ಬಿಜೆಪಿಯಿಂದ ಸರಕಾರಕ್ಕೆ ಅಡ್ಡಗಾಲು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

Update: 2018-09-24 11:45 GMT

ಚಿತ್ರದುರ್ಗ, ಸೆ.24: ರಾಜ್ಯದಲ್ಲಿ ಜನತಾಂತ್ರಿಕವಾಗಿ ಸರಕಾರ ರಚನೆಯಾದ ದಿನದಿಂದ ಬಿಜೆಪಿ ಅಪಸ್ವರ ಎತ್ತುತ್ತಿದೆ. ಸರಕಾರವನ್ನು ಕೆಲಸ ಮಾಡಲು ಬಿಡದೆ ಅಡ್ಡಗಾಲು ಹಾಕುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.

ಚಿತ್ರದುರ್ಗದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಕ್ಕೆ ಸಲಹೆಗಳನ್ನ ಕೊಡುವ ಬದಲು ಕೇವಲ ಟೀಕೆ ಮಾಡುವುದರಲ್ಲೇ ವಿರೋಧ ಪಕ್ಷವಾದ ಬಿಜೆಪಿ ನಿರತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಡಗಿನ ನೆರೆ ಹಾಗೂ ಚಿತ್ರದುರ್ಗದಲ್ಲಿನ ಬರಕ್ಕೆ ಸಂಬಂಧಿಸಿ ಕೇಂದ್ರದಿಂದ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಕೊಡಿಸುವ ಕೆಲಸವನ್ನು ರಾಜ್ಯ ಬಿಜೆಪಿ ಮಾಡಿಲ್ಲ.

ಬಿಜೆಪಿಯವರದ್ದು ಮನುಷ್ಯತ್ವ ಇಲ್ಲದ ರಾಜಕೀಯ ಎಂದು ವಿಶ್ವನಾಥ್ ಟೀಕಿಸಿದರು.
 

ಯಾವುದೇ ಗೊಂದಲವಿಲ್ಲ
ಜೆಡಿಎಸ್-ಕಾಂಗ್ರೆಸ್‌ನಲ್ಲ್ಲಿ ಯಾವುದೇ ಗೊಂದಲಗಳಿಲ್ಲ. ಅದೆಲ್ಲವೂ ಕೆಲವು ಮಾಧ್ಯಮಗಳ ಸೃಷ್ಟಿ. ಕಾಂಗ್ರೆಸ್‌ನ ಯಾವುದೇ ಶಾಸಕರು ಎಲ್ಲೂ ಹೋಗಿಲ್ಲ ಎಂದ ವಿಶ್ವನಾಥ್, ಬಿಜೆಪಿ ಬಹಳ ಸರಕಾರ ರಚಿಸುವ ಅರ್ಜೆಂಟಿನಲ್ಲಿದೆ ಎಂದು ವ್ಯಂಗ್ಯವಾಡಿದರು.

ಒಂದು ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯ ಗೊಂದಲಗಳು ಮೂಲೆ ಸೇರಿವೆ. ಲೋಕಸಭೆ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಹೋಗಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ, ಮುಖಂಡರಾದ ಮುತ್ತಣ್ಣ, ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News