ಮುಳ್ಳಯ್ಯನಗಿರಿ ಶ್ರೇಣಿಯಲ್ಲಿ ಜೆಸಿಬಿ ಬಳಸಿ ರಸ್ತೆ ಅಗಲೀಕರಣ: ಆರೋಪ

Update: 2018-09-24 13:02 GMT

ಚಿಕ್ಕಮಗಳೂರು, ಸೆ.24: ಪಶ್ಚಿಮಘಟ್ಟದ ಮುಳ್ಳಯ್ಯನಗಿರಿ, ಸೀತಾಳ್ಳಯ್ಯನಗಿರಿ ರಸ್ತೆ ಅಗಲೀಕರಣ ನೆಪದಲ್ಲಿ ಶೋಲಾ ಅರಣ್ಯ, ಅಪರೂಪದ ಮರ ಗಿಡಗಳು ಮತ್ತು ಹುಲ್ಲುಗಾವಲನ್ನು ಜೆ.ಸಿ.ಬಿ ಯಂತ್ರಗಳನ್ನು ಬಳಸಿ ನಾಶಮಾಡಲಾಗುತ್ತಿದೆ. ಈ ಕೂಡಲೇ ಈ ಅವೈಜ್ಞಾನಿಕ ರಸ್ತೆ ಕಾಮಗಾರಿ ಮತ್ತು ಅರಣ್ಯೇತರ ಚಟುವಟಿಕೆಯನ್ನು ನಿಲ್ಲಿಸಬೇಕೆಂದು ಭದ್ರಾ ವೈಲ್ಡ್‍ಲೈಫ್ ಕನ್ಸರ್‍ವೇಷನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟೀ ಡಿ.ವಿ. ಗಿರೀಶ್, ವೈಲ್ಡ್‍ಕ್ಯಾಟ್-ಸಿ ಸಂಸ್ಥೆಯ ಶ್ರೀದೇವ್ ಹುಲಿಕೆರೆ, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವಿರೇಶ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುಳ್ಳಯ್ಯನಗಿರಿ ಶ್ರೇಣಿಯು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಶೋಲಾ ಕಾಡು ಸೇರಿದಂತೆ ವೈವಿಧ್ಯಮಯ ಪ್ರದೇಶವಾಗಿದ್ದು, ಉತ್ತಮ ಅರಣ್ಯ ಸಂಕೀರ್ಣತೆಯಿಂದ ಕೂಡಿದೆ. ಪದೇ ಪದೇ ರಸ್ತೆ ಅಗಲೀಕರಣ ನೆಪದಲ್ಲಿ ಇಲ್ಲಿನ ಪರಿಸರವನ್ನು ಮತ್ತು ಅರಣ್ಯವನ್ನು ನಾಶಮಾಡುತ್ತಿರುವುದು ಸರಿಯಲ್ಲ.  ಅವೈಜ್ಞಾನಿಕವಾಗಿ ರಸ್ತೆ ಅಗಲೀಕರಣ ಮಾಡುವುದು, ಬೆಟ್ಟ ಪ್ರದೇಶಗಳನ್ನು ಬಗೆದು ರಸ್ತೆ ವಿಸ್ತರಣೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಗಿರಿ ಶ್ರೇಣಿಯಲ್ಲಿ ವ್ಯಾಪಕ ಭೂ ಕುಸಿತ ಉಂಟಾಗಬಹುದು. ಇದಕ್ಕೆ ಜಿಲ್ಲಾಡಳಿತವೇ ನೇರ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಈಗಾಗಲೇ ಗಿರಿಶ್ರೇಣಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿರುವ ಹಲವು ಉದಾಹರಣೆಗಳು ಕಣ್ಣಿನ ಮುಂದಿವೆ. ಇಷ್ಟಾದರೂ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ಪದೇ ಪದೇ ಮುಳ್ಳಯ್ಯನಗಿರಿಯಂತ ಸೂಕ್ಷ್ಮ ಪ್ರದೇಶದಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ಗಿರಿ ಶ್ರೇಣಿಯ ಪ್ರದೇಶವನ್ನು ಹಾಳುಗೆಡವುತ್ತಿರುವುದು ಖಂಡನೀಯ. ಈಗ ಮಾಡುತ್ತಿರುವ ಕಾಮಗಾರಿಗಳನ್ನು ನಿಲ್ಲಿಸಿ ಇರುವ ರಸ್ತೆಯನ್ನೆ ಸುಧಾರಿಸಿದರೆ ಒಳಿತು. ಈಗಾಗಲೇ ಶೋಲಾ ಕಾಡು ಮತ್ತು ರಸ್ತೆ ಬದಿಯ ಮರಗಿಡಗಳು ನಾಶವಾಗಿರುವುದರಿಂದ ಅರಣ್ಯ ಇಲಾಖೆ ಗಮನ ಹರಿಸಿ ಅವುಗಳ ಸಂರಕ್ಷಣೆಗೆ ಮುಂದಾಗಬೇಕಿದೆ. ರಸ್ತೆ ಅಗಲೀಕರಣ ನೆಪದಲ್ಲಿ ಅರಣ್ಯೇತರ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತವಾಗಲೀ, ಲೋಕೋಪಯೋಗಿ ಇಲಾಖೆಯಾಗಲೀ ಗಿರಿ ಶ್ರೇಣಿಯಲ್ಲಿ ರಸ್ತೆ ಅಗಲೀಕರಣದಂತ ಅವೈಜ್ಞಾನಿಕ ಕಾಮಗಾರಿಗಳನ್ನು ಶಾಶ್ವತವಾಗಿ ಕೈಬಿಟ್ಟು, ಗಿರಿ ಪ್ರದೇಶದ ಸಂರಕ್ಷಣೆಗೆ ಒತ್ತು ನೀಡಬೇಕಾಗಿದೆ. ಇಲ್ಲದಿದ್ದಲ್ಲಿ ಕೊಡಗು ಜಿಲ್ಲೆಯ ಬೆಟ್ಟಶ್ರೇಣಿಗಳಲ್ಲಿ ಉಂಟಾದ ಭೂ ಕುಸಿತ ಪ್ರಕರಣಗಳು ಇಲ್ಲಿಯೂ ಸಹ ಉಂಟಾಗಬಹುದು. ಈ ನಿಟ್ಟಿನಲ್ಲಿ ಗಿರಿಶ್ರೇಣಿಯಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆ ಕೈಗೊಳ್ಳುವ ಮುನ್ನ ಅದರ ಸಾಧಕ ಬಾಧಕವನ್ನು ಪರಿಶೀಲಿಸಬೇಕೆಂದು ಜಿಲ್ಲಾಡಳಿತವನ್ನು ಅವರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News