ್ 227,337,338 ರಡಿ ದೂರು ದಾಖಲಾಗಿದೆ.

ಆಸ್ಪತ್ರೆ ಮುಂದೆ ದೌಡಾಯಿಸಿದ ಅಭಿಮಾನಿಗಳು: ನಟ ದರ್ಶನ್‍ಗೆ ಅಪಘಾತವಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸ್ನೇಹಿತರು ಆಸ್ಪತ್ರೆಯತ್ತ ಆಗಮಿಸಿದರು. ದರ್ಶನ್ ಅವರನ್ನು ನೋಡಲೇಬೇಕು ಎಂದು ಅಭಿಮಾನಿಗಳು ಆಸ್ಪತ್ರೆ ಬಳಿ ಜಮಾಯಿಸಿದರು. 

ಪೊಲೀಸ್ ಬಂದೋಬಸ್ತ್: ಆಸ್ಪತ್ರೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ದರ್ಶನ್ ನೋಡಲು ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ಎರಡು ಕೆ.ಎಸ್.ಆರ್.ಪಿ ವಾಹನಗಳನ್ನು ಹಾಕಿ ಬಂದೋ ಬಸ್ತ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News