ಕಣ್ಮನ ಸೆಳೆದ ಸೂರ್ಯನ ಸುತ್ತ ವೃತ್ತಾಕಾರದ ಕಾಮನಬಿಲ್ಲು: ಖಗೋಳ ವಿಸ್ಮಯಕ್ಕೆ ಬೆರಗಾದ ಶಿವಮೊಗ್ಗ ನಾಗರಿಕರು

Update: 2018-09-24 17:37 GMT

ಶಿವಮೊಗ್ಗ, ಸೆ.24: ಆಕಾಶದಲ್ಲಿ ಸೋಮವಾರ ಸೂರ್ಯನ ಸುತ್ತ ಗೋಚರಿಸಿದ ಅಪರೂಪದ ‘ವೃತ್ತಾಕಾರದ ಕಾಮನಬಿಲ್ಲು’ (ವೈಜ್ಞಾನಿಕ ಹೆಸರು: 22 ಡಿಗ್ರಿ ಹ್ಯಾಲೋ) ಶಿವಮೊಗ್ಗ ನಗರದ ನಾಗರಿಕರನ್ನು ಅಕ್ಷರಶಃ ಚಕಿತಗೊಳಿಸಿತು. ಈ ಖಗೋಳ ವಿಸ್ಮಯವು ಅಚ್ಚರಿ, ಬೆರಗಿನ ಜೊತೆಗೆ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಸರಿಸುಮಾರು ಬೆಳಗ್ಗೆ 11:40ರಿಂದಲೇ ಸೂರ್ಯನ ಸುತ್ತ ‘ವೃತ್ತಾಕಾರದ ಕಾಮನಬಿಲ್ಲು’ ನಾಗರಿಕರಿಗೆ ಗೋಚರಿಸಲಾರಂಭಿಸಿತ್ತು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಈ ಖಗೋಳ ಚಮತ್ಕಾರ ಶಿವಮೊಗ್ಗ ನಗರದಲ್ಲಿ ಕಂಡುಬಂದಿತು. ಮಧ್ಯಾಹ್ನ 1:15ರ ನಂತರ ‘ವೃತ್ತಾಕಾರದ ಕಾಮನಬಿಲ್ಲು’ ಕ್ರಮೇಣ ಮರೆಯಾಯಿತು.

ಸಂಚಲನ: ಸೂರ್ಯನ ಸುತ್ತ ‘ವೃತ್ತಾಕಾರದ ಕಾಮನಬಿಲ್ಲು’ ಆವರಿಸಿದ್ದ ಸಂಗತಿಯು ನಗರದ ನಾಗರಿಕ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಬಹುತೇಕ ನಗರದೆಲ್ಲೆಡೆ ನಾಗರಿಕರು ಆಕಾಶದತ್ತ ಚಿತ್ತ ನೆಟ್ಟು, ಸೂರ್ಯನ ಸುತ್ತ ಆವರಿಸಿದ್ದ ಕಾಮನಬಿಲ್ಲು ವೀಕ್ಷಿಸುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಈ ಅಪರೂಪದ ವಿದ್ಯಮಾನ ವೀಕ್ಷಿಸುವಂತೆ ಕೆಲವರು ತಮ್ಮ ಸ್ನೇಹಿತರು, ಬಂಧುಗಳು, ಕುಟುಂಬ ಸದಸ್ಯರಿಗೆ ಫೋನ್ ಮೂಲಕ ಕರೆ ಮಾಡಿ, ಸಂದೇಶ ರವಾನಿಸಿ ತಿಳಿಸುತ್ತಿದ್ದರು.

ಸಾಮಾಜಿಕ ಸಂಪರ್ಕ ಜಾಲತಾಣ ವಾಟ್ಸ್ ಆ್ಯಪ್‌ನಲ್ಲಂತೂ ಈ ಕುರಿತಂತೆ ಭಾರೀ ಸಂಖ್ಯೆಯ ಫೋಟೋ-ಸಂದೇಶಗಳ ವಿನಿಮಯವಾಯಿತು. ವೈರಲ್ ಆಗಿತ್ತು. ನೆತ್ತಿ ಸುಡುವ ಬಿಸಿಲಿನ ನಡುವೆಯೂ ನಾಗರಿಕರು ಖಗೋಳ ವಿಸ್ಮಯವನ್ನು ಕಣ್ತುಂಬಿಕೊಂಡರು.

ಶಾಲೆಗಳಲ್ಲಿ ಪಾಠ: ಹಲವು ಶಾಲಾ-ಕಾಲೇಜುಗಳಲ್ಲಿ, ವಿದ್ಯಾರ್ಥಿಗಳನ್ನು ಕೊಠಡಿಯಿಂದ ಹೊರ ಕರೆತಂದು ಸೂರ್ಯನ ಸುತ್ತ ಆವರಿಸಿದ್ದ ವೃತ್ತಾಕಾರದ ಕಾಮನಬಿಲ್ಲನ್ನು ಶಿಕ್ಷಕರು ತೋರಿಸುತ್ತಿದ್ದ ದೃಶ್ಯ ಕಂಡುಬಂದಿತು. ‘22 ಡಿಗ್ರಿ ಹ್ಯಾಲೋ’ಗೆ ಕಾರಣವಾಗುವ ಅಂಶಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾಹಿತಿ ನೀಡುತ್ತಿದ್ದರು.

