ದೇಶದಲ್ಲಿ 100 ಕೋಟಿ ಅಕ್ರಮ ವಲಸಿಗರಿದ್ದಾರೆ ಎಂದ ಅಮಿತ್ ಶಾ!

Update: 2018-09-24 09:10 GMT

ಹೊಸದಿಲ್ಲಿ, ಸೆ.24: ಅಕ್ರಮ ವಲಸಿಗರು ದೇಶ ಪ್ರವೇಶಿಸಿ ಗೆದ್ದಲಿನಂತೆ ದೇಶವನ್ನು ತಿನ್ನುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ರಾಮಲೀಲಾ ಮೈದಾನದಲ್ಲಿ ದಿಲ್ಲಿ ಬಿಜೆಪಿ ಆಯೋಜಿಸಿದ್ದ ಪೂರ್ವಾಂಚಲ್ ಮಹಾಕುಂಭ್ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದರು. ಇಬ್ಬರೂ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ವಲಸಿಗರ ಪರವಾಗಿ ಮಾತನಾಡುತ್ತಿದ್ದಾರೆಂದರು. ಅಸ್ಸಾಂನ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸುವಂತೆಯೂ ಅವರು ರಾಹುಲ್ ಮತ್ತು ಕೇಜ್ರಿವಾಲ್ ಅವರನ್ನು ಆಗ್ರಹಿಸಿದ್ದಾರೆ.

“ದಿಲ್ಲಿಯಲ್ಲಿರುವ ಅಕ್ರಮ ವಲಸಿಗರ ಬಗ್ಗೆ ನಿಮಗೆ ಏನೂ ಸಮಸ್ಯೆಯಿಲ್ಲವೇ?, ಅವರನ್ನು ಹೊರ ಹಾಕಬೇಕೇ ಬೇಡವೇ?, 100 ಕೋಟಿ ನುಸುಳುಕೋರರು ದೇಶ ಪ್ರವೇಶಿಸಿ ಅದನ್ನು ಗೆದ್ದಲಿನಂತೆ ತಿನ್ನುತ್ತಿದ್ದಾರೆ. ಅವರನ್ನು ಹೊರಹಾಕಬೇಕೇ ಬೇಡವೇ?, ಈ ಬಗ್ಗೆ ನಾವು ಮಾತನಾಡಲು ಆರಂಭಿಸಿದಾಗ ರಾಹುಲ್ ಗಾಂಧಿ ಮತ್ತಿತರರು ಕಾಗೆಯಂತೆ ಕರೆಯಲು ಆರಂಭಿಸುತ್ತಾರೆ. ಅವರು ನಮ್ಮ ದೇಶ ಪ್ರವೇಶಿಸಿ ಬಾಂಬುಗಳನ್ನೆಸೆದು ಮುಗ್ಧ ನಾಗರಿಕರನ್ನು ಕೊಲ್ಲುತ್ತಿದ್ದಾರೆ. ನಮ್ಮ ಜನರ ಮಾನವ ಹಕ್ಕುಗಳನ್ನು ನಾವು ರಕ್ಷಿಸಬೇಡವೇ?'' ಎಂದು ಅಮಿತ್ ಶಾ ಪ್ರಶ್ನಿಸಿದರು.

ಕೇಜ್ರಿವಾಲ್ ಕೇವಲ ಸುಳ್ಳು ಹೇಳುತ್ತಿದ್ದಾರೆ ಹಾಗೂ ಯಾವುದೇ ಕೆಲಸ ಮಾಡುತ್ತಿಲ, ದಿಲ್ಲಿಯ ಅಭಿವೃದ್ಧಿಗೆ ಅವರಲ್ಲಿ ನೀಲ ನಕಾಶೆಯಿಲ್ಲ, ಅವರ ಪಕ್ಷ ಕೇವಲ ಪ್ರತಿಭಟನೆಯ ರಾಜಕೀಯ ಮಾಡುತ್ತಿದೆ ಎಂದೂ ಶಾ ಆರೋಪಿಸಿದರು.

ಶಾ ಅವರ ಆರೋಪಗಳಿಗೆ ಟ್ವೀಟ್ ಮುಖಾಂತರ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಬಿಜೆಪಿ ಅಧ್ಯಕ್ಷರಿಗೆ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಚರ್ಚೆಗೆ ಬರುವಂತೆ ಸವಾಲೆಸೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News