ಕುತೂಹಲ: ಸೂರ್ಯನ ಸುತ್ತ ಕಂಡುಬಂದ ಉಂಗುರದ ರೀತಿಯ ಬಣ್ಣದ ಪ್ರಭೆಗೆ ಕಾರಣವೇನೆಂಬ ಕುತೂಹಲ ಬಹುತೇಕ ನಾಗರಿಕರಲ್ಲಿ ಮನೆ ಮಾಡಿತ್ತು. ಕೆಲವರು ಸೂರ್ಯ ಗ್ರಹಣವೇನಾದರೂ ಸಂಭವಿಸಿದೆಯಾ? ಎಂಬ ಅನುಮಾನಗಳನ್ನು ಮುಂದಿಡುತ್ತಿದ್ದರು. ಮತ್ತೆ ಕೆಲವರು ಇದಕ್ಕೆ ತಮ್ಮದೇ ಆದ ವಿಶ್ಲೇಷಣೆ ಕೊಡುತ್ತಿದ್ದರು. ಆದರೆ ಬಹುತೇಕ ಜನಸಾಮಾನ್ಯರಿಗೆ ಈ ಖಗೋಳ ವಿಸ್ಮಯದ ಹಿನ್ನೆಲೆಯ ಕುರಿತಂತೆ ಸೂಕ್ತ ಮಾಹಿತಿ ಸಿಗಲಿಲ್ಲ.

ಒಟ್ಟಾರೆ ಶಿವಮೊಗ್ಗ ನಗರದಲ್ಲಿ ಸೋಮವಾರ ಸೂರ್ಯನ ಸುತ್ತ ಕಂಡುಬಂದ ವೃತ್ತಾಕಾರದ ಕಾಮನಬಿಲ್ಲು ಅರ್ಥಾತ್ 22 ಡಿಗ್ರಿ ಹ್ಯಾಲೋ ನಾಗರಿಕ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತು.

ಪ್ರಭೆಗೆ ವೈಜ್ಞಾನಿಕ ಕಾರಣವೇನು?

ಸೂರ್ಯನ ಕಿರಣಗಳು ಭೂಮಿಗೆ ಹಾಯ್ದು ಬರುವಾಗ ಹಾಗೂ ವಾತಾವರಣದಲ್ಲಿ ನೀರಿನ ಹನಿಗಳು ಹೆಚ್ಚಿದಾಗ, ಬೆಳಕಿನ ಪ್ರತಿಫಲನ ಮತ್ತು ವಕ್ರೀಭವನವಾಗಿ ಸೂರ್ಯನ ಸುತ್ತ ಕಾಮನಬಿಲ್ಲು ಗೋಚರವಾಗುತ್ತದೆ ಎಂದು ಖಗೋಳ ವಿಜ್ಞಾನಿಗಳು ಹೇಳುತ್ತಾರೆ.

‘ಭೂಮಿಯಿಂದ ಸುಮಾರು 20 ಸಾವಿರ ಅಡಿಗಳ ಎತ್ತರದ ವಾತಾವರಣದಲ್ಲಿ (ಟ್ರೆಪೋಸ್ಪಿಯರ್) ಮೋಡದಲ್ಲಿನ ನೀರಿನ ಹನಿಗಳು ಸಾಂದ್ರಗೊಂಡು ಶೈತ್ಯೀಕರಣಗೊಂಡು ಮಂಜಿನ ಹರಳುಗಳಾಗುತ್ತವೆ. ಈ ಗೋಳಾಕಾರದ ಮಂಜಿನ ಹರಳುಗಳ ಮೂಲಕ ಸೂರ್ಯನ ಬಿಳಿಯ ಕಿರಣಗಳು ಹಲವು ಬಾರಿ ಪ್ರತಿಫಲಿಸಿ ವಕ್ರೀಭವನ ಮತ್ತು ಚದುರುವಿಕೆಗೆ ಕಾರಣವಾಗುತ್ತದೆ. ಇದರಿಂದ ಸೂರ್ಯನ ಸುತ್ತ 22 ಡಿಗ್ರಿ ವೃತ್ತಾಕಾರದಲ್ಲಿ ಅದ್ಭುತ ಕಾಮನಬಿಲ್ಲು ಮೂಡುತ್ತದೆ. ಒಮ್ಮೊಮ್ಮೆ ಚಂದ್ರನ ಸುತ್ತಲೂ ಇಂತಹ ಕಾಮನಬಿಲ್ಲು ಕಂಡುಬರುವುದುಂಟು’ ಎಂದು ಖಗೋಳ ತಜ್ಞರು ವಿವರಿಸುತ್ತಾರೆ. ಮಳೆ ಬರುವ ಮುನ್ಸೂಚನೆಯನ್ನು ಇದು ನೀಡುತ್ತದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.

Writer - ಬಿ.ರೇಣುಕೇಶ್

contributor

Editor - ಬಿ.ರೇಣುಕೇಶ್

contributor

Similar News